– ತಲವಾರಿನಿಂದ ಕಡಿದು, ಬಂದೂಕಿನಿಂದ ಹೊಡೆದು ಶೂಟೌಟ್
– ಮಚ್ಚಿನಿಂದ ಕಾರನ್ನು ಪುಡಿಗೈದ ಆರೋಪಿಗಳು
ಮಂಗಳೂರು: ಇಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಬಂದೂಕಿನ ಸದ್ದಿಗೆ ಬೆಚ್ಚಿ ಬಿದ್ದಿತ್ತು. ಬೆಳಗ್ಗೆ 6:45ರ ಸುಮಾರಿಗೆ ಸುಳ್ಯದ ಶಾಂತಿನಗರ ಬಳಿ ಗುಂಡಿನ ದಾಳಿ ನಡೆದಿತ್ತು. ಗುಂಡಿನ ದಾಳಿ ವೇಳೆ ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಕಲ್ಲುಗುಂಡಿ ನಿವಾಸಿ ಸಂಪತ್ ಕುಮಾರ್ ಬಲಿಯಾಗಿ ಹೋಗಿದ್ದ.
ಅಷ್ಟಕ್ಕೂ ಈ ಸಂಪತ್ ಕುಮಾರ್ ಓರ್ವ ಕೊಲೆ ಆರೋಪಿ. 2019 ಮಾರ್ಚ್ 20 ರಂದು ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ, ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಕಳಗಿ ಎಂಬವರ ಕೊಲೆಯಾಗಿತ್ತು. ಅಪಘಾತ ಮಾಡುವ ರೀತಿಯಲ್ಲಿ ಸ್ಕೆಚ್ ಹಾಕಿ ಕೊಲೆ ಮಾಡಿದ್ದರು. ಆ ಕೊಲೆಯ ಮಾಸ್ಟರ್ ಮೈಂಡ್ ಬೇರೆ ಯಾರು ಅಲ್ಲ ಇಂದು ಬರ್ಬರವಾಗಿ ಗುಂಡೇಟು ತಿಂದು ಕೊಲೆಯಾಗಿ ಹೋದ ಇದೇ ಸಂಪತ್ ಕುಮಾರ್.
Advertisement
Advertisement
Advertisement
ಕಲ್ಲುಗುಂಡಿ ನಿವಾಸಿಯಾಗಿದ್ದರೂ ಸುಳ್ಯದ ಶಾಂತಿನಗರದಲ್ಲಿ ಒಂದು ದೊಡ್ಡ ಮನೆಯನ್ನು ಬಾಡಿಗೆ ಪಡೆದು ವಾಸವಿದ್ದ. ಮರಳುಗಾರಿಕೆ, ಕಲ್ಲು ಗಣಿಗಾರಿಕೆ ಟಚ್ ಇದ್ದ ಸಂಪತ್ ಕುಮಾರ್ ಲಾರಿಗಳನ್ನು ಇಟ್ಟುಕೊಂಡು ಒಳ್ಳೆ ಹಣ ಮಾಡುತ್ತಿದ್ದ. ಕಳೆದ ಮೂರು ತಿಂಗಳಿಂದ ಇದೇ ಮನೆಯಲ್ಲಿ ಒಬ್ಬಂಟಿಯಾಗಿ ವಾಸವಿದ್ದ.
Advertisement
ಸಿನಿಮಾ ಸ್ಟೈಲ್ ನಲ್ಲಿ ಕೊಲೆ
ಸಂಪತ್ ಕುಮಾರ್ ತನ್ನ ಕಾರಿನಲ್ಲಿ ಹೋಗಿ ಬರುತ್ತಿದ್ದ. ಇಂದು ಬೆಳಗ್ಗೆ ಆರೂ ಮುಕ್ಕಾಲರ ಸಮಯದಲ್ಲಿ ಮನೆಯಿಂದ ಹೊರಟ ಸಂಪತ್ ಕುಮಾರ್ನನ್ನು ಮನೆಯಿಂದ 200 ಮೀಟರ್ ದೂರದಲ್ಲಿ ಅಡ್ಡ ಹಾಕಲಾಗಿತ್ತು. ಅಡ್ಡಹಾಕಿದ ತಂಡ ಸಂಪತ್ ಕುಮಾರ್ ಕಾರಿಗೆ ಮಚ್ಚಿನಿಂದ ಹೊಡೆದು ಪುಡಿಪುಡಿ ಮಾಡಿದ್ದರು. ಕಾರು ಮುಂದೆ ಹೋಗದಂತೆ ಮತ್ತೊಂದು ಕಾರು ಅಡ್ಡ ಇಟ್ಟು ಬಂದೂಕು ತೆಗೆದು ಶೂಟ್ ಮಾಡಲು ಮುಂದಾಗಿದ್ದರು.
