– ಚಿಕ್ಕೋಡಿ ಉಪ ವಿಭಾಗದಲ್ಲಿ ಪ್ರವಾಹ ಸೃಷ್ಟಿ
ಚಿಕ್ಕೋಡಿ/ಬೆಳಗಾವಿ: ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ಗ್ರಾಮಗಳಿಗೆ ನೀರು ನುಗ್ಗಿದ್ದು, ವೇದಗಂಗಾ ನದಿ ತುಂಬಿ ಹರಿಯುತ್ತಿದೆ. ಅಲ್ಲದೆ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4 ಜಲಾವೃತವಾಗಿದ್ದು, ಸಂಚಾರ ಸ್ಥಗಿತಗೊಂಡಿದೆ.
Advertisement
ಜಿಲ್ಲೆಯ ನಿಪ್ಪಾಣಿ ತಾಲೂಕಿನ ಹುನ್ನರಗಿ ಗ್ರಾಮಕ್ಕೆ ನೀರು ನಿಗ್ಗಿದ್ದು, ಹುನ್ನರಗಿ ಗ್ರಾಮದ ಮನೆಗಳು, ದೇವಸ್ಥಾನ ಜಲಾವೃತವಾಗಿವೆ. ಸ್ಥಳೀಯರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಜಿಲ್ಲಾಡಳಿತ ಹರಸಾಹಸಪಡುತ್ತಿದೆ. ವೇದಗಂಗಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ನಿಪ್ಪಾಣಿ ತಾಲೂಕಿನ ಕೋಡಣಿ ಗ್ರಾಮ ಜಲಾವೃತವಾಗಿದೆ. 200ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿದ್ದು, ಜನರನ್ನು ಸ್ಥಳಾಂತರಿಸಲು ಜಿಲ್ಲಾಡಳಿತ ಹರಸಾಹಸಪಡುತ್ತಿದೆ.
Advertisement
Advertisement
ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸ್ಥಗಿತ:
ಮಹಾರಾಷ್ಟ್ರ ಹಾಗೂ ಕರ್ನಾಟಕದ ಗಡಿ ಭಾಗದಲ್ಲಿ ಅಪಾರ ಪ್ರಮಾಣದಲ್ಲಿ ಮಳೆಯಾದ ಪರಿಣಾಮ ವೇದ ಗಂಗಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು, ಪುಣೆ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರ ಸಂಚಾರ ಸ್ಥಗಿತಗೊಂಡಿದೆ.
Advertisement
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಯಮಗರಣಿ ಗ್ರಾಮದ ಬಳಿ ಇರುವ ವೇದಗಂಗಾ ನದಿ ನೀರು ರಾಷ್ಟ್ರೀಯ ಹೆದ್ದಾರಿಯನ್ನು ಆವರಿಸಿದ್ದು, ಸಂಚಾರ ಸ್ಥಗಿತಗೊಂಡಿದೆ. ನಿತ್ಯ ಸಾವಿರಾರು ವಾಹನಗಳು ಓಡಾಡುವ ರಾಷ್ಟ್ರೀಯ ಹೆದ್ದಾರಿ 4 ಇದಾಗಿದೆ. ನದಿ ನೀರಿನಲ್ಲಿ ಒಂದು ಲಾರಿ, ಓಮಿನಿ ಸಿಲುಕಿದ್ದು, ಓಮಿನಿಯಲ್ಲಿದ್ದ 11 ಜನರನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಮಹಾರಾಷ್ಟ್ರದಿಂದ ಕರ್ನಾಟಕ ಮೂಲಕ ತಮಿಳುನಾಡು ಹೋಗುತ್ತಿದ್ದ ಲಾರಿಯಲ್ಲಿ ಸಿಲುಕಿದ್ದ ಓರ್ವ ಚಾಲಕನನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ.
ಕುಡಚಿ ಸೇತುವೆ ಜಲಾವೃತ:
ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶ ಹಾಗೂ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಕೃಷ್ಣಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, 1.91 ಲಕ್ಷ ಕ್ಯೂಸೆಕ್ಸ್ ಗೂ ಅಧಿಕ ನೀರು ನದಿಗೆ ಹರಿದು ಬರುತ್ತಿದೆ. ನೀರು ಹೆಚ್ಚಳದಿಂದ ರಾಜ್ಯ ಹೆದ್ದಾರಿ ಸಂಪರ್ಕ ಕಡಿತಗೊಂಡಿದ್ದು, ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ-ಉಗಾರ ಮದ್ಯದ ಸೇತುವೆ ಜಲಾವೃತವಾಗಿದೆ.
ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಮಠಗಲ್ಲಿ ಸಂಪೂರ್ಣ ಜಲಾವೃತವಾಗಿದೆ. 150ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗಿದ್ದು, ಹೀರಣ್ಯಕೇಶಿ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ನದಿ ತೀರದ ಐತಿಹಾಸಿಕ ಶಂಕರಲಿಂಗ ದೇವಸ್ಥಾನ ಜಲಾವೃತವಾಗಿದೆ. ಸ್ಥಳಕ್ಕೆ ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರವಾಹ ಎದುರಿಸಲು ಬೆಳಗಾವಿ ಜಿಲ್ಲಾಡಳಿತ ಸನ್ನದವಾಗಿದೆ ಎಂದಿದ್ದಾರೆ.