– ಹೆಸರಿಡಿದು ಕರೆದ ವೇಳೆ ಬಯಲು
– ಆಶ್ರಮದಲ್ಲಿ ಮನೀಶ್ ಮಿಶ್ರಾಗೆ ಚಿಕಿತ್ಸೆ
ಭೋಪಾಲ್: ಬೀದಿ ಬೀದಿಯಲ್ಲಿ ಭಿಕ್ಷೆ ಬೇಡಿ ಜೀವನ ಮಾಡುತ್ತಿದ್ದ ಪೊಲೀಸ್ ಅಧಿಕಾರಿಯೊಬ್ಬರನ್ನು ಅವರ ಹಳೆಯ ಸಹೋದ್ಯೋಗಿಗಳು ಗುರುತಿಸಿ ರಕ್ಷಣೆ ಮಾಡಿದ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನಡೆದಿದೆ.
ಭಿಕ್ಷುಕನ ರೀತಿಯಲ್ಲಿ ಪತ್ತೆಯಾದ ಪೊಲೀಸ್ ಅಧಿಕಾರಿಯನ್ನು ಮನೀಶ್ ಮಿಶ್ರಾ ಎಂದು ಗುರುತಿಸಲಾಗಿದೆ. ಗ್ವಾಲಿಯರ್ ನ ರಸ್ತೆಯಲ್ಲಿ ಭಿಕ್ಷೆ ಬೇಡುತ್ತಿದ್ದ ವೇಳೆ ಹಳೆಯ ಸಹೋದ್ಯೋಗಿಗಳು ಅವರನ್ನು ಪತ್ತೆ ಹಚ್ಚಿದ್ದಾರೆ.
Advertisement
Advertisement
ಮನೀಶ್ ಮಿಶ್ರಾ ಅವರು 2005ರಲ್ಲಿ ಏಕಾಏಕಿ ಕಾಣೆಯಾಗಿದ್ದರು. 1999ರಲ್ಲಿ ಪೊಲೀಸ್ ಇಲಾಖೆಗೆ ಸೇರಿದ್ದ ಮಿಶ್ರಾ, 2005ರಲ್ಲಿ ಮಾನಸಿಕ ಖಿನ್ನತೆಗೆ ಒಳಗಾದರು. ಕುಟುಂಬಸ್ಥರು ಹಲವೆಡೆ ಚಿಕಿತ್ಸೆ ಕೊಡಿಸಿದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಈ ಮಧ್ಯೆ ಒಂದು ದಿನ ಅವರು ಏಕಾಏಕಿ ಕುಟುಂಬಸ್ಥರಿಂದ ದೂರವಾದರು. ಹೀಗೆ ಕಣ್ಮರೆಯಾದ ಮಿಶ್ರಾ ಅವರನ್ನು ಎಷ್ಟೇ ಹುಡುಕಾಡಿದರೂ ಎಲ್ಲಿಯೂ ಸಿಕ್ಕಿರಲಿಲ್ಲ. ಪರಿಣಾಮ ಕುಟುಂಬ ಮನೀಶ್ ಹುಡುಕಾಡಿ ಕಂಗಾಲಾಗಿತ್ತು.
Advertisement
Advertisement
ಇತ್ತ ಕಳೆದ ವಾರ ಮನೀಶ್ ಸಹೋದ್ಯೋಗಿಗಳಾದ ರತ್ನೇಶ್ ಸಿಂಗ್ ತೋಮರ್ ಹಾಗೂ ವಿಜಯ್ ಸಿಂಗ್ ಬಹದ್ದೂರ್ ಅವರು ತಮ್ಮ ಪಾಡಿಗೆ ಮಾತನಾಡುತ್ತಾ ಗ್ವಾಲಿಯರ್ ನ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಹೀಗೆ ಬಂದನ್ ವಾಟಿಕ ಬಳಿ ಬರುತ್ತಿದ್ದಂತೆಯೇ ಅವರಿಗೆ ಹರಿದ ಬಟ್ಟೆಗಳನ್ನು ತೊಟ್ಟುಕೊಂಡು ನಡುಗುತ್ತಾ ಭಿಕ್ಷುಕನೊಬ್ಬ ಊಟ ನೀಡುವಂತೆ ಬೇಡುತ್ತಿರುವುದು ಕಂಡಿದೆ.
ಇದನ್ನು ಗಮನಿಸಿದ ಇಬ್ಬರೂ ನೇರವಾಗಿ ವ್ಯಕ್ತಿಯ ಬಳಿ ತೆರಳಿ ಮಾತನಾಡಿದ್ದಾರೆ. ಅಲ್ಲದೆ ರತ್ನೇಶ್ ಸಿಂಗ್ ಥೋಮರ್ ಅವರು ತಾವು ಧರಿಸಿದ್ದ ಶೂ ಕೊಟ್ಟರೆ, ವಿಜಯ್ ಅವರು ತಮ್ಮ ಜಾಕೆಟ್ ನೀಡಿ ಅಲ್ಲಿಂದ ಹೊರಟಿದ್ದಾರೆ. ಆಗ ಧನ್ಯವಾದ ತಿಳಿಸಲೆಂದು ಭಿಕ್ಷುಕ, ಬಹದ್ದೂರ್ ಎಂದು ಕೂಗಿದ್ದಾರೆ. ಇದರಿಂದ ಅಚ್ಚರಿಗೊಂಡ ಇಬ್ಬರೂ ಮತ್ತೆ ಭಿಕ್ಷುಕನ ಬಳಿ ಬಂದು ತಮ್ಮ ಹೆಸರು ಹೇಳುವಂತೆ ಒತ್ತಾಯಿಸಿದ್ದಾರೆ.
ಈ ವೇಳೆ ಭಿಕ್ಷುಕ ತಮ್ಮ ಹೆಸರು ಹೇಳಿದ್ದನ್ನು ನೋಡಿ ಇಬ್ಬರೂ ಅವಕ್ಕಾಗಿದ್ದಾರೆ. ಹೀಗೆ ಭಿಕ್ಷುಕನನ್ನು ಮಾತನಾಡಿಸಿದಾಗ, 15 ವರ್ಷಗಳಿಂದ ಕಾಣೆಯಾಗಿದ್ದ ಮನೀಶ್ ಎನ್ನುವುದು ಬಯಲಾಗಿದೆ. ತಮ್ಮ ಬ್ಯಾಚ್ ಮೆಟ್ ಎಂಬುದನ್ನು ಅರಿತ ರತ್ನೇಶ್ ಹಾಗೂ ವಿಜಯ್ ಕೂಡಲೇ ತಮ್ಮೊಂದಿಗೆ ಬರುವಂತೆ ಮನವೊಲಿಸಲು ಪ್ರಯತ್ನಿಸಿದ್ದಾರೆ. ಆದರೆ ಮಿಶ್ರಾ ಮಾತ್ರ ಇದಕ್ಕೆ ಸುತಾರಾಂ ಒಪ್ಪಲಿಲ್ಲ. ಹೀಗಾಗಿ ಅವರು ಮಿಶ್ರಾ ಅವರನ್ನು ಸಮಾಜ ಸೇವಾ ಆಶ್ರಮಕ್ಕೆ ಕರೆದೊಯ್ದಿದ್ದಾರೆ. ಸದ್ಯ ಮಿಶ್ರಾ ಅವರು ಆಶ್ರಮದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.