– ಇನ್ಮುಂದೆ ಗರ್ಭಧರಿಸಲು ಸಾಧ್ಯವಿಲ್ಲ ಎಂದ ವೈದ್ಯರು
ಲಕ್ನೋ: ವ್ಯಕ್ತಿಯೊಬ್ಬ ಹುಟ್ಟುವ ಮಗು ಗಂಡೋ ಅಥವಾ ಹೆಣ್ಣೋ ಎಂದು ತಿಳಿಯಲು ಪತ್ನಿಯ ಹೊಟ್ಟೆಗೆ ಚಾಕುವಿನಿಂದ ಇರಿದಿದ್ದನು. ಇದೀಗ ಮಹಿಳೆಯ ಗರ್ಭದಲ್ಲಿದ್ದ ಶಿಶು ಸಾವನ್ನಪ್ಪಿದ್ದು, ಹೊಟ್ಟೆಯಲ್ಲಿ ಗಂಡು ಮಗುವಿತ್ತು ಎಂಬುದು ಗೊತ್ತಾಗಿದೆ. ಅಲ್ಲದೇ ಆಕೆಯ ಗರ್ಭಕೋಶಕ್ಕೆ ತೀವ್ರವಾಗಿ ಗಾಯಗಳಾಗಿರುವ ಪರಿಣಾಮ ಇನ್ನೂ ಮುಂದೆ ಮಹಿಳೆ ಗರ್ಭಧರಿಸಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಮಗು ಹೆಣ್ಣೋ, ಗಂಡೋ ನೋಡಲು ಪತ್ನಿ ಹೊಟ್ಟೆಗೆ ಇರಿದ ಪತಿ
Advertisement
ಈ ಭಯಾನಕ ಘಟನೆ ಉತ್ತರ ಪ್ರದೇಶದ ಬುದೌನ್ನಲ್ಲಿ ಭಾನುವಾರ ನಡೆದಿತ್ತು. ಏಳು ತಿಂಗಳ ಗರ್ಭಿಣಿಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಯ ವೈದ್ಯರು ಚಿಕಿತ್ಸೆ ಮೂಲಕ ಅನಿತಾ ದೇವಿಯ ಜೀವವನ್ನು ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಗರ್ಭದಲ್ಲಿದ್ದ ಗಂಡು ಶಿಶು ಸಾವನ್ನಪ್ಪಿದೆ. ಅಲ್ಲದೇ ದೇವಿಯ ಗರ್ಭಾಶಯಕ್ಕೆ ತೀವ್ರವಾಗಿ ಗಾಯವಾದ ಕಾರಣ ಆಕೆ ಮುಂದೆ ಎಂದಿಗೂ ಗರ್ಭಧರಿಸಲು ಸಾಧ್ಯವಾಗುವುದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
Advertisement
Advertisement
ಸದ್ಯಕ್ಕೆ ದೇವಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇತ್ತ ಪತಿ ಪನ್ನಾಲಾಲ್ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಜೈಲಿಗೆ ಕಳುಹಿಸಲಾಗಿದೆ. ಆರೋಪಿ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು. ಆದರೆ ಶಿಶುವಿನ ಮರಣದ ನಂತರ ಪೊಲೀಸರು ಹೆಚ್ಚಿನ ಪ್ರಕರಣಗಳನ್ನು ಆತನ ವಿರುದ್ಧ ದಾಖಲಿಸುವ ಪ್ರಕ್ರಿಯೆಯಲ್ಲಿದ್ದಾರೆ. ಇನ್ನೂ ಐದು ಮಕ್ಕಳು ಅನಿತಾಳ ಸಂಬಂಧಿಕರ ಮನೆಯಲ್ಲಿದ್ದಾರೆ.
