ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಮುಂದುವರೆದಿದೆ. ಕಳೆದ ಎರಡು ದಿನಗಳಿಂದ ರಾತ್ರಿ ವೇಳೆ ಭಾರೀ ಗಾಳಿ ಜೊತೆ ಧಾರಾಕಾರ ಮಳೆ ಸುರಿಯುತ್ತಿದೆ.
Advertisement
ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಅಲ್ಲಲ್ಲಿ ಮನೆಗಳು ಧರೆಗುರುಳಿವೆ. ಮೂಡಿಗೆರೆ ತಾಲೂಕಿನ ಹೊರಟ್ಟಿ ಹಾಗೂ ಕಲ್ಮನೆ ಗ್ರಾಮದಲ್ಲಿ ಎರಡು ಮನೆಗಳು ಸಂಪೂರ್ಣ ಜಖಂಗೊಂಡಿವೆ. ಹೊರಟ್ಟಿ ಗ್ರಾಮದ ವಸಂತ ಪೂಜಾರಿ ಎಂಬುವರ ಮನೆಗೆ ತೇವ ಹೆಚ್ಚಾಗಿದ್ದು, ಮನೆಯ ಗೋಡೆಗಳು ಬಿರುಕು ಬಿಟ್ಟಿವೆ. ಹೀಗಾಗಿ ಅರ್ಧ ಭಾಗ ಕುಸಿದು ಬಿದ್ದಿದೆ.
Advertisement
ಬೆಳಗಿನ ಜಾವ 3.30ಕ್ಕೆ ಭಾರೀ ಗಾಳಿಯೊಂದಿಗೆ ಸುರಿದ ಧಾರಾಕಾರ ಮಳೆಗೆ ಮನೆಯ ಗೋಡೆ ಹಾಗೂ ಮೇಲ್ಛಾವಣಿ ಕುಸಿದು ಬಿದ್ದಿದೆ. ಶಬ್ದ ಬರುತ್ತಿದ್ದಂತೆ ಮನೆಯಲ್ಲಿದ್ದ ಮೂವರು ಓಡಿ ಬಂದು ಜೀವ ಉಳಿಸಿಕೊಂಡಿದ್ದಾರೆ. ತೇವ ಹೆಚ್ಚಾಗಿ ಮನೆಯ ಗೋಡೆಗಳು ಬಿರುಕು ಬಿಟ್ಟಿದ್ದು, ಮತ್ತೆ ಮಳೆಯಾದರೆ ಮನೆ ಸಂಪೂರ್ಣ ಕುಸಿಯುವ ಭೀತಿಯಲ್ಲಿ ವಸಂತ್ ಪೂಜಾರಿ ಕುಟುಂಬವಿದೆ.
Advertisement
Advertisement
ತಾಲೂಕಿನ ಕಲ್ಮನೆ ಗ್ರಾಮದ ರವಿ ಅವರ ಮನೆಯ ಗೋಡೆ ಕೂಡ ಕುಸಿದು ಬಿದ್ದಿದೆ. ನಿನ್ನೆ ರಾತ್ರಿ 11.30ಕ್ಕೆ ಗೋಡೆ ಕುಸಿದು ಬಿದ್ದಿದ್ದು, ಮನೆಯಲ್ಲಿ ಮಲಗಿದ್ದ ರತ್ನ ಎಂಬುವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕಳೆದ ಎರಡು ದಿನಗಳಿಂದ ಜಿಲ್ಲೆಯ ಮಲೆನಾಡು ಭಾಗದಲ್ಲಿ ರಾತ್ರಿ ವೇಳೆ ಭಾರೀ ಗಾಳಿ ಸಹಿತ ಮಳೆಯಾಗುತ್ತಿದೆ. ಇದರಿಂದಾಗಿ ಮಲೆನಾಡಿಗರು ಆತಂಕಕ್ಕೀಡಾಗಿದ್ದಾರೆ. ಆಗಸ್ಟ್ ಮೊದಲ ವಾರದಲ್ಲಿ ಸುರಿದ ಮಳೆ ಐದೇ ದಿನಕ್ಕೆ ಮಲೆನಾಡಿಗರಿಗೆ ಆತಂಕ ಹುಟ್ಟಿಸಿತ್ತು. ಇದೀಗ, ಎರಡು ದಿನಗಳಿಂದ ರಾತ್ರಿ ವೇಳೆ ಸುರಿಯುತ್ತಿರೋ ಭಾರೀ ಮಳೆಗೆ ಮಲೆನಾಡಿಗರಲ್ಲಿ ಭಯ ಮೂಡಿದೆ.