– ಉದ್ಧಟತನ ನಿಲ್ಲಿಸಿ ಎಂದ ಅಮೆರಿಕ
ನವದೆಹಲಿ: ಲಡಾಕ್ನಲ್ಲಿನ ಗಡಿ ವಾಸ್ತವಿಕ ನಿಯಂತ್ರಣ ರೇಖೆ(ಎಲ್ಎಸಿ)ಯುದ್ದಕ್ಕೂ ಚೀನಾ ಭಾರತದ ವಿರುದ್ಧ ಆಕ್ರಮಣಕಾರಿಯಾಗಿ ವರ್ತಿಸುತ್ತಿದೆ. ಇದು ತರವಲ್ಲ, ಮಾನದಂಡಗಳನ್ನು ಗೌರವಿಸಬೇಕು ಹಾಗೂ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ರಾಜತಾಂತ್ರಿಕತೆ ಮತ್ತು ಪ್ರಸ್ತುತ ಲಭ್ಯವಿರುವ ಕಾರ್ಯವಿಧಾನಗಳನ್ನು ಅನುಸರಿಸಬೇಕು ಎಂದು ಅಮೆರಿಕದ ವಿದೇಶಾಂಗ ಸಮಿತಿಯ ಪ್ರತಿನಿಧಿಗಳ ಮುಖ್ಯಸ್ಥ ಎಲಿಯಟ್ ಎಂಗಲ್ ಚೀನಾ ವಿರುದ್ಧ ಕಿಡಿಕಾರಿದ್ದಾರೆ.
ಭಾರತ-ಚೀನಾ ಗಡಿಯ ಎಲ್ಎಸಿಯಲ್ಲಿ ನಡೆಯುತ್ತಿರುವ ಚೀನಾದ ಆಕ್ರಮಣದಿಂದಾಗಿ ತುಂಬಾ ಕಳವಳವಾಗಿದೆ. ಅಂತರಾಷ್ಟ್ರೀಯ ಕಾನೂನಿನ ಪ್ರಕಾರ ಸಂಘರ್ಷಗಳನ್ನು ಬಗಹರಿಸಿಕೊಳ್ಳುವ ಬದಲು ಚೀನಾ ಉದ್ಧಟತನ ಪ್ರದರ್ಶಿಸುತ್ತಿದೆ. ಈ ಮೂಲಕ ನೆರೆಯ ರಾಷ್ಟ್ರಗಳನ್ನು ಪೀಡಿಸುತ್ತಿದೆ ಎಂದು ಎಂಗಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
“I strongly urge China to respect norms and use diplomacy and existing mechanisms to resolve its border questions with India.”
-Chairman @RepEliotEngel https://t.co/say45WUhBt
— House Foreign Affairs Committee (@HouseForeign) June 1, 2020
Advertisement
ದೇಶಗಳು ಒಂದೇ ರೀತಿಯ ನಿಯಮಗಳಿಗೆ ಬದ್ಧವಾಗಿರಬೇಕು. ಇಲ್ಲವಾದಲ್ಲಿ ಇದು ಸರಿ ಹೊಂದುವುದಿಲ್ಲ. ಚೀನಾ ಅಂತಾರಾಷ್ಟ್ರೀಯ ಮಾನದಂಡಗಳನ್ನು ಗೌರವಿಸಬೇಕು. ರಾಜತಾಂತ್ರಿಕತೆ ಹಾಗೂ ಲಭ್ಯವಿರುವ ಕಾರ್ಯವಿಧಾನಗಳನ್ನು ಅನುಸರಿಸಬೇಕು. ಈ ಮೂಲಕ ಗಡಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ
Advertisement
ಇಡೀ ವಿಶ್ವವೇ ಕೋವಿಡ್ 19 ವಿಚಾರದ ಬಗ್ಗೆ ತಲೆಕೆಡಿಸಿಕೊಂಡಿರುವಾಗ ಈ ವೈರಸ್ಸಿನ ತವರು ಮನೆ ಚೀನಾ ಈಗ ಭಾರತದ ಜೊತೆ ಗಡಿ ವಿಚಾರಕ್ಕೆ ಜಗಳಕ್ಕೆ ನಿಂತಿದೆ. ಅಷ್ಟೇ ಅಲ್ಲದೇ ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಯುದ್ಧಕ್ಕೆ ಸನ್ನದ್ಧರಾಗಿ ಎಂದು ಕರೆ ನೀಡಿದ್ದಾರೆ. ಹೀಗಾಗಿ ಚೀನಾದ ವರ್ತನೆ ದಿಢೀರ್ ಬದಲಾಗಿದ್ದು ಯಾಕೆ? ಏನಿದು ವಿವಾದ ಇತ್ಯಾದಿ ಮಾಹಿತಿಗಳನ್ನು ನೀಡಲಾಗಿದೆ.
