ಮಡಿಕೇರಿ: ಮಡಿಕೇರಿ ನಗರಸಭೆ ಚುನಾವಣೆಗೆ ಮಂಗಳಮುಖಿಯೊಬ್ಬರು ಸ್ಪರ್ಧಿಸುವ ಮೂಲಕ ಕೊಡಗು ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ತೃತೀಯ ಲಿಂಗಿಯೊಬ್ಬರು ನಗರಸಭೆ ಚುನಾವಣೆಗೆ ಸ್ಪರ್ಧಿಸಿದಂತಾಗಿದೆ.
ಮಂಗಳಮುಖಿ ದೀಕ್ಷಾ ಅವರು ಮಡಿಕೇರಿ ನಗರಸಭೆ ಚುನಾವಣೆಗೆ ಸ್ಪರ್ಧಿಸಿದ್ದು, ನಗರದ ಸಾಮಾನ್ಯ ಕ್ಷೇತ್ರವಾಗಿರುವ ಚಾಮುಂಡೇಶ್ವರಿ ನಗರ ಮತ್ತು ಇಂದಿರಾ ನಗರದ 21 ನೇ ವಾರ್ಡಿನಿಂದ ಕಣಕ್ಕಿಳಿದಿದ್ದಾರೆ. ಸತೀಶ್ ಪೈ ಅವರು ದೀಕ್ಷಾ ಅವರ ಚುನಾವಣೆಗೆ ಸಂಪೂರ್ಣ ಬೆಂಬಲವಾಗಿ ನಿಂತಿದ್ದಾರೆ.
Advertisement
Advertisement
ಮಡಿಕೇರಿ ನಗರಸಭೆಗೆ ಆಗಮಿಸಿದ ದೀಕ್ಷಾ, ಎಲ್ಲ ದಾಖಲಾತಿಗಳೊಂದಿಗೆ ನಾಮಪತ್ರ ಸಲ್ಲಿಸಿದರು. ಯಾವುದೇ ಪಕ್ಷ ಇವರಿಗೆ ಟಿಕೆಟ್ ನೀಡಲು ಮುಂದೆ ಬಂದಿಲ್ಲ. ಹೀಗಾಗಿ ದೀಕ್ಷಾ ಸ್ವತಂತ್ರ ಅಭ್ಯರ್ಥಿಯಾಗಿಯೇ ಸ್ಪರ್ಧಿಸುತ್ತಿದ್ದು, ಇಂದು ನಾಮಪತ್ರ ಸಲ್ಲಿಸಿದರು. ಬಳಿಕ ಚಾಮುಂಡೇಶ್ವರಿ ನಗರದಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ನಡೆಸುತ್ತಿದ್ದು, ಬೆಂಬಲಿಸುವಂತೆ ಮನವಿ ಮಾಡುತ್ತಿದ್ದಾರೆ.
Advertisement
ಈ ಸಂದರ್ಭದಲ್ಲಿ ಮಾತನಾಡಿದ ದೀಕ್ಷಾ, ಕೊಡಗು ಜಿಲ್ಲೆಯಲ್ಲಿ ಇದೇ ಮೊದಲನೇ ಬಾರಿಗೆ ಮಂಗಳಮುಖಿಯೊಬ್ಬರು ಚುನಾವಣೆಗೆ ಸ್ಪರ್ಧಿಸುತ್ತಿರೋದು. ಈ ವರೆಗೆ ಮಂಗಳ ಮುಖಿಯರೆಂದರೆ ಕೇವಲ ಭಿಕ್ಷೆ ಬೇಡಿಕೊಂಡು ಜೀವನ ಮಾಡೋದು, ಇಲ್ಲವೇ ಲೈಂಗಿಕ ಕಾರ್ಯಕರ್ತರಾಗಿ ಕೆಲಸ ಮಾಡುವವರು ಎನ್ನುವ ಮನೋಭಾವನೆ ಜನರಲ್ಲಿ ಇದೆ. ಆದರೆ ನಮಗೂ ಸ್ವಾಭಿಮಾನದ ಬದುಕು ನಡೆಸಲು ಅವಕಾಶವಿದೆ ಎನ್ನೋದನ್ನು ತೋರಿಸಬೇಕಾಗಿದೆ ಎಂದರು.
Advertisement
ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡುತ್ತೇನೆ. ಮೂರು ವರ್ಷಗಳ ಕಾಲ ಆಶಾ ಕಾರ್ಯಕರ್ತೆಯಾಗಿ ಕೆಲಸ ಮಾಡಿದ್ದೇನೆ. ಒಂದು ವರ್ಷದಿಂದ ಸ್ವಸಹಾಯ ಸಂಘಗಳಲ್ಲೂ ಕೆಲಸ ಮಾಡಿ ಗುರುತಿಸಿಕೊಂಡಿದ್ದೇನೆ. ಕ್ಷೇತ್ರದಲ್ಲಿ ಸಾಕಷ್ಟು ಜನ ಪರಿಚಯವಿದ್ದು, ಗೆಲ್ಲಿಸುತ್ತಾರೆ ಎನ್ನುವ ವಿಶ್ವಾಸವಿದೆ. ಸತೀಶ್ ಪೈ ಅವರು ಸಾಕಷ್ಟು ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ದೀಕ್ಷಾ ಅವರಿಗೆ ಬೆಂಬಲವಾಗಿ ನಿಂತಿರುವ ಸತೀಶ್ ಪೈ, ಮಂಗಳ ಮುಖಿಯರೆಂದರೆ ಕೀಳಾಗಿ ನೋಡುವವರೇ ಹೆಚ್ಚು. ಆದರೆ ತುಳಿತಕ್ಕೆ ಒಳಗಾದವರು ಸಮಾಜದಲ್ಲಿ ಬೆಳೆದು ಸ್ವಾವಲಂಬಿಗಳಾಗಬೇಕೆಂಬ ಆಕಾಂಕ್ಷೆ ಇದೆ. ಹೀಗಾಗಿ ಚುನಾವಣೆಗೆ ಸ್ಪರ್ಧಿಸಿರುವ ದೀಕ್ಷಾ ಅವರಿಗೆ ಸಂಪೂರ್ಣ ಬೆಂಬಲವಾಗಿ ನಿಂತಿದ್ದೇನೆ ಎಂದು ಪೈ ತಿಳಿಸಿದರು.