ರಾಯಚೂರು: ಜಿಲ್ಲೆಯಲ್ಲಿ ತಡರಾತ್ರಿ ಸುರಿದ ಭಾರಿ ಮಳೆ ಅವಾಂತರ ಸೃಷ್ಟಿಸಿದೆ. ರಾಯಚೂರು ತಾಲೂಕಿನ ಇಡಪನೂರು ಗ್ರಾಮದ ಹಳ್ಳದ ರಸ್ತೆ ನೀರಿನ ರಭಸಕ್ಕೆ ಕೊಚ್ಚಿಹೋಗಿದೆ.
ರಾತ್ರಿ ಪೂರ್ತಿ ಸುರಿದ ಮಳೆಗೆ ರಾಯಚೂರು ನಗರಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಕೊಚ್ಚಿಹೋಗಿರುವುದರಿಂದ ಗ್ರಾಮಸ್ಥರು ಪರದಾಡುವಂತಾಗಿದೆ. ಹಳ್ಳದಲ್ಲಿನ ನೀರಿನ ಹರಿವು ಹೆಚ್ಚಾದ ಹಿನ್ನೆಲೆ ರಭಸಕ್ಕೆ ರಸ್ತೆ ಕೊಚ್ಚಿಹೋಗಿದೆ. ವಾಹನ ಸವಾರರು ಪರದಾಡಿದ್ದಾರೆ.
Advertisement
Advertisement
ಬೈಕ್ ಹೊರತು ಪಡಿಸಿ ಉಳಿದ ವಾಹನಗಳ ಸಂಚಾರ ಬಂದ್ ಮಾಡಲಾಗಿದೆ. 20 ಕಿ.ಮೀ ಸುತ್ತುವರಿದು ಗ್ರಾಮಸ್ಥರು ಓಡಾಡಬೇಕಿದೆ. ಮಳೆ ನಿರಂತರವಾಗಿ ಬಂದರೆ ಸಂಪೂರ್ಣವಾಗಿ ರಸ್ತೆ ಕೊಚ್ಚಿಕೊಂಡು ಹೋಗುವ ಭೀತಿಯಲ್ಲಿ ಗ್ರಾಮಸ್ಥರಿದ್ದಾರೆ. ರಸ್ತೆ ಕೊಚ್ಚಿಹೋದರೂ ಅಧಿಕಾರಿಗಳಾಗಲಿ, ಜನಪ್ರತಿಧಿಗಳಾಗಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.