ಹಾಸನ: ಮೇಕೆಗೆ ನೀರು ಕುಡಿಸಲು ತೆರಳುತ್ತಿದ್ದ ವೃದ್ದೆಯನ್ನು ಕೊಲೆ ಮಾಡಿ ನಂತರ ದೇಹವನ್ನು ಮಣ್ಣಿನಲ್ಲಿ ಹೂತುಹಾಕಿರುವ ಘಟನೆ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಹಾಲ್ತೊರೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಲಕ್ಷ್ಮಮ್ಮ (50) ಕೊಲೆಯಾದ ಮಹಿಳೆ. ನಿನ್ನೆ ಮನೆಯಿಂದ ಜಮೀನಿಗೆ ತೆರಳಿದ್ದ ಮಹಿಳೆ ಮನೆಗೆ ವಾಪಸ್ ಬಂದಿರಲಿಲ್ಲ. ಇಂದು ಗ್ರಾಮಸ್ಥರೆಲ್ಲಾ ಸೇರಿ ಹುಡುಕಾಟ ನಡೆಸುತ್ತಿದ್ದ ವೇಳೆ ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ. ಒಡವೆಗಾಗಿ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ.
Advertisement
ಹಾಲ್ತೊರೆ ಗ್ರಾಮದ ರಂಗೇಗೌಡ ಎಂಬವರ ಪತ್ನಿ ಲಕ್ಷ್ಮಮ್ಮ. ದಂಪತಿಗೆ ಇಬ್ಬರು ಮಕ್ಕಳಿದ್ದು, ಮಗಳನ್ನು ಮದುವೆ ಮಾಡಿಕೊಡಲಾಗಿತ್ತು. ಮಗ ಆಂಧ್ರಪ್ರದೇಶದಲ್ಲಿ ಬೇಕರಿ ಇಟ್ಟುಕೊಂಡಿದ್ದು, ತಾಯಿಗೆ ಸಾಕಷ್ಟು ಚಿನ್ನದ ಒಡವೆಗಳನ್ನು ಮಾಡಿಸಿಕೊಟ್ಟಿದ್ದ. ಲಕ್ಷ್ಮಮ್ಮ ಪ್ರತಿನಿತ್ಯ ಪತಿಯೊಂದಿಗೆ ಮೇಕೆ ಮೇಯಿಸಲು ಜಮೀನಿನ ಬಳಿ ತೆರಳುತ್ತಿದ್ದರು. ನಿನ್ನೆ ಸಂಬಂಧಿಕರ ಮನೆಯಲ್ಲಿ ಆರತಿ ಕಾರ್ಯಕ್ರಮ ಇದ್ದಿದ್ದರಿಂದ ರಂಗೇಗೌಡ ಒಬ್ಬರೇ ಮೇಕೆಯನ್ನು ಜಮೀನಿನ ಬಳಿ ಕಟ್ಟಿ ಬಂದಿದ್ದರು. ಮಗ ಕೊಡಿಸಿದ್ದ ಒಡವೆಗಳನ್ನು ಹಾಕಿಕೊಂಡು ಲಕ್ಷ್ಮಮ್ಮ ಕಾರ್ಯಕ್ರಮಕ್ಕೆ ತೆರಳಿದ್ದರು. ಅಲ್ಲಿಂದ ಬಂದವರೇ ಮೇಕೆಗೆ ನೀರು ಕುಡಿಸಲು ಜಮೀನಿಗೆ ತೆರಳಿದ್ದಾರೆ.
Advertisement
Advertisement
ಮಧ್ಯಾಹ್ನ ಲಕ್ಷ್ಮಮ್ಮನ ಸಹೋದರಿ ತಮ್ಮ ಜಮೀನಿನ ಬಳಿ ಹೋದ ವೇಳೆ ಮೇಕೆ ಮಾತ್ರ ಕಾಣಿಸಿದೆ. ಸುತ್ತಮುತ್ತ ಹುಡುಕಾಟ ನಡೆಸಿ, ಲಕ್ಷ್ಮಮ್ಮ ಸಿಗದಿದ್ದಾಗ ರಂಗೇಗೌಡರಿಗೆ ಫೋನ್ ಮಾಡಿ ತಿಳಿಸಿದ್ದಾರೆ. ಜಮೀನಿನ ಬಳಿ ಬಂದ ರಂಗೇಗೌಡ ಎಲ್ಲೋ ಹೋಗಿರಬಹುದು ಬರುತ್ತಾರೆ ಎಂದು ಕಾದಿದ್ದಾರೆ. ರಾತ್ರಿಯಾದರೂ ಮನೆಗೆ ಮರಳದ ಕಾರಣ ಗ್ರಾಮಸ್ಥರೆಲ್ಲಾ ಸೇರಿ ಜಮೀನಿನ ಬಳಿ ಹುಡುಕಾಟ ನಡೆಸಿದರೂ ಲಕ್ಷ್ಮಮ್ಮ ಪತ್ತೆಯಾಗಿಲ್ಲ. ಇಂದು ಬೆಳಿಗ್ಗೆ ಪುನಃ ಹುಡುಕಾಟ ನಡೆಸುವ ವೇಳೆ ಮಾವಿನ ತೋಪಿನಲ್ಲಿ ಕೊಲೆ ಮಾಡಿ ಹೂತುಹಾಕಿರುವುದು ಪತ್ತೆಯಾಗಿದೆ.
Advertisement
ರಂಗೇಗೌಡರ ಕುಟುಂಬಸ್ಥರು ತುಂಬಾ ಒಳ್ಳೆಯವರು. ಎಲ್ಲರೊಂದಿಗೂ ನಗುನಗುತ್ತಲೇ ಮಾತನಾಡುತ್ತಿದ್ದರು. ಯಾರೊಂದಿಗೂ ಜಗಳವಾಡಿದವರಲ್ಲ. ಪ್ರತಿದಿನ ದಂಪತಿ ಒಟ್ಟಿಗೆ ಜಮೀನ ಬಳಿ ತೆರಳುತ್ತಿದ್ದರು. ನಿನ್ನೆ ಮೈಮೇಲೆ ಚಿನ್ನದ ಒಡವೆಗಳನ್ನು ಹಾಕಿಕೊಂಡೆ ಮೇಕೆಗೆ ನೀರು ಕುಡಿಸಲು ಹೋಗುತ್ತಿದ್ದ ವೇಳೆ ಯಾರೋ ದುಷ್ಕರ್ಮಿಗಳು ನಾಲೆ ಪಕ್ಕದಲ್ಲಿ ಪುಟ್ಟಮ್ಮರನ್ನು ಕೊಲೆ ಮಾಡಿ ನಂತರ ಚಿಕ್ಕ ಗುಂಡಿ ತೆಗೆದು ಹೂತಿದ್ದಾರೆ. ಒಡವೆಗಳಿಗಾಗಿಯೇ ಕೊಲೆ ಮಾಡಿರಬಹುದು ಎಂದು ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ಶ್ವಾನದಳ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೇಲೂರು ತಹಸೀಲ್ದಾರ್ ನಟೇಶ್ ಹಾಗೂ ಉಪವಿಭಾಗಾಧಿಕಾರಿ ಸಮ್ಮುಖದಲ್ಲಿ ಶವ ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಹಾಸನ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ. ಹಳೇಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ.