ಉಡುಪಿ: ಜಿಲ್ಲೆಯಲ್ಲಿ ಮಳೆಯ ಅವಾಂತರ ಮುಂದುವರೆದಿದ್ದು, ಮಣಿಪಾಲ ಸಿಂಡಿಕೇಟ್ ಸರ್ಕಲ್ ನಲ್ಲಿರುವ ಪ್ರೀಮಿಯರ್ ಬಹುಮಹಡಿ ಕಟ್ಟಡದ ಹಿಂಭಾಗದಲ್ಲಿ ಮಳೆ ನೀರಿನ ರಭಸಕ್ಕೆ ಅಪಾಟ್ರ್ಮೆಂಟ್ನ ಹಿಂಭಾಗದ ತಡೆಗೋಡೆ ಕುಸಿದಿದೆ.
ಕಮರ್ಷಿಯಲ್ ಕಂಪ್ಲೆಕ್ಸ್ ಆಗಿರುವ ಪ್ರೀಮಿಯರ್ ಕಟ್ಟಡದ ಜೊತೆ ವಸತಿ ಸಮುಚ್ಛಯ ಸಹ ಇರುವುದರಿಂದ ಅಲ್ಲಿನ ಎಲ್ಲ ಜನರನ್ನು ಬೇರೆಡೆ ಸ್ಥಳಾಂತರಿಸಲಾಗಿದೆ. ಮಣಿಪಾಲ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಇದೇ ಕಟ್ಟಡದಲ್ಲಿ ವಾಸವಿದ್ದು, ಸದ್ಯ ಕಾಲೇಜುಗಳು ತೆರೆಯದ ಕಾರಣ ವಿದ್ಯಾರ್ಥಿಗಳ ಸಂಖ್ಯೆ ಬಹಳ ಕಮ್ಮಿ ಇದೆ.
Advertisement
Advertisement
ಕಟ್ಟಡದಲ್ಲಿ 35 ಮನೆಗಳಿದ್ದು, ಎಲ್ಲರನ್ನೂ ಬೇರೆಡೆಗೆ ಶಿಫ್ಟ್ ಮಾಡಲಾಗಿದೆ. ಡೊಮಿನೊಸ್ ಪಿಜ್ಜಾ ಇಂದು ಅಂಗಡಿಯನ್ನು ಬಂದ್ ಮಾಡುವಂತೆ ಸೂಚನೆ ನೀಡಲಾಗಿದೆ. ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲೇ ಬಹುಮಹಡಿ ಕಟ್ಟಡ ಇರುವುದರಿಂದ ಪೊಲೀಸರು ಏಕಮುಖ ಸಂಚಾರ ವ್ಯವಸ್ಥೆಯನ್ನು ಮಾಡಿದ್ದಾರೆ. ಉಡುಪಿ-ಮಣಿಪಾಲ ರಸ್ತೆಯ ಒಂದು ಬದಿ ಓಡಾಟವನ್ನು ಬಂದ್ ಮಾಡಲು ಹೇಳಿದ್ದು, ಪೊಲೀಸರನ್ನು ನಿಯೋಜಿಸಲಾಗಿದೆ.
Advertisement
ಮಣಿಪಾಲ ನಗರದ ಎಲ್ಲ ಮಳೆ ನೀರು ಈ ಕಟ್ಟಡದ ಹಿಂಭಾಗದಲ್ಲಿ ಧಾರಾಕಾರವಾಗಿ ಹರಿದು ಹೋಗುವುದರಿಂದ ಭೂಕುಸಿತ ಉಂಟಾಗಿದೆ. ಒಳಚರಂಡಿ ವ್ಯವಸ್ಥೆ ಸರಿಯಾಗಿ ನಿರ್ವಹಣೆಯಾಗಿದ್ದರೆ ಕಟ್ಟಡದ ಹಿಂಭಾಗಕ್ಕೆ ಮಳೆ ನೀರು ಬರುತ್ತಿರಲಿಲ್ಲ, ಸಮಸ್ಯೆ ಆಗುತ್ತಿರಲಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ. ಈ ಹಿಂದೆ ಮಣಿಪಾಲ್ ಐನಾಕ್ಸ್ ಕಟ್ಟಡದ ಸಮೀಪ ಭೂಕುಸಿತ ಆಗಿದ್ದು, ಆತಂಕ ಸೃಷ್ಟಿಯಾಗಿತ್ತು.
Advertisement
ಉಡುಪಿ ನಗರಸಭೆಯ ಆಯುಕ್ತ ಆನಂದ ಕಲ್ಲೋಳಿಕರ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಈಗಾಗಲೇ ಕಟ್ಟಡದಲ್ಲಿದ್ದ ಎಲ್ಲರನ್ನೂ ಬೇರೆ ಕಡೆಗೆ ಶಿಫ್ಟ್ ಮಾಡಿಸಿದ್ದೇವೆ. ಅಂಗಡಿಗಳನ್ನು ಮುಚ್ಚುವಂತೆ ಸೂಚಿಸಿದ್ದೇವೆ. ಕಟ್ಟಡ ನಿರ್ಮಾಣದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪರಿಶೀಲಿಸುತ್ತೇವೆ. ಬಹುಮಹಡಿ ಕಟ್ಟಡದ ನಿರ್ಮಾಣದ ಬಗ್ಗೆಯೂ ಸಂಪೂರ್ಣ ತನಿಖೆ ಮಾಡುತ್ತೇವೆ ಮೇಲ್ನೋಟಕ್ಕೆ ಅಪಾಯಕಾರಿಯಂತೆ ಕಾಣಿಸುತ್ತಿದೆ. ಯಾವುದೇ ಅನಾಹುತಗಳು ಆಗದಿರಲಿ ಎಂಬ ಉದ್ದೇಶದಿಂದ ಜನರನ್ನ ಶಿಫ್ಟ್ ಮಾಡಿಸಲಾಗಿದೆ ಎಂದು ಹೇಳಿದರು. ತಹಶೀಲ್ದಾರ್, ಎಸಿ ಸ್ಥಳಕ್ಕೆ ಆಗಮಿಸಿ ಸೂಕ್ತ ಕ್ರಮಗಳನ್ನು ಕೈಗೊಂಡಿದ್ದಾರೆ. ತಳದಿಂದ ಜನರು ಕೊಂಚ ದೂರ ಇರುವಂತೆ ಪೊಲೀಸರು ನೋಡಿಕೊಂಡಿದ್ದಾರೆ.