ಕಾರನ್ನು ಹಿಂದಕ್ಕೆ ತೆಗೆಯಲೂ ಆಗದೆ ಸಂಪತ್ ಕುಮಾರ್ ಕಾರಿನಿಂದ ಇಳಿದು ಅಡಕೆ ತೋಟದ ಮಾರ್ಗವಾಗಿ ಓಡಿಹೋಗಿದ್ದ. ಆತನನ್ನು ಅಟ್ಟಾಡಿಸಿಕೊಂಡು ಹೋದ ನಾಲ್ಕು ಜನ ದುಷ್ಕರ್ಮಿಗಳು ಆತನ ಹಿಂದೆಯೇ ಹೋದರು. ತನ್ನ ಮನೆಯ ಕೆಳಭಾಗದಲ್ಲಿ ಇದ್ದ ಮತ್ತೊಂದು ಮನೆ ಒಳಗೆ ನುಗ್ಗಿದ್ದನು. ಈ ಮನೆಯ ಮಾಲೀಕ ಹೊರಗಡೆ ಕೆಲಸ ಮಾಡುತ್ತಾ ನಿಂತಿದ್ದು ಆತನ ಪತ್ನಿ ಮತ್ತು ಸಣ್ಣ ಮಗು ಮನೆಯ ಒಳಗಿದ್ದರು.
ಇನ್ನು ಮನೆಯೊಳಗೆ ರಕ್ತಸಿಕ್ತವಾಗಿ ಹೋದ ಸಂಪತ್ ನನ್ನು ಕಂಡು ಶೈಲಜಾ ಗಾಬರಿಯಾಗಿ ಯಾಕೆ ಮನೆ ಒಳಗೆ ಬಂದಿದ್ದು ಯಾಕೆ ಎಂದು ಕೇಳಿದ್ದಾರೆ.. ಅದಕ್ಕೆ ನಾಲ್ಕು ಜನ ಅಟ್ಟಾಡಿಸಿಕೊಂಡು ಬರುತ್ತಿದ್ದಾರೆ ಕಾಪಾಡಿ ಯಾರಿಗೂ ಹೇಳಬೇಡಿ ಅಂತ ಸಂಪತ್ ಕುಮಾರ್ ಹೇಳಿ ಒಳಗೆ ಹೋಗಿ ಮನೆಯ ಡೋರ್ ಲಾಕ್ ಮಾಡಿಕೊಂಡಿದ್ದಾನೆ.
ಇತ್ತ ಮನೆಯಿಂದ ಶೈಲಜಾ ಹೊರಗಡೆ ಬಂದು ಕಿರುಚಿಕೊಂಡಿದ್ದಾರೆ. ಬಳಿಕ ಪಕ್ಕದ ಮನೆಯವರು ಬಂದು ಅಲ್ಲಿದ್ದ ಮಗುವನ್ನು ಕರೆದುಕೊಂಡು ಹೋಗಿದ್ದಾರೆ. ಮನೆ ಒಳಗೆ ಇದ್ದ ಸಂಪತ್ ಕುಮಾರ್ ಬೆನ್ನಿಗೆ ಗುಂಡು ಹೊಡೆದು ಬಳಿಕ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಈ ಮನೆಯಲ್ಲಿ ನಾವು ಹೇಗೆ ವಾಸ ಮಾಡೋದು ಸರ್ಕಾರ ಬೇರೆ ಮನೆ ಮಾಡಿ ಕೊಡಲಿ ಅನ್ನೋದು ಈ ಮನೆಯವರ ಅಳಲು. ಇದನ್ನೂ ಓದಿ: ಅಪಘಾತವೆಂದು ಬಿಂಬಿಸಿ ಕೊಡಗು ಬಿಜೆಪಿ ಮುಖಂಡನ ಕೊಲೆಗೈದ ಆರೋಪಿಗಳು ಅಂದರ್- ಸಿಕ್ಕಿ ಬಿದ್ದಿದ್ದು ಹೇಗೆ?
