ನವದೆಹಲಿ: ಮಾನ್ಸೂನ್ ಬಳಿಕ ಭಾರತದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2020ರ ಆವೃತ್ತಿ ಆಯೋಜಿಸುವ ಸಾಧ್ಯತೆ ಇದೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸಿಇಒ ರಾಹುಲ್ ಜೋಹ್ರಿ ಹೇಳಿದ್ದಾರೆ.
ವಿಶ್ವ ಕ್ರಿಕೆಟಿನ ಅತ್ಯುತ್ತಮ ಆಟಗಾರರು ಐಪಿಎಲ್ ಆಡುತ್ತಾರೆ. ಈ ಲೀಗ್ ಅಭಿಮಾನಿಗಳನ್ನು ವಿಶೇಷವಾಗಿ ಆಕರ್ಷಿಸುತ್ತದೆ. ಕೇಂದ್ರ ಸರ್ಕಾರ ಕೈಗೊಳ್ಳುವ ನಿರ್ಣಯದ ಮೇಲೆ ನಮ್ಮ ನಿರ್ಧಾರ ತೀರ್ಮಾನವಾಗುತ್ತದೆ. ಕ್ರಮಬದ್ಧ ವಿಧಾನದಲ್ಲಿ ಲೀಗ್ ಆಯೋಜಿಸುವ ಅಗತ್ಯ ದೇಶದಲ್ಲಿ ನಿರ್ಮಾಣವಾಗಿದೆ. ಲಾಕ್ಡೌನ್ ಮುಗಿಯುತ್ತಿದಂತೆ ಮಾನ್ಸೂನ್ ಆರಂಭವಾಗುತ್ತದೆ. ಆ ಬಳಿಕವೇ ಐಪಿಎಲ್ ಕುರಿತು ಯೋಚಿಸಬೇಕಿದೆ. ಪ್ರೇಕ್ಷಕರಿಲ್ಲದೇ ಐಪಿಎಲ್ ನಿರ್ವಹಿಸುವುದರಿಂದ ಉಂಟಾಗುವ ನಷ್ಟ ಕಡಿಮೆ ಎಂದು ಮಾಧ್ಯಮಗಳೊಂದಿಗೆ ಜೋಹ್ರಿ ಹೇಳಿದ್ದಾರೆ.
Advertisement
Advertisement
ಮಾರ್ಚ್ 29ರಂದು ಪ್ರಾರಂಭವಾಬೇಕಿದ್ದ ಐಪಿಎಲ್ 2020 ಆವೃತ್ತಿ ಕೊರೊನಾ ಕಾರಣದಿಂದ ಮುಂದೂಡಲಾಗಿತ್ತು. ಐಪಿಎಲ್ ಆವೃತ್ತಿ ಆಯೋಜಿಸಲು ಕನಿಷ್ಠ 2 ತಿಂಗಳ ಅವಧಿ ಅಗತ್ಯವಿದ್ದು, ದೇಶದಲ್ಲಿ ವಿಧಿಸಲಾಗಿರುವ ಲಾಕ್ಡೌನ್ ಮೇ 31ಕ್ಕೆ ಮುಕ್ತಾಯವಾಗಲಿದೆ. ಆ ಬಳಿಕ ಮತ್ತೆ ಲಾಕ್ಡೌನ್ ಅವಧಿ ಹೆಚ್ಚಿಸಲಾಗುತ್ತಾ? ಎಂಬ ಬಗ್ಗೆ ಯಾವುದೇ ಸ್ಪಷ್ಟತೆ ಲಭಿಸಿಲ್ಲ. ಇತ್ತ ಭಾರತದಲ್ಲಿ ಜೂನ್ನಿಂದಲೇ ಮಳೆ ಆರಂಭವಾಗುವ ಸೂಚನೆ ಲಭಿಸುತ್ತಿದ್ದು, ಸೆಪ್ಟೆಂಬರ್ ವರೆಗೂ ಮಳೆ ಬೀಳುವ ಸಾಧ್ಯತೆ ಇದೆ. ಪರಿಣಾಮ ಅಕ್ಟೋಬರ್-ನವೆಂಬರ್ ನಡುವಿನ ಅವಧಿಯಲ್ಲಿ ಮಾತ್ರ ಐಪಿಎಲ್ 2020ರ ಆವೃತ್ತಿ ನಿರ್ವಹಿಸಲು ಅವಕಾಶವಿದೆ. ಇದೇ ಸಮಯದಲ್ಲಿ ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್ 18 ರಿಂದ ನವೆಂಬರ್ 15ರ ವರೆಗೂ ಟಿ20 ವಿಶ್ವಕಪ್ ನಡೆಯಲಿದೆ. ಆದ್ದರಿಂದ ಟಿ20 ವಿಶ್ವಕಪ್ ಮುಂದೂಡಿದರೆ ಮಾತ್ರ ಐಪಿಎಲ್ ನಿರ್ವಹಿಸುವ ಅವಕಾಶವಿದೆ. ಮೇ28ಕ್ಕೆ ಟಿ20 ವಿಶ್ವಕಪ್ ಆಯೋಜಿಸುವ ಕುರಿತು ಐಸಿಸಿ ಪ್ರಮುಖ ನಿರ್ಣಯ ಕೈಗೊಳ್ಳಲಿದೆ.