Advertisement
ನನ್ನ ಸಹೋದರಿ ಸ್ಥಿತಿ ನೋಡಿ ನಾನು ಭರವಸೆ ಕಳೆದುಕೊಂಡಿದ್ದೆ. ಆದರೆ ಸಫ್ದರ್ಜಂಗ್ ಆಸ್ಪತ್ರೆಯ ವೈದ್ಯರು ಮತ್ತು ಸಹಾಯಕ ಸಿಬ್ಬಂದಿ ದೇವರಂತೆ ಬಂದು ನನ್ನ ಸಹೋದರಿಯ ಜೀವವನ್ನು ಉಳಿಸಿದರು. ದುರದೃಷ್ಟವಶಾತ್ ಆಕೆಯ ಗರ್ಭದಲ್ಲಿರುವ ಮಗು ನಿಜವಾಗಿ ಗಂಡು ಮಗುವಾಗಿತ್ತು. ಆದರೆ ಗರ್ಭಾಶಯಕ್ಕೆ ಆದ ಗಾಯದಿಂದಾಗಿ ಮಗು ಸಾವನ್ನಪ್ಪಿದೆ. ಅಲ್ಲದೇ ತನ್ನ ತಂಗಿ ಮತ್ತೆ ಗರ್ಭಧರಿಸಲು ಸಾಧ್ಯವಾಗದಿರಬಹುದು ಅಂತ ವೈದ್ಯರು ತಿಳಿಸಿದ್ದಾರೆ ಎಂದು ದೇವಿಯ ಸಹೋದರ ರವಿ ಸಿಂಗ್ ಹೇಳಿದ್ದಾರೆ.
ಮಹಿಳೆಯ ವೈದ್ಯಕೀಯ ವರದಿಯನ್ನು ಸ್ವೀಕರಿಸಿದ ನಂತರ ಮತ್ತು ಆಕೆಯ ಹೇಳಿಕೆಯನ್ನು ದಾಖಲಿಸಿದ ನಂತರ ನಾವು ಭ್ರೂಣ ಹತ್ಯೆಯ ಆರೋಪವನ್ನು ಆತನ ವಿರುದ್ಧ ದಾಖಲಿಸುತ್ತೇವೆ. ಈಗಾಗಲೇ ಆರೋಪಿ ಪನ್ನಾಲಾಲ್ನನ್ನು ಜೈಲಿಗೆ ಕಳುಹಿಸಲಾಗಿದೆ. ಸದ್ಯಕ್ಕೆ ಹೆಚ್ಚಿನ ತನಿಖೆಗಾಗಿ ನಾವು ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ನೀಡುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುತ್ತೇವೆ ಎಂದು ಸ್ಟೇಷನ್ ಹೌಸ್ ಆಫೀಸರ್ ಸುಧಾಕರ್ ಪಾಂಡೆ ತಿಳಿಸಿದರು.
ನಡೆದಿದ್ದೇನು?
ಆರೋಪಿ ಪನ್ನಾಲಾಲ್ ಮತ್ತು ಪತ್ನಿ ಅನಿತಾ ದೇವಿ ದಂಪತಿಗೆ ಐವರು ಹೆಣ್ಣು ಮಕ್ಕಳಿದ್ದು, ಆರನೇ ಮಗುವಿನ ನಿರೀಕ್ಷೆಯಲ್ಲಿದ್ದರು. ಆದರೆ ಪನ್ನಾಲಾಲ್ಗೆ ಗಂಡು ಮಗುವಿನ ಅತಿಯಾದ ವ್ಯಾಮೋಹವಿತ್ತು. ಈ ಸಂಬಂಧ ದಂಪತಿ ನಡುವೆ ಆಗಾಗ ಜಗಳ ಸಹ ನಡೆಯುತ್ತಿತ್ತು. ಭಾನುವಾರ ದಂಪತಿ ನಡುವೆ ಹುಟ್ಟುವ ಮಗುವಿನ ಬಗ್ಗೆ ಜಗಳ ನಡೆದಿದೆ. ಈ ವೇಳೆ ಪನ್ನಾಲಾಲ್ ಮಗು ಯಾವುದು ಎಂದು ನೋಡಲು ಏಳು ತಿಂಗಳ ಗರ್ಭಿಣೆ ಹೊಟ್ಟೆಗೆ ಇರಿದಿದ್ದನು.