ಮಂಡ್ಯ: ಜಿಲ್ಲಾ ಹಾಲು ಒಕ್ಕೂಟದಲ್ಲಿ ನಡೆದಿದ್ದ ನೀರು ಬೆರೆಸಿದ ಹಾಲು ಪೂರೈಕೆ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ರೈತರ ಆಗ್ರಹಿಸುತ್ತಿದ್ದಾರೆ. ಈ ನಡುವೆ ಸಿಐಡಿ ಅಧಿಕಾರಿಗಳ ತಂಡ ಪ್ರಕರಣದ ತನಿಖೆ ಆರಂಭಿಸಿದ್ದು, ಮನ್ಮುಲ್ ಕಚೇರಿಗೆ ಭೇಟಿ ನೀಡಿ ಹಲವು ದಾಖಲೆಗಳನ್ನು ಸಂಗ್ರಹಿಸಿದೆ.
Advertisement
ಏನಿದು ಪ್ರಕರಣ?
ಮಂಡ್ಯ ಜಿಲ್ಲಾ ಹಾಲು ಒಕ್ಕೂಟದಲ್ಲಿ ಕಳೆದ ಒಂದೂವರೆ ತಿಂಗಳ ಹಿಂದೆ ಬೆಳಕಿಗೆ ಬಂದಿದ್ದ ಹಾಲಿಗೆ ನೀರು ಬೆರೆಸಿ ವಂಚನೆ ಮಾಡುತ್ತಿದ್ದ ಹಗರಣ ಸಾಕಷ್ಟು ಕಾರಣಗಳಿಂದ ಗಮನ ಸೆಳೆದಿತ್ತು. ಈ ಪ್ರಕರಣದ ತನಿಖೆ ಜವಾಬ್ದಾರಿ ಹೊತ್ತಿರುವ ಸಿಐಡಿ ಅಧಿಕಾರಿಗಳ ತಂಡ ಫುಲ್ ಆಕ್ಟೀವ್ ಆಗಿದ್ದು, ಈವರೆಗೆ ನಡೆದಿರುವ ತನಿಖೆ ಬಗ್ಗೆ ಪೊಲೀಸರಿಂದ ಮಾಹಿತಿ ಕಲೆ ಹಾಕುವ ಜೊತೆಗೆ ಪ್ರಕರಣಕ್ಕೆ ಸಂಬಂಧಿಸಿದ ಹಲವು ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದೆ. ಇನ್ನು ಹಳ್ಳಿಗಳಲ್ಲಿ ಸಂಗ್ರಹವಾಗುತ್ತಿದ್ದ ಹಾಲನ್ನು ಒಕ್ಕೂಟಕ್ಕೆ ಟ್ಯಾಂಕರ್ ಗಳಲ್ಲಿ ಪೂರೈಕೆ ಮಾಡುವಾಗ ಶೇ.30ರಷ್ಟು ಹಾಲನ್ನು ಖಾಸಗಿ ಡೈರಿಗಳಿಗೆ ಮಾರಾಟ ಮಾಡ್ತಿದ್ದ ವಂಚಕರು, ಉಳಿದ ಹಾಲಿಗೆ ನೀರು ಮಿಶ್ರಣ ಮಾಡಿ ಪ್ರತಿನಿತ್ಯ ಲಕ್ಷಾಂತರ ರೂಪಾಯಿ ವಂಚನೆ ಮಾಡ್ತಿದ್ರು. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು ಪರಸ್ಪರ ವಾಕ್ಸಮರ ಆರಂಭಿಸಿ ಆರೋಪ ಪ್ರತ್ಯಾರೋಪಕ್ಕೆ ಇಳಿದಿದ್ರು. ಇನ್ನೊಂದೆಡೆ ಪೊಲೀಸರ ಆಮೆಗತಿ ತನಿಖೆ ವಿರುದ್ಧ ಆಕ್ರೋಶಗೊಂಡಿದ್ದ ರೈತರು ಪ್ರಕರಣವನ್ನು ಸಿಬಿಐಗೆ ನೀಡುವಂತೆ ಒತ್ತಾಯಿಸಿದ್ರು. ರೈತರ ಹೋರಾಟಕ್ಕೆ ಸಂಸದೆ ಸುಮಲತಾ ಸಾಥ್ ನೀಡಿದ್ದರು.
Advertisement
Advertisement
ಒತ್ತಡ ಹೆಚ್ಚಾದ ಬಳಿಕ ರಾಜ್ಯ ಸರ್ಕಾರ ಸಿಐಡಿಗೆ ಪ್ರಕರಣದ ತನಿಖೆಯ ಜವಾಬ್ದಾರಿ ನೀಡಿತ್ತು. ಇದೀಗ ಮನ್ಮುಲ್ ಗೆ ಭೇಟಿ ನೀಡಿದ್ದ ಸಿಐಡಿ ಇನ್ಸ್ ಪೆಕ್ಟರ್ ನರೇಂದ್ರ ನೇತೃತ್ವದ ತಂಡ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಅವರಿಂದ ಮಾಹಿತಿ ಪಡೆದುಕೊಂಡಿತು. ಬಳಿಕ ಮದ್ದೂರು ಪೊಲೀಸ್ ಠಾಣೆಗೆ ಭೇಟಿ ನೀಡಿ ವಶಪಡಿಸಿಕೊಂಡಿರುವ ಟ್ಯಾಂಕರ್ ಗಳನ್ನು ಪರಿಶೀಲನೆ ಮಾಡಿ ಈವರೆಗೆ ನಡೆದಿರುವ ತನಿಖೆಯ ಸಂಪೂರ್ಣ ವರದಿಯನ್ನು ಪಡೆದುಕೊಂಡಿದೆ. ಇದನ್ನೂ ಓದಿ: ನೀರು ಮಿಶ್ರಿತ ಹಾಲು ಕೇಸ್ – ಮನ್ಮುಲ್ನ 7 ಅಧಿಕಾರಿಗಳು ಅಮಾನತು
Advertisement
ಸಿಐಡಿ ತನಿಖೆಯಿಂದ ತಪ್ಪಿತಸ್ಥರಿಗೆ ಶಿಕ್ಷೆಯಾಗುವ ವಿಶ್ವಾಸ ವ್ಯಕ್ತಪಡಿಸಿರುವ ಮನ್ಮುಲ್ ಆಡಳಿತ ಮಂಡಳಿ, ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದೆ. ಹಲವು ವರ್ಷಗಳಿಂದ ನಡೆಯುತ್ತಿದ್ದ ಹಾಲಿಗೆ ನೀರು ಬೆರಸಿ ವಂಚನೆ ಹಗರಣದಲ್ಲಿ ಮನ್ಮುಲ್ ಗೆ ನೂರಾರು ಕೋಟಿ ನಷ್ಟವಾಗಿದೆ ಎನ್ನಲಾಗುತ್ತಿದ್ದು, ಆಡಳಿತ ಮಂಡಳಿಯ ನಿರ್ದೇಶಕರು ಹಾಗೂ ಅಧಿಕಾರಿಗಳು ಸಹ ಭಾಗಿಯಾಗಿದ್ದಾರೆಂಬ ಆರೋಪವೂ ದಟ್ಟವಾಗಿದೆ. ತನಿಖೆಯ ಬಳಿಕ ಸತ್ಯಾಸತ್ಯ ಹೊರಬರಬೇಕಿದೆ.