– ಹಲವು ಅನುಮಾನಗಳಿಗೆ ಕಾರಣವಾಯ್ತು ಪ್ರಕರಣ
ಮಂಡ್ಯ: 4 ವರ್ಷದ ಮಗು ಸೇರಿ ಇಬ್ಬರು ಸಜೀವದಹನ ಆಗಿರುವ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಅಗಚಹಳ್ಳಿ ಗ್ರಾಮದಲ್ಲಿ ನಡೆದಿದೆ. ದುರ್ಘಟನೆಯಲ್ಲಿ ತನ್ವಿತ್(4), ದೀಪಕ್(33) ಸಾವನ್ನಪ್ಪಿದ್ದಾರೆ. ಮಗುವಿನ ತಂದೆ ಭರತ್ ದೇಹ ಶೇ.90 ರಷ್ಟು ಸುಟ್ಟಿರುವುದರಿಂದ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.
Advertisement
ಮೂಲತಃ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯವರಾದ ಭರತ್ ನಾಗಮಂಗಲದಲ್ಲಿ ಪೇಂಟಿಂಗ್ ವೃತ್ತಿ ಮಾಡಿಕೊಂಡಿದ್ದರು. ಕಳೆದ 5ವರ್ಷಗಳ ಹಿಂದೆ ಮದುವೆಯಾಗಿದ್ದ ಭರತ್, ಇತ್ತೀಚೆಗೆ ಪತ್ನಿ ಜೊತೆ ಮುನಿಸಿಕೊಂಡು ದೂರಾಗಿದ್ದರು. ಬಳಿಕ ತನ್ನ ಮಗ ತನ್ವಿತ್ ಜೊತೆ ಬೆಳ್ಳೂರಿನ ಅಗಚಹಳ್ಳಿಯ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ರು. ತಾನಾಯ್ತು ತನ್ನ ಕೆಲಸವಾಯ್ತು ಅಂತಿದ್ದ ಭರತ್ ಮನೆಗೆ ನಿನ್ನೆ ಆತನ ಸಂಬಂಧಿ ದೀಪಕ್ ಬಂದಿದ್ದಾನೆ. ಸಂಬಂಧಿ ಬಂದ ಖುಷಿಯಲ್ಲಿ ರಾತ್ರಿ ಇಬ್ಬರು ಎಣ್ಣೆ ಪಾರ್ಟಿ ಮುಗಿಸಿದ್ದಾರೆ. ಬಳಿಕ ಎಂದಿನಂತೆ ಪಕ್ಕದ ಮನೆಯವರನ್ನ ಮಾತನಾಡಿಸಿಕೊಂಡು ಭರತ್ ಮಲಗಲು ತೆರಳಿದ್ದಾನೆ. ಆದರೆ ಬೆಳಗ್ಗಿನ ಜಾವ 3:30ರಲ್ಲಿ ಭರತ್ ಮನೆಯಿಂದ ಜೋರಾದ ಶಬ್ದ ಕೇಳಿಬಂದಿದ್ದು, ಗಾಬರಿಯಿಂದ ಓಡಿಬಂದ ಪಕ್ಕದ ಮನೆಯವರಿಗೆ ಮಗು ಹಾಗೂ ಭರತ್ನ ಚೀರಾಟ ಕೇಳಿಬಂದಿದೆ. ಮನೆ ಕಿಟಕಿಯಿಂದ ಹೊಗೆ ಬರುತ್ತಿದ್ದರಿಂದ ಬೆಂಕಿ ತಗುಲಿರುವುದು ಖಚಿತವಾಗಿದೆ.
Advertisement
Advertisement
ತಕ್ಷಣ ಮನೆಮಾಲೀಕ ಮನೆ ಬೀಗ ಒಡೆದು ಒಳನುಗ್ಗಿದ್ದು. ಬೆಂಕಿ ನಂದಿಸಿ ಗಾಯಾಗಳನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ತನ್ವಿತ್ ಹಾಗೂ ಸಂಬಂಧಿ ದೀಪಕ್ ಮೃತಪಟ್ಟಿದ್ದಾರೆ. ತಂದೆ ಭರತ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಬೆಂಕಿ ಅವಘಡ ಎಂದುಕೊಂಡಿದ್ದ ಖಾಕಿಪಡೆಗೆ ಕೊಲೆಯ ವಾಸನೆ ಬಡಿದಿದ್ದು ತನಿಖೆ ಆರಂಭಿಸಿದ್ದಾರೆ.
Advertisement
ಅಕ್ಕ-ಪಕ್ಕದ ಮನೆಯವರ ಹೇಳಿಕೆ ಸಂಗ್ರಹಿಸಿರುವ ಪೊಲೀಸರಿಗೆ, ನಿನ್ನೆ ರಾತ್ರಿ ದೀಪಕ್ ಜೊತೆ ಮತ್ತಿಬ್ಬರು ಭರತ್ ಮನೆಗೆ ಬಂದಿದ್ದ ಮಾಹಿತಿ ದೊರಕಿದೆ. ಎಲ್ಲರೂ ಒಟ್ಟಿಗೆ ಸೇರಿ ಎಣ್ಣೆ ಪಾರ್ಟಿ ಮಾಡಿದ್ದಾರೆ ಎನ್ನಲಾಗಿದೆ. ಘಟನಾ ಸ್ಥಳದಲ್ಲಿ ಬರ್ತಿದ್ದ ಪೆಟ್ರೋಲ್ ವಾಸನೆ ಹಾಗೂ ಮನೆಗೆ ಆಚೆಯಿಂದ ಹಾಕಲಾಗಿದ್ದ ಬೀಗ ಪೊಲೀಸರ ಸಂದೇಹ ಮತ್ತಷ್ಟು ಹೆಚ್ಚಿಸಿದ್ದು. ಎಲ್ಲರೂ ನಿದ್ದೆಗೆ ಜಾರಿದ ಬಳಿಕ ಹಂತಕರು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ.
ಅಗ್ನಿ ಅವಘಡ ಎಂದುಕೊಂಡಿದ್ದ ಪೊಲೀಸರಿಗೆ ಕೊಲೆಯ ಸುಳಿವು ಸಿಕ್ಕಿದ್ದು, ವಿವಿಧ ಆಯಾಮಗಳಿಂದ ತನಿಖೆ ಆರಂಭಿಸಿದ್ದಾರೆ.