– ಹುಡುಗನ ಮನೆಯಿಂದ್ಲೇ ದಂಪತಿಯ ಅಪಹರಣ
ಹೈದರಾಬಾದ್: ನಗರದಲ್ಲಿ ಮತ್ತೊಂದು ಮರ್ಯಾದಾ ಹತ್ಯೆ ನಡೆದಿದ್ದು, ನಾಲ್ಕು ತಿಂಗಳ ಹಿಂದೆಯಷ್ಟೆ ಮದುವೆಯಾಗಿದ್ದ ನವವಿವಾಹಿತನನ್ನು ಕಿಡ್ನಾಪ್ ಮಾಡಿಕೊಂಡು ಹೋಗಿ ಕೊಲೆ ಮಾಡಲಾಗಿದೆ.
ಮೃತನನ್ನು ಹೇಮಂತ್ ಕುಮಾರ್ ಎಂದು ಗುರುತಿಸಲಾಗಿದೆ. ಚಂದನಗರದಲ್ಲಿರುವ ತನ್ನ ಮನೆಯಿಂದ ಹೇಮಂತ್ ಕುಮಾರ್ನನ್ನು ಅಪಹರಿಸಲಾಗಿತ್ತು. ಆದರೆ ಗುರುವಾರ ತಡರಾತ್ರಿ ಸಂಗರೆಡ್ಡಿ ಜಿಲ್ಲೆಯಲ್ಲಿ ಆತನ ಶವವನ್ನು ಪತ್ತೆ ಮಾಡಲಾಗಿದೆ. ಹೇಮಂತ್ ಮತ್ತು ಅವಂತಿ ಇಬ್ಬರು ಪರಸ್ಪರ ಪ್ರೀತಿಸಿ ನಾಲ್ಕು ತಿಂಗಳ ಹಿಂದೆಯಷ್ಟೆ ಮದುವೆಯಾಗಿದ್ದರು. ಹೀಗಾಗಿ ಹತ್ಯೆಯ ಹಿಂದೆ ಅವಂತಿಯ ಕುಟುಂಬವಿದೆ ಅಂತ ತಿಳಿದುಬಂದಿದೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಸೈಬರಾಬಾದ್ ಪೊಲೀಸರು ತಿಳಿಸಿದ್ದಾರೆ.
Advertisement
Advertisement
ಅವಂತಿಯ ಸೋದರ ಮಾವ ಯುಗಂದರ್ ರೆಡ್ಡಿ ಮತ್ತು ಇತರ ಇಬ್ಬರು ಹೇಮಂತ್ನನ್ನು ಕತ್ತು ಹಿಸುಕಿ ಕೊಂದಿದ್ದಾರೆ. ಈ ಪ್ರಕರಣದಲ್ಲಿ ಈಗಾಗಲೇ ಹತ್ತಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ. ಕೊಲೆಯ ಹಿಂದೆ ಆಕೆಯ ಮಾವ ಯುಗಂದರ್ ರೆಡ್ಡಿ ಪ್ರಮುಖ ಆರೋಪಿಯಾಗಿದ್ದು, ಈ ಹತ್ಯೆಯಲ್ಲಿ ಪೋಷಕರು ಭಾಗಿಯಾಗಿದ್ದಾರೆ ಅಂತ ಅವಂತಿ ಆರೋಪಿಸಿದ್ದಾಳೆ ಎಂದು ಡಿಸಿಪಿ ಎಂ.ವೆಂಕಟೇಶ್ವರಲು ಹೇಳಿದರು.
Advertisement
Advertisement
ಏನಿದು ಪ್ರಕರಣ?
ಹೇಮಂತ್ ಮತ್ತು ಅವಂತಿ ಸುಮಾರು ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದರು. ಈ ಜೋಡಿ 2020ರ ಜೂನ್ನಲ್ಲಿ ಕುತ್ಬುಲ್ಲಾಪುರದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹವಾಗಿದ್ದರು. ಹೇಮಂತ್ ಪದವಿ ಮುಗಿಸಿದ್ದರೆ, ಅವಂತಿ ಎಂಜಿನಿಯರಿಂಗ್ ಮುಗಿಸಿದ್ದಳು. ಮದುವೆಯಾದ ನಂತರ ಹೇಮಂತ್ ಮತ್ತು ಅವಂತಿ ನಗರದ ಚಂದನಗರದಲ್ಲಿ ವಾಸವಾಗಿದ್ದರು. ಗುರುವಾರ ಮಧ್ಯಾಹ್ನ ಹೇಮಂತ್ ತನ್ನ ತಂದೆ ಮುರಳಿ ಕೃಷ್ಣಗೆ ಫೋನ್ ಮಾಡಿ ಅವಂತಿಯ ಕುಟುಂಬದವರು ನಮ್ಮ ಮನೆಗೆ ಬಂದಿದ್ದಾರೆ ಎಂದು ತಿಳಿಸಿದ್ದನು.