Advertisement
ಗಡಿ ಎಲ್ಲಿದೆ?
ಭಾರತ ಮತ್ತು ಚೀನಾದ ನಡುವೆ ಒಟ್ಟು 3,488 ಕಿ.ಮೀ ಗಡಿ ಇದೆ. ಕೇಂದ್ರಾಡಳಿತ ಪ್ರದೇಶವಾದ ಲಡಾಖ್ ಮತ್ತು ರಾಜ್ಯಗಳಾದ ಉತ್ತರಾಖಂಡ್, ಹಿಮಾಚಲ ಪ್ರದೇಶ, ಸಿಕ್ಕಿಂ, ಅರುಣಾಚಲ ಪ್ರದೇಶಗಳು ಚೀನಾದ ಜೊತೆ ಗಡಿಯನ್ನು ಹಂಚಿಕೊಂಡಿವೆ.
ಏನಿದು ಎಲ್ಎಸಿ?
ಭಾರತ ಮತ್ತು ಪಾಕಿಸ್ತಾನ ಮಧ್ಯೆ ಪದೇ ಪದೇ ಗುಂಡಿನ ಚಕಮಕಿ ಬಂದಾಗ ಎಲ್ಒಸಿ(ಗಡಿ ನಿಯಂತ್ರಣ ರೇಖೆ ಅಥವಾ ಲೈನ್ ಆಫ್ ಕಂಟ್ರೋಲ್) ಪದ ಬರುತ್ತದೆ. ಭಾರತ ಮತ್ತು ಪಾಕಿಸ್ತಾನವನ್ನು ಜಮ್ಮು ಕಾಶ್ಮೀರದಲ್ಲಿ ಬೇರ್ಪಡಿಸುವ ಅಂತಾರಾಷ್ಟ್ರೀಯ ಗಡಿಯನ್ನು ಎಲ್ಒಸಿ ಎಂದು ಕರೆಯಲಾಗುತ್ತದೆ. ಅದೇ ರೀತಿಯಾಗಿ ಈ ಹಿಂದೆ ರಾಜ್ಯವಾಗಿದ್ದ ಜಮ್ಮು ಕಾಶ್ಮೀರದಲ್ಲಿ ಭಾರತ ಮತ್ತು ಚೀನಾವನ್ನು ಬೇರ್ಪಡಿಸುವ ಗಡಿಯನ್ನು ಎಲ್ಎಸಿ(ಗಡಿ ವಾಸ್ತವಿಕ ನಿಯಂತ್ರಣ ರೇಖೆ ಅಥವಾ ಲೈನ್ ಆಫ್ ಆಕ್ಚುವಲ್ ಕಂಟ್ರೋಲ್) ಎಂದು ಕರೆಯಲಾಗುತ್ತದೆ. 1962ರಲ್ಲಿ ಭಾರತ ಚೀನಾ ನಡುವೆ ಯುದ್ಧದ ನಡೆಯಿತು. ಈ ಯುದ್ಧದ ಬಳಿಕ ಮುಂದೆ ಎರಡು ರಾಷ್ಟ್ರಗಳು ತಮ್ಮ ಭೂ ಪ್ರದೇಶವನ್ನು ಗುರುತಿಸಲು ಎಲ್ಎಸಿಯನ್ನು ಬಳಸುತ್ತಿವೆ. ಈ ಎಲ್ಎಸಿ ಅಂತರಾಷ್ಟ್ರೀಯ ಗಡಿ ರೇಖೆಯಲ್ಲ. ಈ ಲಡಾಖ್ ಪೂರ್ವ ಭಾಗದಲ್ಲಿರುವ ಅಕ್ಸಾಯ್ ಚೀನಾ ನಮ್ಮದು ಎನ್ನುವುದು ಭಾರತದ ವಾದ.
