– 4 ದಶಕದ ಕನಸು ನನಸು
– ಹರ್ಷಗೊಂಡ ಶಿರಾ ಜನತೆ
ತುಮಕೂರು: ಶಿರಾ ಉಪಚುನಾವಣೆ ವೇಳೆ ರಾಜ್ಯ ಬಿಜೆಪಿ ಸರ್ಕಾರ ಜನತೆಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದೆ. ಆರು ತಿಂಗಳಲ್ಲಿ ಹೇಮಾವತಿ ನೀರನ್ನು ಮದಲೂರು ಕೆರೆಗೆ ಬಿಡುತ್ತೇವೆ ಎಂದು ಶಿರಾ ಉಪಚುನಾವಣೆ ವೇಳೆ ಸಿಎಂ ವಾಗ್ದಾನ ಮಾಡಿದ್ದರು. ಆದರಂತೆ ಸೋಮವಾರದಿಂದ ಕಳ್ಳಂಬೆಳ್ಳ ಕೆರೆಯಿಂದ ಹೇಮಾವತಿ ನೀರನ್ನು ಮದಲೂರು ಕೆರೆಗೆ ಬಿಡಲಾಗಿದ್ದು 40 ವರ್ಷದ ಕನಸು ನನಸಾಗಿದೆ.
Advertisement
ಉಪಚುನಾವಣೆ ವೇಳೆ ಮದಲೂರು ಕೆರೆಗೆ ನೀರು ಹರಿಸುವ ವಿಚಾರ ಸಾಕಷ್ಟು ಸದ್ದು ಮಾಡಿತ್ತು. ಒಂದು ಪಕ್ಷದವರು ಮದಲೂರು ಕೆರೆಗೆ ನಾಲೆ ಮಾಡಿದ್ದು ನಾವು ಎಂದರೆ ಇದನ್ನು ಯೋಜನೆ ಜಾರಿ ಮಾಡಿದ್ದು ನಾವು ಎಂದು ಇನ್ನೊಂದು ಪಕ್ಷದವರು ಪರಸ್ಪರ ವಾಗ್ದಾಳಿ ಮಾಡಿದ್ದರು. ಈ ನಡುವೆ ಸಿಎಂ ಯಡಿಯೂರಪ್ಪ ಅಕ್ಟೋಬರ್ 30 ರಂದು ಮದಲೂರು ನಲ್ಲಿ ಸಮಾವೇಶ ನಡೆಸಿ ಆರು ತಿಂಗಳ ಒಳಗಡೆ ಕೆರೆಗೆ ನೀರು ಬಿಡುತ್ತೇವೆ ಎಂದು ಘೋಷಣೆ ಮಾಡಿದ್ದರು.
Advertisement
Advertisement
ಉಪ ಚುನಾವಣೆ ಮುಗಿದ ಬಳಿಕ ಶಾಸಕ ರಾಜೇಶ್ ಗೌಡ ಮದಲೂರಿಗೆ ಅಧಿಕಾರಿಗಳನ್ನು ಕರೆದುಕೊಂಡು ಹೋಗಿ ಪರಿಶೀಲನೆ ನಡೆಸಿದ್ದರು. 40ಕ್ಕೂ ಹೆಚ್ಚು ಜೆಸಿಬಿ ಮೂಲಕ ಕೆರೆಯಲ್ಲಿದ್ದ ಸೀಮೆಜಾಲಿಯನ್ನು ತೆರವು ಮಾಡಲಾಗಿತ್ತು. ಈಗ ಕಳ್ಳಂಬೆಳ್ಳ ಕೆರೆಯಿಂದ ಮದಲೂರು ಕೆರೆಗೆ ಹೇಮಾವತಿ ನೀರನ್ನು ನಾಲೆ ಮೂಲಕ 200 ಕ್ಯೂಸೆಕ್ ನೀರು ಹರಿಸಲಾಗಿದೆ. ಮುಂದಿನ 24 ಗಂಟೆಯಲ್ಲಿ ಅಂದರೆ ಇಂದು ನೀರು ಮದಲೂರು ಕೆರೆಗೆ ತಲುಪಲಿದೆ. ಕೊಟ್ಟ ಮಾತನ್ನು 30 ದಿನದಲ್ಲೇ ಈಡೇರಿಸುವ ಮೂಲಕ ಸರ್ಕಾರ ವಿಪಕ್ಷಗಳಿಗೆ ತಿರುಗೇಟು ನೀಡಿದೆ.
