– ಹೆಬ್ಬಾಳೆ ಸೇತುವೆ ಮುಳುಗಡೆಗೆ ಎರಡೇ ಅಡಿ ಬಾಕಿ
ಚಿಕ್ಕಮಗಳೂರು: ಜಿಲ್ಲೆಯ ಕಳಸ ತಾಲೂಕಿನ ಕುದುರೆಮುಖ ಸುತ್ತಮುತ್ತ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ತುಂಗಾ-ಭದ್ರಾ ನದಿಗಳು ಮೈದುಂಬಿ ಹರಿಯುತ್ತಿವೆ. ಭದ್ರಾ ನದಿ ಹರಿವಿನ ಪ್ರಾಮಾಣದಲ್ಲಿ ಭಾರೀ ಏರಿಕೆಯಾಗಿದ್ದು, ಹೊರನಾಡು-ಕಳಸ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಹೆಬ್ಬಾಳೆ ಸೇತುವೆ ಮುಳುಗಡೆಗೆ ಎರಡೇ ಅಡಿ ಬಾಕಿ ಉಳಿದಿದೆ.
Advertisement
ಈ ಸೇತುವೆ ಮುಳುಗಡೆಯಾದರೆ ಹೊರನಾಡು, ಕಳಸ, ಮಾವಿನಹೊಳೆ, ಮೆಣಸಿನಹಾಡ್ಯ, ತುರಾ, ಬಲಿಗೆ ಸೇರಿದಂತೆ ಹತ್ತಾರು ಗ್ರಾಮಗಳ ಸಂಪರ್ಕವೇ ಕಡಿತಗೊಳ್ಳಲಿದೆ. ಬೇರೆ ಮಾರ್ಗವಿದ್ದರೂ ಜನ ಎಂಟತ್ತು ಕಿ.ಮೀ. ಸುತ್ತಿಕೊಂಡು ಬರಬೇಕಿದೆ. ಮಳೆ ಹೀಗೆ ಸುರಿದರೆ ಶುಕ್ರವಾರದ ಬೆಳಗಿನ ಹೊತ್ತಿಗೆ ಸೇತುವೆ ಮುಳುಗಡೆಯಾಗಲಿದೆ. ಜಿಲ್ಲೆಯ ಮಲೆನಾಡು ತಾಲೂಕುಗಳಾದ ಕೊಪ್ಪ, ಶೃಂಗೇರಿ, ಮೂಡಿಗೆರೆ, ಎನ್.ಆರ್.ಪುರ ತಾಲೂಕುಗಳಲ್ಲಿ ಭಾರೀ ಮಳೆ ಸುರಿಯುತ್ತಿದೆ.
Advertisement
Advertisement
ಮೂಡಿಗೆರೆ ತಾಲೂಕಿನಲ್ಲಿ ಮೂರು ದಿನಗಳಿಂದ ರಣ ಗಾಳಿಯೊಂದಿಗೆ ಮಳೆ ಸುರಿಯುತ್ತಿದ್ದು, ಮುಗ್ರಹಳ್ಳಿ ಸೇತುವೆ ಕೊಚ್ಚಿ ಹೋಗುವ ಭೀತಿ ಎದುರಾಗಿದೆ. ಸರ್ಕಾರ ಹೊಸ ಸೇತುವೆಗೆ ಪಿಲ್ಲರ್ ನಿಲ್ಲಿಸಿದ್ದರೂ ಹಳೆ ಪಿಲ್ಲರ್ ಕೆಳಗಿದ್ದ ಕಲ್ಲುಗಳನ್ನ ಕಿತ್ತಿರುವುದರಿಂದ ಕಷ್ಟಕ್ಕಿದ್ದ ಸೇತುವೆಯೂ ಇಂದೋ, ನಾಳೆಯೋ ಅಂತಿದೆ. ಇದರಿಂದ ಮುಗ್ರಹಳ್ಳಿ, ಕೋಳೂರು, ಗುಣಬೈಲು ಗ್ರಾಮದ ಜನ ಕಂಗಾಲಾಗಿದ್ದಾರೆ. ಈ ಸೇತುವೆ ಕಳಚಿ ಬಿದ್ದರೆ ಎಂಟತ್ತು ಕಿ.ಮೀ. ಸುತ್ತಿ ಬರಬೇಕಾದ ಸ್ಥಿತಿ ನಿರ್ಮಾಣವಾಗಲಿದೆ.
Advertisement
ಮಲೆನಾಡಲ್ಲಿ ಭಾರೀ ಗಾಳಿ ಬೀಸುತ್ತಿದ್ದು, ಮೂಡಿಗೆರೆ ತಾಲೂಕಿನ ನಿಡುವಾಳೆ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗವಿದ್ದ ಬೃಹತ್ ಮರ ಧರೆಗುರುಳಿದೆ. ಬಿದರಹಳ್ಳಿ ಬಳಿ ಭಾರೀ ಗಾಳಿ ಹಾಗೂ ಮಳೆಯಿಂದ ಚಾಲಕರ ನಿಯಂತ್ರಣ ತಪ್ಪಿ ಎರಡು ಕಾರುಗಳು ಮುಖಾಮುಖಿ ಡಿಕ್ಕಿಯಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ವಿದ್ಯುತ್ ಕಂಬಗಳು ಧರೆಗುರುಳಿದ್ದು, ಹಲವು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ತುಂಗಾ, ಭದ್ರಾ, ಹೇಮಾವತಿ ನದಿಗಳು ಮೈದುಂಬಿ ಹರಿಯುತ್ತಿದೆ. ಮಳೆ ನೀರು ನದಿ ಪಕ್ಕದ ಹೊಲ, ಗದ್ದೆ, ತೋಟಗಳಿಗೆ ನುಗ್ಗುತ್ತಿದ್ದು, ರೈತರು ಹಾಗೂ ಬೆಳೆಗಾರರು ಆತಂಕಕ್ಕೀಡಾಗಿದ್ದಾರೆ. ಕಳೆದ ಮೂರು ದಿನಗಳಿಂದ ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಮಲೆನಾಡಿಗರು ಭವಿಷ್ಯವನ್ನ ನೆನೆದು ಕಂಗಲಾಗಿದ್ದಾರೆ.