ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು ಮೂಡಿಗೆರೆ, ಕೊಪ್ಪ, ಶೃಂಗೇರಿ, ಕಳಸ, ಬಾಳೆಹೊನ್ನೂರು, ಕೊಟ್ಟಿಗೆಹಾರ ಭಾಗದಲ್ಲಿ ಧಾರಾಕಾರ ಮಳೆ ಸುರಿದಿದೆ. ಬಣಕಲ್ ವಿಲೇಜ್ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ಟಿಪ್ಪರ್ ಲಾರಿವೊಂದು ರಸ್ತೆ ಬದಿಯ ಹೊಂಡಕ್ಕೆ ಜಾರಿಬಿದ್ದಿದೆ.
Advertisement
ಮಧ್ಯಾಹ್ನ ಮೂರು ಗಂಟೆಯ ನಂತರ ಆರಂಭವಾದ ಮಳೆ ಸಂಜೆವರೆಗೂ ಒಂದೇ ಸಮನೆ ಸುರಿದಿದೆ. ಚಿಕ್ಕಮಗಳೂರು ತಾಲೂಕಿನ ಸಂಗಮೇಶ್ವರ ಪೇಟೆಯಲ್ಲಿ ಆಲಿಕಲ್ಲು ಮಳೆ ಸುರಿದಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ನೋಡ-ನೋಡುತ್ತಿದ್ದಂತೆ ಆರಂಭವಾದ ಆಲಿಕಲ್ಲು ಮಳೆ ಮನಸ್ಸೋ ಇಚ್ಛೆ ಸುರಿದಿದೆ. ಬಣಕಲ್-ಕೊಟ್ಟಿಗೆಹಾರದ ಸುತ್ತಮುತ್ತಲೂ ಗುಡುಗು-ಸಿಡಿಲು ಸಹಿತ ಭಾರೀ ಮಳೆ ಸುರಿದಿದ್ದು ಬಣಕಲ್ ವಿಲೇಜ್ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ಟಿಪ್ಪರ್ ಲಾರಿವೊಂದು ರಸ್ತೆ ಬದಿಯ ಹೊಂಡಕ್ಕೆ ಜಾರಿತ್ತು. ಅದೃಷ್ಟವಶಾತ್ ಪಲ್ಟಿಯಾಗಿಲ್ಲ. ಲಾರಿಯಲ್ಲಿ ಚಾಲಕ ಹಾಗೂ ಕ್ಲೀನರ್ ಇದ್ದರು. ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Advertisement
Advertisement
ಬಳಿಕ ಜೆಸಿಬಿಯಿಂದ ಹೊಂಡಕ್ಕೆ ಜಾರಿದ್ದ ಟಿಪ್ಪರ್ ಲಾರಿಯನ್ನು ಎಳೆಯಲಾಯಿತು. ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಳೆದ ಮೂರು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಮಲೆನಾಡಿಗರು ಫುಲ್ ಖುಷಿಯಾಗಿದ್ದಾರೆ. ಕಳೆದ ಮೂರು ವರ್ಷಗಳಿಂದ ಕಾಫಿ-ಅಡಿಕೆ-ಮೆಣಸು ಬಹುತೇಕ ಉದುರಿ ತೀವ್ರವಾದ ನಷ್ಟವಾಗಿತ್ತು. ಆದರೆ, ಈ ಬಾರಿ ಸೂಕ್ತವಾದ ಸಮಯದಲ್ಲಿ ಮಳೆ ಬರುತ್ತಿರುವುದರಿಂದ ಈ ವರ್ಷ ಕಾಫಿ-ಮೆಣಸು-ಅಡಿಕೆಯ ಉತ್ತಮ ಇಳುವರಿಯ ಕನಸು ಕಂಡಿದ್ದಾರೆ. ಜೊತೆಗೆ ಬಿಸಿಲ ಧಗೆಗೆ ಕಂಗೆಟ್ಟಿದ್ದ ಮಲೆನಾಡಿಗರು ಮಳೆರಾಯನಿಂದ ತಂಪಾಗಿದ್ದಾರೆ.
Advertisement