ಮಂಸೋರೆ ನಿರ್ದೇಶನದ ‘ಆಕ್ಟ್ 1978’ ಸಿನಿಮಾ ಮೊದಲ ದಿನವೇ ದೊಡ್ಡ ಮಟ್ಟದ ಪ್ರತಿಕ್ರಿಯೆಯನ್ನು ತನ್ನದಾಗಿಸಿಕೊಂಡಿದೆ. ಭ್ರಷ್ಟ ವ್ಯವಸ್ಥೆ, ಸರ್ಕಾರಿ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಲಂಚಗುಳಿತನ ವಿರುದ್ಧ ಸಮಾಜದ ಅತಿ ಸಾಮಾನ್ಯ ವ್ಯಕ್ತಿ ತಿರುಗಿಬಿದ್ದಾಗ ಆಗಬಹುದಾದ ಪರಿಣಾಮ, ಬದಲಾವಣೆ ‘ಆಕ್ಟ್ 1978’ ಸಿನಿಮಾದ ಚಿತ್ರರೂಪ. ಬರೀ ಸಿನಿಮಾವಲ್ಲದೇ ಒಂದು ಪವರ್ ಫುಲ್ ಸಂದೇಶ ಕೂಡ ರವಾನಿಸಿದ್ದಾರೆ ನಿರ್ದೇಶಕ ಮಂಸೋರೆ.
Advertisement
ಗೀತಾ ಎಂಬ ಒಬ್ಬ ಸಾಮಾನ್ಯ ಮಹಿಳೆ ಪರಿಹಾರದ ಹಣಕ್ಕಾಗಿ ಸರ್ಕಾರಿ ಕಛೇರಿಗೆ ಅಲೆದು ಅಲೆದು ಬೇಸತ್ತು ಹೋಗುತ್ತಾಳೆ. ಅಧಿಕಾರಿಗಳ ನಿರ್ಲಕ್ಷ್ಯ ಉತ್ತರಕ್ಕೆ ರೋಸಿ ಹೋದ ಗೀತಾ ಇವರಿಗೆಲ್ಲ ಪಾಠ ಕಲಿಸಲು ಟೊಂಕ ಕಟ್ಟಿ ನಿಲ್ಲುತ್ತಾಳೆ. ಹೊಸ ವೇಷ ಧರಿಸುತ್ತಾಳೆ. ಸರ್ಕಾರಿ ಅಧಿಕಾರಿಗಳನ್ನು ಒತ್ತೆಯಾಳಾಗಿಸಿಕೊಂಡು ಎಲ್ಲರ ಗಮನ ಸೆಳೆಯುತ್ತಾಳೆ. ತನ್ನ ಬೇಡಿಕೆಗಳನ್ನು ಗೀತಾ ಈಡೇರಿಸಿಕೊಳ್ಳುತ್ತಾಳಾ.? ಆಕೆ ತಿರುಗಿನಿಂತರೆ ಪರಿಣಾಮ ಏನೆಲ್ಲ ಆಗುತ್ತದೆ.? ಇದಕ್ಕೆ ಸರ್ಕಾರದ ಪ್ರತಿಕ್ರಿಯೆ ಯಾವ ರೀತಿ ಇರುತ್ತೆ ಎನ್ನೋದನ್ನ ಭಾವನಾತ್ಮಕ ಎಳೆಯೊಂದಿಗೆ ಮನಮುಟ್ಟುವಂತೆ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಮಂಸೋರೆ.
