ಮಂಗಳೂರು: ರಸ್ತೆ ಬದಿಯಲ್ಲಿ ತಡೆಗೋಡೆ ಕಾಮಗಾರಿ ನಡೆಯುತ್ತಿದ್ದ ವೇಳೆ ಗುಡ್ಡ ಕುಸಿದು ಮಣ್ಣಿನೊಳಗೆ ಸಿಲುಕಿದ ವ್ಯಕ್ತಿಯನ್ನು ಸ್ಥಳೀಯರು ಹರಸಾಹಸ ಪಟ್ಟು ರಕ್ಷಿಸಿದ ಘಟನೆ ಮಂಗಳೂರು ತಾಲೂಕಿನ ಕುಪ್ಪೆಪದವು ಬಳಿಯ ನೊನಾಲು ಎಂಬಲ್ಲಿ ನಡೆದಿದೆ.
ಮಣ್ಣಿನಡಿ ಸಿಲುಕಿದ್ದ ಬಂಟ್ವಾಳ ತಾಲೂಕಿನ ಅರಳ ಗ್ರಾಮದ ನಿವಾಸಿ ರಾಜೇಶ್ ಪೂಜಾರಿ (28)ಯನ್ನು ರಕ್ಷಿಸಲಾಗಿದ್ದು, ಕುಪ್ಪೆಪದವಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
Advertisement
Advertisement
ನೊನಾಲು-ಕುಕ್ಕಟ್ಟೆ-ಗಂಜಿಮಠ ರಸ್ತೆಯಲ್ಲಿ ಗುಡ್ಡ ಕುಸಿಯದಂತೆ ತಡೆಗೋಡೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ರಾಜೇಶ್ ಮತ್ತು ಇನ್ನೋರ್ವ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ಮೇಲಿಂದ ಮಣ್ಣು ಕುಸಿದು ಕೆಲಸಗಾರರ ಮೇಲೆ ಬಿದ್ದಿತ್ತು. ಈಗಾಗಲೇ ನಿರ್ಮಾಣವಾಗಿದ್ದ ತಡೆಗೋಡೆ ಮತ್ತು ಗುಡ್ಡದ ನಡುವಿನ ಸುಮಾರು ಒಂದೂವರೆ ಅಡಿ ಅಗಲದ ಅಂತರದೊಳಗೆ ರಾಜೇಶ್ ಸಿಲುಕಿದ್ದು, ತಲೆ ಭಾಗ ಮಾತ್ರ ಮಣ್ಣಿನಿಂದ ಮೇಲಕ್ಕೆ ಕಾಣುತ್ತಿತ್ತು.
Advertisement
ಘಟನೆಯ ಬಗ್ಗೆ ತಿಳಿಯುತ್ತಿದ್ದಂತೆ ಸ್ಥಳೀಯರು ಧಾವಿಸಿ ಬಂದು ಜೆಸಿಬಿಯ ಸಹಾಯದಿಂದ ಎರಡು ಗಂಟೆಗಳ ಸತತ ಕಾರ್ಯಾಚರಣೆ ನಡೆಸಿ, ರಾಜೇಶ್ ನನ್ನು ಮೇಲಕ್ಕೆತ್ತಿದರು. ತಕ್ಷಣ ರಾಜೇಶ್ ನನ್ನು ಕುಪ್ಪೆಪದವಿನ ಖಾಸಗಿ ಆಸ್ಪತೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
Advertisement
ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಗುಡ್ಡದ ಮೇಲಿನ ಮಣ್ಣು ಸಡಿಲಗೊಂಡು ಕುಸಿತವಾಗಿದ್ದು, ಆಗಾಗ ಮಳೆ ಸುರಿಯುತ್ತಿದ್ದರಿಂದ ಇಕ್ಕಟ್ಟಾದ ಸ್ಥಳದಲ್ಲಿ ರಕ್ಷಣಾ ಕೆಲಸ ಕಷ್ಟವಾಗಿತ್ತು. ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿತ್ತು. ಆದರೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತಲುಪುವ ಮುನ್ನವೇ ಸ್ಥಳೀಯರು ರಾಜೇಶ್ ನನ್ನು ರಕ್ಷಿಸಿದ್ದರು.