ಶಿವಮೊಗ್ಗ: ಕಳೆದ ನಾಲ್ಕು ದಿನಗಳಿಂದ ಶಿವಮೊಗ್ಗ ಜಿಲ್ಲೆಯಲ್ಲೂ ಧಾರಾಕಾರ ಮಳೆಯಾಗುತ್ತಿದ್ದು, ಮಳೆಯಿಂದಾಗಿ ಜಿಲ್ಲೆಯಲ್ಲಿ ಹಲವು ಅವಾಂತರ ಸೃಷ್ಟಿಯಾಗಿದೆ. ಮಳೆಗೆ ಜಿಲ್ಲೆಯಲ್ಲಿ 65ಕ್ಕೂ ಹೆಚ್ಚು ಮನೆಗಳು ಕುಸಿದು ಬಿದ್ದಿದ್ದು, ಮನೆ ಕಳೆದುಕೊಂಡ ಸಂತ್ರಸ್ತರಿಗೆ ತುರ್ತು ಪರಿಹಾರ ನೀಡುವಂತೆ ಸಚಿವ ಈಶ್ವರಪ್ಪ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
Advertisement
ಮಳೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ, ಮಳೆಗೆ ಈಗಾಗಲೇ ಮನೆ ಕಳೆದುಕೊಂಡು ಸಂತ್ರಸ್ತರಾಗಿದ್ದಾರೆ. ಸಂತ್ರಸ್ತ ಕುಟುಂಬಗಳಿಗೆ ಶೀಘ್ರ ಪರಿಹಾರ ನೀಡುವ ಜೊತೆಗೆ ಆ ಸಂತ್ರಸ್ತರು ಯಾವುದೇ ಕಾರಣಕ್ಕೂ ಬಿದ್ದ ಮನೆಯಲ್ಲಿಯೇ ವಾಸಿಸದಂತೆ ಕ್ರಮ ವಹಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
Advertisement
Advertisement
ಅಲ್ಲದೆ ಜಿಲ್ಲೆಯಲ್ಲಿ ಸುರಿದ ಗಾಳಿ ಮಳೆಗೆ ಇದೂವರೆಗೆ 3,500 ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. 60 ವಿದ್ಯುತ್ ಟ್ರಾನ್ಸ್ ಫಾರ್ಮರ್ ಗಳು ಹಾನಿಯಾಗಿವೆ. 2361 ಹೆಕ್ಟೇರ್ ಜಮೀನಿನಲ್ಲಿದ್ದ ಬೆಳೆ ಹಾನಿಯಾಗಿದೆ ಎಂದರು.
Advertisement
ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಗೆ ಜಿಲ್ಲೆಯ ಜಲಾಶಯಗಳು ಸಹ ತುಂಬುವ ಹಂತ ತಲುಪಿದ್ದು, ಈಗಾಗಲೇ ಜಲಾಶಯದಿಂದ ನದಿಪಾತ್ರಗಳಿಗೆ ನೀರು ಹರಿಸಲಾಗುತ್ತಿದೆ. ನದಿಪಾತ್ರಗಳಿಗೆ ನೀರು ಹರಿಸುತ್ತಿರುವ ಕಾರಣ ಆ ಭಾಗದ ಜನರು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡುವ ಜೊತೆಗೆ ಆ ಭಾಗದಲ್ಲಿ ಅಧಿಕಾರಿಗಳು ಎಚ್ಚರಿಕೆ ಕಾರ್ಯ ನಿರ್ವಹಿಸುವಂತೆ ಸಚಿವ ಈಶ್ವರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕಳೆದ ಬಾರಿಯ ಮಳೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ಬಾರಿ ಪ್ರವಾಹ ಬಂದು ಅನಾಹುತ ಸಂಭವಿಸಿತ್ತು. ಆದರೆ ಈ ಬಾರಿ ದೇವರ ಕೃಪೆಯಿಂದ ಸದ್ಯ ಅಂತಹ ಪರಿಸ್ಥಿತಿ ನಿರ್ಮಾಣವಾಗಿಲ್ಲ. ಆದರೂ ಅಧಿಕಾರಿಗಳು ಮುಂಜಾಗ್ರತಾ ಕ್ರಮ ವಹಿಸಿ ಎಚ್ಚರಿಕೆಯಿಂದ ತಮ್ಮ ತಮ್ಮ ಕರ್ತವ್ಯ ನಿರ್ವಹಿಸಿ ಎಂದು ಸಚಿವರು ತಿಳಿಸಿದರು.