Advertisement
ಮದಲೂರು ಕೆರೆಗೆ ನೀರು ಬಿಡಬೇಕೆಂದು ಈ ಭಾಗದ ಜನರು ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಭಾರೀ ಹೋರಾಟಗಳು ನಡೆದಿತ್ತು. ಈ ಬಗ್ಗೆ ಶಿರಾ ಶಾಸಕ ಡಾ.ರಾಜೇಶ್ ಗೌಡ ಪ್ರತಿಕ್ರಿಯೆ ನೀಡಿದ್ದು, ಕಳ್ಳಂಬೆಳ್ಳ ಕೆರೆಯಲ್ಲಿ ಸಾಕಷ್ಟು ನೀರು ಸಂಗ್ರಹಣೆಯಾಗಿದೆ. ಹೀಗಾಗಿ ಉಪಚುನಾವಣೆ ವೇಳೆ ಮದಲೂರು ಕೆರೆಗೆ ಕೊಟ್ಟ ಮಾತಿನಂತೆ ನೀರು ಹರಿಸಿದ್ದು ಇನ್ನೂ ಒಂದೂವರೆ ತಿಂಗಳ ಕಾಲ ನೀರು ಹರಿಯಲಿದೆ. ಇದಕ್ಕೆ ಸಹಕರಿಸಿದ ಸಿಎಂ ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸ್ಥಳೀಯ ನಾಯಕರಿಗೆ ಹಾಗೂ ಹೋರಾಟಗಾರಿಗೆ ಕೃತಜ್ಞತೆ ತಿಳಿಸಿದ್ದಾರೆ.
ಬಿಜೆಪಿ ವಿರೋಧಿಸಿತ್ತು: ಈ ಪ್ರಯತ್ನ ಈ ಮೊದಲು ಮಾಜಿ ಸಚಿವ ಟಿ.ಬಿ.ಜಯಚಂದ್ರರೂ ಮಾಡಿದ್ದರು. ಆಗ ಇದೇ ಬಿಜೆಪಿ ಪಕ್ಷದವರು ಮದಲೂರು ಕೆರೆಗೆ ಹೇಮಾವತಿ ನೀರು ಬಿಡಲು ಸಾಧ್ಯವಿಲ್ಲ ಎಂದು ವಾದ ಮಾಡಿದ್ದರು. ಅಲ್ಲದೆ ಕಳ್ಳಂಬೆಳ್ಳದಿಂದ ಮದಲೂರು ಕೆರೆವರೆಗೂ ಸುಮಾರು 110 ಕಿ.ಮೀ ದೂರ ಜಯಚಂದ್ರ ನಾಲೆ ನಿರ್ಮಾಣ ಮಾಡಿದ್ದರು. ಅಲ್ಲಲ್ಲಿ ಬ್ಯಾರೇಜ್ ಗಳನ್ನು ನಿರ್ಮಾಣ ಮಾಡಿರುವ ಕಾರಣ ನೀರು ಪೋಲಾಗುತ್ತದೆ. ಹಾಗಾಗಿ ನಾಲೆ ಕಾಮಗಾರಿ ಅವೈಜ್ಞಾನಿಕವಾಗಿ ಎಂದು ಎಂದು ಬಿಜೆಪಿಯವರು ಆಪಾದನೆ ಮಾಡುತಿದ್ದರು. ಆದರೆ ಅದೇ ನಾಲೆ ಮೂಲಕ ಇಂದು ನೀರು ಹರಿಸಿ ಮಾತನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿದೆ. ಮದಲೂರು ಕೆರೆಗೆ ನೀರಿನ ಹಂಚಿಕೆ ಇಲ್ಲದೇ ಇದ್ದರೂ ನೀರು ಹರಿಸಿದ್ದಾರೆ ಎಂದು ಕುಣಿಗಲ್ ಕಾಂಗ್ರೆಸ್ ಶಾಸಕ ರಂಗನಾಥ್ ಪ್ರತಿಕ್ರಿಯಿಸಿದ್ದಾರೆ.