ಮನೆಯೊಳಗೆ ಹೋದ ನಾಲ್ಕು ಜನ ದುಷ್ಕರ್ಮಿಗಳು ಎರಡು ಬಂದೂಕು ಹಿಡಿದಿದ್ದರು. ಒಂದು ಚೂರಿ ಎರಡು ತಲವಾರುಗಳನ್ನು ಹಿಡಿದಿದ್ದರಂತೆ. ಸ್ಥಳೀಯರೋರ್ವರು ಓರ್ವ ದುಷ್ಕರ್ಮಿಯ ಬಂದೂಕನ್ನು ಕಿತ್ತುಕೊಂಡು ಆತನನ್ನು ಹಿಡಿಯಲು ಯತ್ನಿಸಿದ್ದಾರೆ. ಆದರೆ ಆತನ ಕೈಗೆ ಮಚ್ಚಿನಿಂದ ಹೊಡೆದು ಪರಾರಿಯಾಗಲು ಯತ್ನಿಸಿದ್ದಾನೆ. ಉಳಿದವರು ಬಂದೂಕು ತೋರಿಸಿ ಆತನನ್ನು ಬಿಡಿಸಿಕೊಂಡು ಪರಾರಿಯಾಗಿದ್ದಾರೆ. ಆದರೆ ಹೋಗುವಾಗ ಒಂದು ಬಂದೂಕನ್ನು ಅಲ್ಲೇ ಬಿಟ್ಟು ಹೋಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಎಂ ಲಕ್ಷ್ಮೀಪ್ರಸಾದ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಬೆರಳಚ್ಚು ತಂಡ ಸ್ಥಳಕ್ಕೆ ಆಗಮಿಸಿ ಎಲ್ಲಾ ಸಾಕ್ಷ್ಯಗಳನ್ನು ಸಂಗ್ರಹಿಸಿ ಕೊಂಡುಹೋಗಿದ್ದಾರೆ. ಸಾಕಷ್ಟು ಸಂಖ್ಯೆಯಲ್ಲಿ ಜನರು ಇದನ್ನು ನೋಡಲು ನೆರೆದಿದ್ದರು. ಆರೋಪಿಗಳು ಯಾರು ಎಂಬ ಜಾಡುಹಿಡಿದು ಎರಡು ತಂಡ ಆರೋಪಿಗಳ ಪತ್ತೆಗಾಗಿ ಹೋಗಿದ್ದಾರೆ. ಆರೋಪಿಗಳ ಸುಳಿವು ಕೂಡ ಸಿಕ್ಕಿದ್ದು ಹಳೆಯ ದ್ವೇಷಕ್ಕೆ ಕೊಲೆ ಆಗಿದೆ ಅನ್ನೋದು ಪ್ರಾಥಮಿಕ ವರದಿಯಲ್ಲಿ ದೃಢಪಟ್ಟಿದೆ. ಇದನ್ನೂ ಓದಿ: ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹತ್ಯೆ – ಆರೋಪಿಗಳ ಗಡಿಪಾರಿಗೆ ಆಗ್ರಹಿಸಿ ಜನಾಂದೋಲನ
ಕಳೆದ ಜೂನ್ ತಿಂಗಳಲ್ಲಿ ಜೈಲಿನಿಂದ ಬಿಡುಗಡೆಯಾಗಿ ಬಂದು ಸುಳ್ಯದಲ್ಲಿ ಒಳ್ಳೆ ಹಣ ಮಾಡುತ್ತಿದ್ದ ಸಂಪತ್ ಕುಮಾರ್ ಈಗ ಏಕಾಏಕಿ ಕೊಲೆಯಾಗಿ ಹೋಗಿದ್ದಾನೆ. ಸದ್ಯ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ. ಏನೇ ಇದ್ದರೂ ಕೊಲೆ ಮಾಡಿದವನು ಕೊಲೆಯಿಂದಲೇ ಸಾಯುತ್ತಾನೆ ಅನ್ನೋದು ಮತ್ತೆ ಮತ್ತೆ ಸಾಬೀತಾಗುತ್ತಿದೆ.