ಬೆಂಗಳೂರು: ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಪೊಲೀಸರಿಂದ ಬಂಧನವಾಗಿರುವ ನಟಿ ರಾಗಿಣಿ ಅವರನ್ನು ಮತ್ತೆ ಮೂರು ದಿನಗಳ ಕಾಲ ಸಿಸಿಬಿ ಪೊಲೀಸರ ಕಸ್ಟಡಿಗೆ ನ್ಯಾಯಾಲಯ ನೀಡಿದೆ. ಸೋಮವಾರದ ವರೆಗೂ ನಟಿ ರಾಗಿಣಿ ಅವರು ಪೊಲೀಸ್ ಕಸ್ಟಡಿಯಲ್ಲೇ ಉಳಿಯಲ್ಲಿದ್ದಾರೆ.
ಇಂದು ನಟಿ ರಾಗಿಣಿ ಮತ್ತು ಸಂಜನಾ ಅವರನ್ನು ಸಿಸಿಬಿ ಪೊಲೀಸರು ವಿಡಿಯೋ ಕಾನ್ಫರೆನ್ಸ್ ಮೂಲಕ 1ನೇ ಎಸಿಎಂಎಂ ಕೋರ್ಟ್ ಜಡ್ಜ್ ಮುಂದೆ ಹಾಜರು ಪಡಿಸಿದ್ದರು. ಈ ವೇಳೆ ವಿಚಾರಣೆಯನ್ನು ಮುಂದುವರಿಸಲು ನಟಿಯನ್ನು ಮತ್ತೆ 6 ದಿನ ಪೊಲೀಸ್ ಕಸ್ಟಡಿಗೆ ನೀಡಲು ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಅಲ್ಲದೇ ಪ್ರಕರಣದಲ್ಲಿ ಇದುವರೆಗೂ ಆಗಿರುವ ತನಿಖೆಯ ಮಾಹಿತಿಯನ್ನು ಕೋರ್ಟಿಗೆ ಸಲ್ಲಿಸಿದ್ದರು.
Advertisement
Advertisement
ಆರೋಪಿ ರವಿ ಶಂಕರ್ ನೀಡಿರುವ ಮಾಹಿತಿ ಮೇರೆಗೆ ಮತ್ತೊಂದು ಪ್ರಕರಣ ದಾಖಲಿಸಲಾಗಿದೆ. ಅಲ್ಲದೇ ಆರೋಪಿ ನೀಡಿರುವ ಹೇಳಿಕೆಗಳಿಗೆ ರಾಗಿಣಿ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ವಿಚಾರಣೆಗೂ ಸಹಕಾರ ನೀಡುತ್ತಿಲ್ಲ. ಉದ್ದೇಶ ಪೂರ್ವಕವಾಗಿ ತನಿಖೆ ವಿಳಂಬ ಮಾಡುತ್ತಿದ್ದಾರೆ. ಅಲ್ಲದೇ ನ್ಯಾಯಾಂಗ ಬಂಧನಕ್ಕೆ ನೀಡಿದರೇ ಈಗಾಗಲೇ ನಡೆದಿರುವ ತನಿಖಾ ಅಂಶಗಳು ಲೀಕ್ ಹಾಗುವ ಸಾಧ್ಯತೆ ಇದೆ. ಈಗಾಗಲೇ ರಕ್ತ ಮಾದರಿ ಪರೀಕ್ಷೆಗೆ ನೀಡಲಾಗಿದ್ದು, ಆದರೆ ಆ ವರದಿ ಇನ್ನೂ ಬಂದಿಲ್ಲ ಎಂದು ಸಿಸಿಬಿ ಪೊಲೀಸರು ತಮ್ಮ ಮಾಹಿತಿಯನ್ನು ನೀಡಿದರು. ಪೊಲೀಸರ ಮನವಿಯನ್ನು ಪುರಸ್ಕರಿಸಿದ ಕೋರ್ಟ್ 3 ದಿನಗಳವರೆಗೆ ಕಸ್ಟಡಿಗೆ ನೀಡಿದೆ.
Advertisement
Advertisement
ಇತ್ತ ರಾಗಿಣಿ ಪರ ವಕೀಲರು ತಮ್ಮ ವಾದ ಮಂಡಿಸಿ, ಈಗಾಗಲೇ 8 ದಿನ ಪೊಲೀಸ್ಟ್ ಕಸ್ಟಡಿಗೆ ನೀಡಲಾಗಿದೆ. ಪ್ರಕರಣದಲ್ಲಿ ರಕ್ತ ಮಾದರಿಯ ಪರೀಕ್ಷೆ ಬಿಟ್ಟು ಬೇರೆ ಯಾವುದೇ ಪ್ರಗತಿ ಮಾಡಿಲ್ಲ. ನನ್ನ ಕಕ್ಷಿದಾರರು ಈಗಾಗಲೇ ತಮಗೇ ತಿಳಿದಿರುವ ಮಾಹಿತಿಯನ್ನು ತಿಳಿಸಿದ್ದಾರೆ. ನನ್ನ ನ್ಯಾಯಾಂಗ ಬಂಧನ ನೀಡುವಂತೆ ಮನವಿ ಮಾಡಿದ್ದರು. ರಾಗಿಣಿ ಅವರ ಆರೋಗ್ಯದ ಬಗ್ಗೆಯೂ ವಕೀಲರು ಕೋರ್ಟ್ ಗಮನಕ್ಕೆ ತಂದಿದ್ದರು.
ರಾಗಿಣಿ ಪರ ವಕೀಲರು ನ್ಯಾಯಾಂಗ ಬಂಧನಕ್ಕೆ ಕೋರಲು ಪ್ರಮುಖ ಕಾರಣವಿದ್ದು, ಈಗಾಗಲೇ ರಾಗಿಣಿ ಅವರು ಸಲ್ಲಿಕೆ ಮಾಡಿರುವ ಜಾಮೀನು ಅರ್ಜಿಯನ್ನು ನ್ಯಾಯಾಲಯ ಸೆ.14ಕ್ಕೆ ಮುಂದೂಡಿ, ಸಿಸಿಬಿಗೆ ನೋಟಿಸ್ ಜಾರಿ ಮಾಡಿದೆ. ಪೊಲೀಸರು ಸೋಮವಾರ ನ್ಯಾಯಾಲಯಕ್ಕೆ ತನಿಖೆಯ ಮಾಹಿತಿಯನ್ನು ನೀಡಿ ಉತ್ತರಿಸಲಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಕಸ್ಟಡಿ ಮುಂದುವರಿದರೇ ಜಾಮೀನು ಪಡೆಯಲು ಸಂಕಷ್ಟ ಎದುರಾಗಲಿದೆ ಎಂಬ ಉದ್ದೇಶದಿಂದ ನ್ಯಾಯಾಂಗ ಬಂಧನಕ್ಕೆ ನೀಡಲು ವಕೀಲರು ಮನವಿ ಮಾಡಿದ್ದರು ಎನ್ನಲಾಗಿದೆ.