Advertisement
Advertisement
ಹೋರಾಟದ ಜೊತೆ ಭಾವನಾತ್ಮಕವಾದ ವಿಚಾರಗಳು ಚಿತ್ರದಲ್ಲಿ ನೋಡುಗರನ್ನು ಸೆಳೆಯುತ್ತದೆ. ಒಂದು ಬಲವಾದ ಸಂದೇಶವನ್ನು ಸಮಾಜಕ್ಕೆ ರವಾನಿಸುವಾಗ ಇಡೀ ಸಿನಿಮಾವನ್ನು ಹೋರಾಟ, ಹಿಂಸೆ, ಭಾವನಾತ್ಮಕ ಅಂಶಗಳು ಒಂದಕ್ಕೊಂದು ಮೇಳೈಸಿ ಸಾಗಬೇಕು. ಆ ವಿಚಾರದಲ್ಲಿ ನಿರ್ದೇಶಕ ಮಂಸೋರೆ ಹಾಗೂ ತಂಡ ತುಂಬಾ ಎಚ್ಚರಿಕೆ ವಹಿಸಿ ಹಿಡಿತ ಸಾಧಿಸಿದೆ. ನಮ್ಮ ನಡುವೆ ನಡೆಯೋ ದಿನನಿತ್ಯದ ವಿಚಾರವನ್ನು ಪ್ರಭಾವ ಶಾಲಿಯಾಗಿ ನೋಡುಗನ ಮೇಲೆ ಗಂಭೀರವಾಗಿ ನಾಟುವಂತೆ ಮಾಡುವ ಕೆಲಸದಲ್ಲಿ ಇಡೀ ಪಾತ್ರವರ್ಗ ನ್ಯಾಯ ಒದಗಿಸಿದೆ. ಈಗಾಗಲೇ ಎಲ್ಲಾ ಭಾಷೆಗಳಲ್ಲೂ ಭ್ರಷ್ಟ ವ್ಯವಸ್ಥೆ ವಿರುದ್ಧ ಹೋರಾಟದ ಕಥೆಗಳು ಸಿನಿಮಾಗಳಾಗಿ ತೆರೆ ಮೇಲೆ ಬಂದಿದ್ದರೂ ಸಹ ಯಾವುದಕ್ಕೂ ‘ಆಕ್ಟ್ 1978’ ಹೋಲಿಕೆ ಮಾಡಲು ಇಲ್ಲಿ ಸಾಧ್ಯವಿಲ್ಲ. ಇದು ನಿರ್ದೇಶಕ ಮಂಸೋರೆ ಅವರ ನಿರ್ದೇಶನದ ತಾಕತ್ತು ಎಂದು ಹೇಳಿದರೂ ತಪ್ಪಾಗೋದಿಲ್ಲ. ತೆರೆ ಮೇಲೆ ಚಿತ್ರವನ್ನು ನೋಡುತ್ತಾ ಪ್ರೇಕ್ಷಕ ಸರಿ-ತಪ್ಪುಗಳ ಜಿಜ್ಞಾಸೆಗೆ ಬೀಳುತ್ತಾ ಆಲೋಚನೆಗಿಳಿಯುವಂತೆ ಮಾಡುವಷ್ಟು ವಿಚಾರಗಳು ತೆರೆ ಮೇಲಿವೆ. ಅದರ ಜೊತೆಗೆ ಹದಬರಿತ ಹಾಸ್ಯವು ಇಲ್ಲಿದೆ.
Advertisement
ಒಂದು ಹೆಣ್ಣು ಮಗಳ ಮುಖಾಂತರ ವ್ಯವಸ್ಥೆಯ ಮುಖವಾಡ ಕಳಚಿಸುವ ಕೆಲಸ ಅಷ್ಟು ಸುಲಭದ ಮಾತಲ್ಲ. ಆ ನಿಟ್ಟಿನಲ್ಲಿ ಯಜ್ಞಾ ಶೆಟ್ಟಿ ಪರಕಾಯ ಪ್ರವೇಶ ಮಾಡಿ ಗೀತಾ ಪಾತ್ರವನ್ನು ಜೀವಿಸಿದ್ದಾರೆ. ವ್ಯವಸ್ಥೆಯೊಂದಿಗಿನ ಸಂಘರ್ಷ, ಭಾವನಾತ್ಮಕ ಎಳೆಗಳು ಅದನ್ನು ಕಟ್ಟಿಕೊಟ್ಟ ಪರಿ, ಹೋರಾಟದ ಕಿಚ್ಚು ಎಲ್ಲವೂ ಎಲ್ಲೂ ಹೆಚ್ಚು ಕಮ್ಮಿಯಾಗದಷ್ಟು ಹದವಾಗಿ ಬೆರೆತ ಹೂರಣ ‘ಆಕ್ಟ್ 1978’. ಆ ಹೂರಣವನ್ನು ಅಷ್ಟೇ ನಾಜೂಕಾಗಿ ತೆರೆ ಮೇಲೆ ತರುವಲ್ಲಿ ನಿರ್ದೇಶಕ ಮಂಸೋರೆ ಹಾಗೂ ಇಡೀ ಚಿತ್ರತಂಡದ ಪ್ರಯತ್ನ ಯಶಸ್ವಿಯಾಗಿದೆ.