ರಾಜಿ ಮಾಡಿಕೊಳ್ಳಲು ಬಂದಿರಬಹುದೆಂದು ಭಾವಿಸಿ ಎಂದು ಮನೆಯ ಬಳಿ ಹೋದೆ. ಆದರೆ ನಾನು ಮನೆಗೆ ತಲುಪಿದಾಗ ಕುಟುಂಬದವರು ಹೇಮಂತ್ ಮತ್ತು ಅವಂತಿಯನ್ನು ಕಾರಿನಲ್ಲಿ ಬಲವಂತವಾಗಿ ಕರೆದುಕೊಂಡು ಹೋಗುವುದನ್ನು ನೋಡಿದೆ. ಸಹಾಯಕ್ಕಾಗಿ ಹೇಮಂತ್ ಕೂಗುತ್ತಿರುವುದನ್ನು ಕೇಳಿ ತಕ್ಷಣ ತನ್ನ ಸ್ಕೂಟರ್ನಲ್ಲಿ ಕಾರನ್ನು ಹಿಂಬಾಲಿಸಿದೆ ಎಂದು ಹೇಮಂತ್ ತಂದೆ ಮುರಳಿ ಕೃಷ್ಣ ಹೇಳಿದ್ದಾರೆ.
ಕಾರು ಗೋಪನ್ಪಲ್ಲಿ ತಾಂಡಾ ತಲುಪಿದಾಗ ಇಬ್ಬರು ವಾಹನದಿಂದ ಹೊರಬರಲು ಪ್ರಯತ್ನಿಸಿದ್ದಾರೆ. ಈ ವೇಳೆ ಅವಂತಿ ತಪ್ಪಿಸಿಕೊಂಡಿದ್ದಾಳೆ. ಆದರೆ ಹೇಮಂತ್ನನ್ನು ಕರೆದುಕೊಂಡು ಹೋಗಿದ್ದಾರೆ. ಆಗ ಮುರಳಿ ಕೃಷ್ಣ ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ತಿಳಿಡಿದ್ದಾರೆ. ಆದರೆ ಅವಂತಿ ಪೊಲೀಸರು ಸ್ಪಂದಿಸುವಲ್ಲಿ ವಿಳಂಬವಾಗಿದೆ ಎಂದಿದ್ದಾಳೆ. ನಾವು ಪೊಲೀಸರಿಗೆ ಮಾಹಿತಿ ನೀಡಿದ್ದರೂ ಸಹ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಅವರು ತಕ್ಷಣ ಪ್ರತಿಕ್ರಿಯಿಸಿದ್ದರೆ ಇಂದು ನಾನು ನನ್ನ ಪತಿಯನ್ನು ಕಳೆದುಕೊಳ್ಳುತ್ತಿರಲಿಲ್ಲ” ಎಂದು ಕಣ್ಣೀರು ಹಾಕಿದ್ದಾಳೆ.
ನನ್ನ ತಂದೆ ಲಕ್ಷ್ಮ ರೆಡ್ಡಿ ನಮ್ಮ ಕುಟುಂಬದವರ ಜೊತೆ ಯಾವುದೇ ಸಂಪರ್ಕ ಇಟ್ಟುಕೊಳ್ಳಬಾರದು ಎಂದು ಎಚ್ಚರಿಕೆ ನೀಡಿದ್ದರು. ಅಲ್ಲದೇ ಕುಟುಂಬದ ದಾಖಲೆಗಳಿಗೆ ಸಹಿ ಕೂಡ ಮಾಡಿಸಿಕೊಂಡಿದ್ದರು. ನೀನು ನಮ್ಮ ಕುಟುಂಬದ ಯಾವುದೇ ಆಸ್ತಿಯ ಮೇಲೆ ಹಕ್ಕನ್ನು ಹೊಂದಿಲ್ಲ ಎಂದು ಹೇಳಿರುವುದಾಗಿ ಅವಂತಿ ತಿಳಿಸಿದ್ದಾಳೆ.
ಆಸ್ತಿಗಳಿಗಾಗಿ ನಾವು ಕೂನೂನಿನ ಮೂಲಕ ಹೋರಾಡುತ್ತೇವೆ ಎಂದು ಅವರು ಭಾವಿಸಿರಬೇಕು. ಯಾಕೆಂದರೆ ಇತ್ತೀಚೆಗೆ ಸುಪ್ರೀಂಕೋರ್ಟ್ ಕೂಡ ಪೋಷಕರ ಆಸ್ತಿಯಲ್ಲಿ ಹೆಣ್ಣುಮಕ್ಕಳಿಗೂ ಹಕ್ಕಿದೆ ಎಂದು ಆದೇಶ ಹೊರಡಿಸಿದೆ. ಆದರೆ ಅವರು ನನ್ನ ಮಗನನ್ನು ಕೊಂದಿದ್ದಾರೆ. ಅದು ಆಸ್ತಿಗೆ ಸಮವಾಗುವುದಿಲ್ಲ ಎಂದು ಹೇಮಂತ್ ತಂದೆ ಕಣ್ಣೀರು ಹಾಕಿದರು.
ನಾವು ಅವರ ಸ್ಪಂದನೆಗೆ ಪ್ರತಿಕ್ರಿಯೆ ನೀಡಲು ಯಾವುದೇ ವಿಳಂಬ ಮಾಡಿಲ್ಲ. ಶಂಕಿತರನ್ನು ತಕ್ಷಣವೇ ಬಂಧಿಸಲಾಯಿತು. ಅವರ ತಪ್ಪೊಪ್ಪಿಗೆಯ ಆಧಾರದ ಮೇಲೆ ಹೇಮಂತ್ ಶವವನ್ನು ಸಂಗರೆಡ್ಡಿ ಜಿಲ್ಲೆಯಲ್ಲಿ ಪತ್ತೆ ಮಾಡಲಾಗಿದೆ ಎಂದು ಇನ್ಸ್ಪೆಕ್ಟರ್ ಆರ್.ಶ್ರೀನಿವಾಸ್ ತಿಳಿಸಿದ್ದಾರೆ. ಸದ್ಯಕ್ಕೆ ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.