– ಜಲಪಾತದಲ್ಲಿ ಮಂಜಿನೊಂದಿಗೆ ಶರಾವತಿ ಕಣ್ಣ ಮುಚ್ಚಾಲೆ
ಶಿವಮೊಗ್ಗ: ಕಳೆದ ಒಂದು ವಾರದಿಂದ ಮಲೆನಾಡಿನ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ವಿಶ್ವ ವಿಖ್ಯಾತ ಜೋಗ ಜಲಪಾತ ಮೈದುಂಬಿಕೊಂಡಿದೆ. ಜೋಗ ಜಲಪಾತಕ್ಕೆ ಸಾಕಷ್ಟು ಪ್ರಮಾಣದಲ್ಲಿ ಮಳೆ ನೀರು ಹರಿದು ಬರುತ್ತಿದ್ದು, ಪ್ರಕೃತಿಯ ಸುಂದರ ಮಡಿಲಲ್ಲಿ ಜೋಗ ಜಲಪಾತದಲ್ಲಿ ಶರಾವತಿ ಧುಮ್ಮಿಕ್ಕಿ ಹರಿಯುತ್ತಿದ್ದಾಳೆ. ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದ್ದಾಳೆ.
Advertisement
ಮಲೆನಾಡಿನ ಬೆಟ್ಟ, ಗುಡ್ಡ ಹಸಿರು ಕಾನನದ ನಡುವೆ ಬಳುಕುತ್ತಾ ಹರಿಯುವ ಶರಾವತಿ ನದಿ ಜೋಗದಲ್ಲಿ ಸುಮಾರು 950 ಅಡಿಗಳಿಂದ ಭೋರ್ಗರೆಯುತ್ತಾ ಧುಮ್ಮುಕುವ ದೃಶ್ಯ ರುದ್ರ ರಮಣೀಯ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಅಂಬುತೀರ್ಥದಲ್ಲಿ ಜನಿಸುವ ಶರಾವತಿ ನದಿ, ನಂತರ ಹೊಸನಗರ ತಾಲೂಕಿನ ಮೂಲಕ ಹರಿದು ಸಾಗರ ತಾಲೂಕಿನ ಜೋಗದಲ್ಲಿ ಧುಮ್ಮಿಕ್ಕುವ ಮೂಲಕ ಜಲಪಾತ ಸೃಷ್ಠಿಯಾಗಿದೆ. ಮಳೆಗಾಲದಲ್ಲಿ ಜೋಗ ಜಲಪಾತ ತನ್ನ ನಿಜ ಸೌಂದರ್ಯವನ್ನು ಜಗತ್ತಿಗೆ ಉಣ ಬಡಿಸುತ್ತಾಳೆ. ಸಾಗರ ತಾಲೂಕಿನಲ್ಲಿ ಮಳೆ ಜೋರಾದರೆ ಸಾಕು ಜೋಗ ಜಲಪಾತ ಕಳೆ ಕಟ್ಟುತ್ತದೆ. ಶರಾವತಿ ನದಿಗೆ ಲಿಂಗನಮಕ್ಕಿ ಅಣೆಕಟ್ಟು ಕಟ್ಟಲಾಗಿದೆ. ಅಣೆಕಟ್ಟು ಭರ್ತಿಯಾಗುವವರೆಗೂ ಜೋಗ ಜಲಪಾತಕ್ಕೆ ಹೆಚ್ಚಿನ ನೀರು ಹರಿದು ಬರುವುದಿಲ್ಲ. ಅದರೆ ತಾಲೂಕಿನಲ್ಲಿ ಹೆಚ್ಚು ಮಳೆಯಾದ ಸಮಯದಲ್ಲಿ ಸುತ್ತಮುತ್ತಲ ನೀರು ಹರಿದು ಶರಾವತಿ ನದಿ ಸೇರುವುದರಿಂದ ಜೋಗ ಜಲಪಾತ ಧುಮ್ಮಿಕ್ಕುತ್ತಿದೆ.
Advertisement
Advertisement
ಮಂಜಿನೊಂದಿಗೆ ಕೆಲ ಕಾಲ ಮರೆಯಾಗುವ ಜಲಪಾತ, ಮಂಜು ಮರೆಯಾದ ತಕ್ಷಣ ಮತ್ತೆ ಗೋಚರಿಸುವ ಜಲಪಾತದ ಕಣ್ಣಮುಚ್ಚಾಲೆ ಆಟ ಪ್ರವಾಸಿಗರನ್ನು ಮಂತ್ರ ಮುಗ್ಧರನ್ನಾಗಿಸುತ್ತದೆ. ರಾಜ, ರಾಣಿ, ರೋರರ್ ರಾಕೇಟ್ ಕವಲುಗಳಾಗಿ ಧುಮ್ಮಿಕ್ಕುವ ವೈಭವ ಮನ ಮೋಹಕವಾಗಿದೆ. ಸುರಿಯುತ್ತಿರುವ ಮಳೆ, ಜಲಪಾತವನ್ನು ಆವರಿಸಿದ ಮಂಜು, ಆಗಾಗೆ ತೆರೆ ಸರಿಸಿ ಮಂಜು ಮರೆಯಾಗುವ ದೃಶ್ಯ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಮುಂಗಾರು ಮಳೆಯ ನಡುವೆ ಜಲಪಾತವನ್ನು ನೋಡುವುದೇ ಒಂದು ವೈಭವ. ಹಾಲಿನ ನೊರೆಯಂತೆ ಜೋಗ ಜಲಪಾತ ಕಣ್ಮನ ಸೆಳೆಯುತ್ತಿದೆ. ‘ಸಾಯೋದ್ರೋಳಗೆ ಒಮ್ಮೆ ನೋಡು ಜೋಗಾದ್ ಗುಂಡಿ’ ಎಂಬ ಕವಿವಾಣಿಯಂತೆ ಜೀವನದಲ್ಲಿ ಒಮ್ಮೆಯಾದರೂ ಜೋಗ ಜಲಪಾತದ ಮೆರುಗನ್ನು ಮಳೆಗಾಲದಲ್ಲಿ ನೋಡಲೇ ಬೇಕು.
Advertisement
ಶರಾವತಿ ನದಿ ಸುಂದರವಾದ ಒಂದು ದೃಶ್ಯ ಕಾವ್ಯ. ಮಲೆನಾಡಿನ ಸುಂದರ ಸೊಬಗಿನಲ್ಲಿ ಬಳಕುತ್ತಾ ಹರಿದು, ಜೋಗದಲ್ಲಿ ತನ್ನ ವೈಭವವನ್ನು ಮೆರೆದಿದ್ದಾಳೆ. ಅವಳ ರುದ್ರ ರಮಣೀಯಾ ದೃಶ್ಯ ನೋಡುವುದೇ ಒಂದು ಸೊಬಗು. ಜೋಗ ಜಲಪಾತಕ್ಕೆ ಇಂದು ಪ್ರವಾಸಿಗರ ದಂಡೇ ಹರಿದು ಬಂದಿತ್ತು. ಕೊರೋನಾ ಭೀತಿ ನಡುವೆ ಮನೆಯಲ್ಲೇ ಲಾಕ್ ಆಗಿದ್ದ ಜನರು ಮಳೆಯ ನಡುವೆಯೇ ಜೋಗ ಜಲಪಾತದ ಸೌಂದರ್ಯ ಸವಿದರು.