ಗೀತಾ ಪಾತ್ರದಲ್ಲಿ ಯಜ್ಞಾ ಶೆಟ್ಟಿ ಅಭಿನಯ ಅಮೋಘವಾಗಿ ಮೂಡಿ ಬಂದಿದೆ. ಇನ್ನು ಒಂದೊಳ್ಳೆ ಸಂದೇಶ ಹಾಗೂ ಕಥೆಗೆ ತಕ್ಕಂತೆ ಅನುಭವಿ ನಟರನ್ನು ಆಯ್ಕೆ ಮಾಡಿಕೊಂಡ ನಿರ್ದೇಶಕರು ಗೆದ್ದಿದ್ದಾರೆ. ಚಿತ್ರದ ಪ್ರತಿಯೊಂದು ಪಾತ್ರವೂ ಪೈಪೋಟಿಗೆ ಬಿದ್ದಂತೆ ನಟಿಸಿದ್ದು, ಎಲ್ಲರೂ ಗಮನ ಸೆಳೆಯುತ್ತಾರೆ. ಹಿನ್ನೆಲೆ ಸಂಗೀತ, ಕ್ಯಾಮೆರಾ ನಿರ್ದೇಶನ ಪ್ರತಿಯೊಂದು ಅಷ್ಟೇ ಪೂರಕವಾಗಿ ಮೂಡಿ ಬಂದಿದೆ.
‘ಆಕ್ಟ್ 1978’ ಹಿಂದಿನಿಂದಲೂ ನೋಡಿಕೊಂಡು ಬಂದಿರೋ ಭ್ರಷ್ಟ ಸರ್ಕಾರಿ ವ್ಯವಸ್ಥೆಗೆ ಹಿಡಿದ ಕನ್ನಡಿ. ಹಾಗೆಯೇ ಒಬ್ಬ ಸಾಮಾನ್ಯ ವ್ಯಕ್ತಿ ವ್ಯವಸ್ಥೆಯ ವಿರುದ್ಧ ತಿರುಗಿನಿಂತರೆ ಏನೆಲ್ಲ ಆಗಲಿದೆ ಎಂಬ ಸಂದೇಶ ರವಾನಿಸುವ ಸಿನಿಮಾ ಕೂಡ ಹೌದು. ಒಟ್ಟಿನಲ್ಲಿ ಎಲ್ಲಾ ವರ್ಗದ ಜನರಿಗೂ ಈ ಸಿನಿಮಾ ಬಹು ಬೇಗ ಬೆಸೆದುಕೊಳ್ಳುತ್ತದೆ.
ರೇಟಿಂಗ್: 4/5
ಚಿತ್ರ: ಆಕ್ಟ್ 1978
ನಿರ್ದೇಶನ: ಮಂಸೋರೆ
ನಿರ್ಮಾಪಕ: ದೇವರಾಜ್. ಆರ್
ಸಂಗೀತ: ರೋನಡ ಬಕ್ಕೇಶ್, ರಾಹುಲ್ ಶಿವಕುಮಾರ್
ಛಾಯಾಗ್ರಹಣ: ಸತ್ಯ ಹೆಗಡೆ
ತಾರಾಬಳಗ: ಯಜ್ಞಾ ಶೆಟ್ಟಿ, ಅಚ್ಯುತ್ ಕುಮಾರ್, ದತ್ತಣ್ಣ, ಸಂಚಾರಿ ವಿಜಯ್, ಬಿ.ಸುರೇಶ್, ಇತರರು.