ಮೈಸೂರು: ಕೃಷಿ ಕಾಯ್ದೆ ವಿರೋಧಿಸಿ ರೈತಪರ ಸಂಘಟನೆಗಳು ಬೀದಿಗಿಳಿದು ಹೋರಾಟ ಮಾಡುವುದರೊಂದಿಗೆ ಭಾರತ್ ಬಂದ್ಗೆ ರಾಜ್ಯದಲ್ಲಿಯೂ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ. ಈ ಬಂದ್ ಬಿಸಿ ಮೈಸೂರಿಗೂ ತಟ್ಟಿದೆ.
ಹೌದು. ಭಾರತ ಬಂದ್ ಪರಿಣಾಮ ಮೈಸೂರಿನ ಕೇಂದ್ರ ಬಸ್ ನಿಲ್ದಾಣದಲ್ಲಿ ಮಹಿಳೆಯೊಬ್ಬರು ನಿತ್ರಾಣಗೊಂಡು ಕುಸಿದು ಬಿದ್ದಿದ್ದಾರೆ. ಬನ್ನೂರಿಗೆ ತೆರಳಲು ಮಗಳ ಜೊತೆ ಬಂದಿದ್ದ ಮಹಿಳೆ ಬಸ್ಸಿಗಾಗಿ ಕಾದು ಕಾದು ನಿತ್ರಾಣಗೊಂಡು ಏಕಾಏಕಿ ಕುಸಿದು ಬಿದ್ದಿದ್ದಾರೆ. ಕೂಡಲೇ ಅಲ್ಲೇ ಇದ್ದ ಪೊಲೀಸರು ಹಾಗೂ ಸಾರಿಗೆ ಸಿಬ್ಬಂದಿ ಮಹಿಳೆಯ ನೆರವಿಗೆ ಬಂದಿದ್ದಾರೆ.
Advertisement
Advertisement
ಅಸ್ವಸ್ಥ ಮಹಿಳೆಯನ್ನ ಆಟೋದಲ್ಲಿ ಕೆಆರ್ ಆಸ್ಪತ್ರೆಗೆ ಪೊಲೀಸರು ರವಾನಿಸಿದರು. ಇದೇ ವೇಳೆ ಎ.ಎಸ್.ಐ ದೀಪಕ್ ಪ್ರಸಾದ್ ಅವರು ಆಟೋಗೆ ದುಡ್ಡು ಕೊಟ್ಟು ಮಾನವೀಯತೆ ಮೆರೆದ ಪ್ರಸಂಗವೂ ನಡೆಯಿತು.
Advertisement
ಬಂದ್ ನಿಂದಾಗಿ ಇಂದು ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ತೊಂದರೆ ಅನುಭವಿಸಿದ್ದಾರೆ. ಬಸ್ ಗಳು ನಿಂತಲ್ಲೇ ನಿಂತಿದ್ದರಿಂದ ದೂರದ ಊರುಗಳಿಗೆ, ಅಕ್ಕ ಪಕ್ಕದ ಜಿಲ್ಲೆಗಳಿಗೆ ತೆರಳಲು ಪ್ರಯಾಣಿಕರು ಹರಸಾಹಸ ಪಡುವಂತಾಗಿದೆ. ಲಗೆಜ್ ಸಮೇತ ಬಸ್ ನಿಲ್ದಾಣದಲ್ಲೇ ಮಕ್ಕಳು ಮತ್ತು ಮಹಿಳೆಯರು ಬಸ್ ಗಾಗಿ ಕಾದು ನಿಂತಿದ್ದಾರೆ.
Advertisement
ಕೇಂದ್ರಿಯ ಬಸ್ ನಿಲ್ದಾಣದಲ್ಲಿ ರೈತರು ಪ್ರಗತಿಪರ ಹೋರಾಟಗಾರರು ತೆಂಗಿನ ಚಿಪ್ಪು ಜೊತೆ ಗುದ್ದಲಿ ಹಿಡಿದು ವಿನೂತನವಾಗಿ ಪ್ರತಿಭಟನೆ ಆರಂಭಿಸಿದರು. ಪ್ರತಿಭಟನಾಕಾರರು ರಸ್ತೆಯಲ್ಲೆ ಕುಳಿತು ಬಸ್ ತಡೆದು ಸರ್ಕಾರದ ವಿರುದ್ದ ಧಿಕ್ಕಾರ ಕೂಗಿದರು. ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದ ಬಳಿ ನಂಜನಗೂಡು ಬಸ್ ತಡೆದರು. ಮುಂಜಾಗೃತಾ ಕ್ರಮವಾಗಿ ಬಸ್ಸನ್ನು ಪೊಲೀಸರು ವಾಪಸ್ ಕಳುಹಿಸಿದರು.