ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಹಲವು ಅನಾಹುತಗಳನ್ನು ಸೃಷ್ಟಿಸಿದೆ.
ಜಿಲ್ಲೆಯ ಮಲೆನಾಡು ಭಾಗಗಳಾದ ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ ತಾಲೂಕಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಕಳಸ, ಕುದುರೆಮುಖ, ಬಾಳೆಹೊನ್ನೂರು, ಚಾರ್ಮಾಡಿ ಘಾಟ್, ಜಯಪುರ, ಕೊಟ್ಟಿಗೆಹಾರ, ಬಣಕಲ್ ಸುತ್ತಮುತ್ತ ಭಾರೀ ಮಳೆ ಸುರಿದಿದೆ. ಕಳಸ-ಕುದುರೆಮುಖದ ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ತುಂಗಾ-ಭದ್ರಾ ನದಿಗಳ ವೇಗ ಹೆಚ್ಚಾಗಿದ್ದು, ನದಿಗಳ ಹರಿವಿನ ಮಟ್ಟದಲ್ಲೂ ಏರಿಕೆಯಾಗಿದೆ.
Advertisement
Advertisement
ಭಾರೀ ಮಳೆಯಿಂದ ಕೊಪ್ಪ ತಾಲೂಕಿನ ಜಯಪುರದಿಂದ ಬಸರೀಕಟ್ಟೆಗೆ ಹೋಗುವ ಮಾರ್ಗ ಮಧ್ಯೆ ರಸ್ತೆಗೆ ಮರ ಉರುಳಿ ಬಿದ್ದಿದ್ದರಿಂದ ಜಯಪುರ-ಬಸರೀಕಟ್ಟೆ ಸಂಚಾರ ಕೂಡ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಕಳಸದಲ್ಲಿ ಯತೇಚ್ಛವಾಗಿ ಮಳೆಯಾಗುತ್ತಿರುವುದರಿಂದ ಕಳಸ-ಹೊರನಾಡು ಸಂಪರ್ಕ ಕಲ್ಪಿಸುವ ಹೆಬ್ಬಾಳೆ ಸೇತುವೆ ಕೂಡ ಮುಳುಗುವ ಹಂತ ತಲುಪಿದೆ. ಇಂದು ರಾತ್ರಿ ಇದೇ ರೀತಿ ಮಳೆ ಸುರಿದರೆ ಬೆಳಗಾಗುವಷ್ಟರಲ್ಲಿ ಸೇತುವೆ ಮುಳುಗಡೆಯಾಗಲಿದೆ. ಸೇತುವೆ ಮುಳುಗಲು ಕೇವಲ ಎರಡು ಅಡಿಯಷ್ಟೆ ಬಾಕಿ ಇದೆ.
Advertisement
Advertisement
ಕೊಟ್ಟಿಗೆಹಾರ-ಬಣಕಲ್ ಸುತ್ತಲೂ ಭಾರೀ ಮಳೆಯಾಗುತ್ತಿದ್ದು, ಬಿನ್ನಡಿ ಗ್ರಾಮದಲ್ಲಿ ಮನೆ ಪಕ್ಕ ಭೂ ಕುಸಿತವಾಗಿದೆ. ಮೂಡಿಗೆರೆ ತಾಲೂಕಿನ ಭೈರಾಪುರ ಸಮೀಪ ಭಾರೀ ಮಳೆಯಿಂದ ಹೊಲ, ಗದ್ದೆಗಳಿಗೆ ನೀರು ನುಗ್ಗಿದ್ದು, ರೈತರು ಮಳೆ ಕಂಡು ಕಂಗಾಲಾಗಿದ್ದಾರೆ. ಹೇಮಾವತಿ ನದಿ ಕೂಡ ಮೈದುಂಬಿ ಹರಿಯುತ್ತಿದೆ. ರಸ್ತೆಯಲ್ಲಿ ಹಳ್ಳದಂತೆ ನೀರು ಹರಿಯುತ್ತಿದ್ದು, ಹೊಲಗದ್ದೆಗಳಿಗೆ ನುಗ್ಗಿದೆ.
ಮಲೆನಾಡಿನ ನಾಲ್ಕು ತಾಲೂಕಿನಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಭಾರೀ ಮಳೆ-ಗಾಳಿಯಿಂದ ವಿದ್ಯುತ್ ಕಂಬಗಳು, ಮರಗಳು ರಸ್ತೆಗುರುಳಿದ್ದು, ಮಲೆನಾಡಿನ ಹಲವೆಡೆ ವಿದ್ಯುತ್ ಸಂಪರ್ಕ ಕೂಡ ಕಡಿತಗೊಂಡಿದೆ. ಕಳಸ, ಕುದುರೆಮುಖ, ಚಾರ್ಮಾಡಿಘಾಟ್, ಕೊಟ್ಟಿಗೆಹಾರ, ಜಯಪುರ, ಬಾಳೆಹೊನ್ನೂರಿನ ಜನ ಮಳೆಯ ಅಬ್ಬರ ಕಂಡು ಆತಂಕಕ್ಕೀಡಾಗಿದ್ದಾರೆ.