– ಮನೆಯವರೂ ನನ್ನ ವಿರುದ್ಧ ತಿರುಗಿ ಬಿದ್ದಿದ್ದಾರೆ
ಬೆಂಗಳೂರು: ಮನೆಯವರ ಒತ್ತಡದಿಂದ ಆಕಾಶ್ ನನ್ನನ್ನು ಅರ್ಧದಲ್ಲಿಯೇ ಬಿಟ್ಟು ಹೋದ. ನಾನು, ಆಕಾಶ್ ಈಗ ಬೇರೆ ಬೇರೆಯಾಗಿದ್ದೀವಿ. ಈಗ ನನ್ನ ಹಾಗೂ ಆಕಾಶ್ ನಡುವೆ ಏನೂ ಇಲ್ಲ ಎಂದು ಸಿಡಿ ಯುವತಿ ಹೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
Advertisement
ನಾಲ್ಕನೇ ದಿನವಾದ ಇಂದು ಕೂಡ ಯುವತಿಯನ್ನು ಎಸ್ಐಟಿ ವಿಚಾರಣೆಗೆ ಒಳಪಡಿಸಿತು. ಆರ್.ಟಿ.ನಗರ ಕೇಸ್ ಸಂಬಂಧ ವಿಚಾರಣೆಯ ವೇಳೆ ಯುವತಿ ಸಾಕಷ್ಟು ವಿಚಾರಗಳನ್ನು ಬಯಲು ಮಾಡಿದರು. ಯಾರಾದರೂ ನಿಮ್ಮನ್ನು ಕಿಡ್ನಾಪ್ ಮಾಡಿದ್ರಾ..?, ಇಷ್ಟು ದಿನ ಯಾಕೆ ನೀವು ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಕೇವಲ ವಿಡಿಯೋ ಮಾತ್ರ ರೆಕಾರ್ಡ್ ಮಾಡಿ ಬಿಡುಗಡೆ ಮಾಡ್ತಿದ್ರಿ. ರೆಕಾರ್ಡ್ ಮಾಡ್ತಾ ಇದ್ದಿದ್ದು ಯಾರು…? ನಿಮಗೆ ಯಾರಾದ್ರೂ ಆಶ್ರಯ ಕೊಟ್ಟಿದ್ರಾ..?, ದೆಹಲಿಯಿಂದ ಬಂದಿರೋದಾಗಿ ಮಾಹಿತಿ ಇದೆ, ದೆಹಲಿಗೆ ಯಾಕೆ ಹೋಗಿದ್ದು…?, ಸಿಡಿ ಬಿಡುಗಡೆ ಬಳಿಕ ಎಲ್ಲೆಲ್ಲಿ ಸುತ್ತಾಡಿದ್ರಿ, ನಿಮ್ಮ ಜೊತೆಯಲ್ಲಿ ಇದ್ದವರು ಯಾರು ಅಂತೆಲ್ಲ ಎಸ್ಐಟಿ ಪ್ರಶ್ನಿಸಿದೆ. ಈ ವೇಳೆ ಉತ್ತರಿಸಿದ ಯುವತಿ, ನನ್ನನ್ನು ಯಾರು ಕಿಡ್ನಾಪ್ ಮಾಡಿಲ್ಲ, ನಾನಾಗಿಯೇ ಹೋಗಿದ್ದು. ಸಿಡಿ ಬಿಡುಗಡೆಯಿಂದ ಮನಸ್ಸಿಗೆ ತುಂಬಾನೇ ನೋವಾಯ್ತು ಆದ ಕಾರಣಕ್ಕೆ ಯಾರ ಕಣ್ಣಿಗೂ ಬಿದ್ದಿಲ್ಲ. ನನ್ನ ಮೇಲೆಯೇ ಆರೋಪ ಬಂದ ಕಾರಣಕ್ಕೆ ನಾನು ವೀಡಿಯೋ ಹೇಳಿಕೆ ಮಾಡಬೇಕಾಯ್ತು ಎಂದು ಹೇಳಿಕೊಂಡಿದ್ದಾರೆ.
Advertisement
Advertisement
ನನ್ನ ವೀಡಿಯೋ ಹೊರಗೆ ಬಂದ ಬಳಿಕ ನನಗೆ ತುಂಬಾನೇ ಭಯ ಕೂಡ ಆಗಿತ್ತು. ಆ ಹಿನ್ನೆಲೆಯಲ್ಲಿ ನಾನು ಆಕಾಶ್ ಹೊರಗೆ ಹೋಗಿದ್ವಿ. ಆದರೆ ಆಕಾಶ್ ಮನೆಯವರ ಒತ್ತಡದಿಂದ ನನ್ನನ್ನ ಅರ್ಧದಲ್ಲಿಯೇ ಬಿಟ್ಟು ಹೋದ. ನಾನು, ಆಕಾಶ್ ಈಗ ಬೇರೆ ಬೇರೆಯಾಗಿದ್ದೀವಿ. ಈಗ ನನ್ನ-ಆಕಾಶ್ ನಡುವೆ ಏನೂ ಇಲ್ಲ. ಕಷ್ಟದಲ್ಲಿ ಅವನು ಸಹಾಯ ಮಾಡಲಿಲ್ಲ. ನನ್ನ ಉಳಿದ ಸ್ನೇಹಿತರು ನಮಗೆ ಸಹಾಯ ಮಾಡಿದ್ರು. ಜೀವ ಭಯದಿಂದ ಹೊರಗೆ ಉಳಿದುಕೊಂಡಿದ್ದೆ. ಅದನ್ನು ಹೊರತುಪಡಿಸಿ ನಾನು ಎಲ್ಲೂ ನಾಪತ್ತೆ ಆಗಿಲ್ಲ ಎಂದಿದ್ದಾರೆ.
Advertisement
ನನ್ನ ಅಪ್ಪ-ಅಮ್ಮ ನನ್ನ ವಿರುದ್ದವೇ ಹೇಳಿಕೆ ನೋಡಿ ಬೇಸರ ಆಗಿದೆ. ನಾನು ಈ ಪ್ರಕರಣ ಮುಗಿಯೋ ತನಕ ಅವರನ್ನು ಭೇಟಿ ಮಾಡೋದಿಲ್ಲ. ನನಗೆ ಅನ್ಯಾಯ ಮಾಡಿದವರ ಪರವಾಗಿ ಮಾತನಾಡಿದ್ದು, ನನಗೆ ಹಿಂಸೆ ಆಗಿದೆ. ಪ್ರಕರಣ ಮುಗಿದ ಬಳಿಕ ಅಷ್ಟೇ ನಾನು ನನ್ನ ಅಪ್ಪ-ಅಮ್ಮನ ಭೇಟಿ ಮಾಡ್ತೀನಿ ಎಂದು ಸಂತ್ರಸ್ತೆ ಹೇಳಿದ್ದಾರೆ. ವಿಚಾರಣೆಯ ಬಳಿಕ ಯುವತಿಯನ್ನು ಎಸ್ಐಟಿ ಅಧಿಕಾರಿಗಳು ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.