ಭಾರತ ಏನು ಮಾಡಿದೆ?
ಕೇಂದ್ರಾಡಳಿತ ಪ್ರದೇಶವಾಗಿರುವ ಲಡಾಖ್ ಭಾಗವಾಗಿರುವ ಗ್ಯಾಲ್ವಾನ್ ಪ್ರದೇಶದಲ್ಲಿ ಸ್ಥಳಿಯರಿಗೆ ಸಹಾಯ ಮಾಡಲು ರಸ್ತೆ ನಿರ್ಮಾಣಕ್ಕೆ ಕೈ ಹಾಕಿದೆ. ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದು ಚೀನಾದ ಅಸಮಾಧಾನಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲದೇ ಲಡಾಖ್ ಗಡಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೇನೆಯನ್ನು ನಿಯೋಜಿಸಿದೆ.
ಚೀನಾ ಕಿರಿಕ್ ಮೊದಲೆನಲ್ಲ:
ಚೀನಾ ಭಾರತದ ಜೊತೆ ಗಡಿ ವಿಚಾರದಲ್ಲಿ ಗಲಾಟೆ ಮಾಡುವುದು ಇದು ಮೊದಲೆನಲ್ಲ. ಸಾಕಷ್ಟು ಬಾರಿ ಕಿತ್ತಾಟ ನಡೆಸಿದೆ. ಆದರೆ ಈಗ ಒಂದೇ ತಿಂಗಳಿನಲ್ಲಿ ಮೂರು ಬಾರಿ ಗಡಿಯಲ್ಲಿ ಕಿರಿಕ್ ಮಾಡಿದೆ. ಮೇ 5 ರಂದು ಪಾಂಗೊಂಗ್ ಸರೋವರದ ಮೇಲೆ ಹೆಲಿಕಾಪ್ಟರ್ ಹಾರಿಸಿತ್ತು. ಇದಕ್ಕೆ ಭಾರತ ಪ್ರತಿಭಟಿಸಿತ್ತು. ಇದಾದ ಬಳಿಕ ಸಿಕ್ಕಿಂನ ನಕು ಲಾ ಪಾಸ್ ನಲ್ಲಿ ಚೀನಾ- ಭಾರತ ಸೈನಿಕರ ನಡುವೆ ಘರ್ಷಣೆ ನಡೆದಿತ್ತು. ಕೈ ಕೈ ಮಿಲಾಯಿಸಿದ್ದಕ್ಕೆ ಭಾರತೀಯ ಸೈನಿಕರು ಸರಿಯಾಗಿ ಪ್ರತ್ಯುತ್ತರ ನೀಡಿದ್ದರು. ಸ್ಥಳೀಯ ಮಾತುಕತೆಯಿಂದ ಇದನ್ನು ಪರಿಹಾರ ಮಾಡಿದ ಬಳಿಕ ಈಗ ಗ್ಯಾಲ್ವನ್ ನದಿ ಕಣಿವೆಯ ಗಡಿಯಲ್ಲಿ ಸಂಘರ್ಷ ಆರಂಭವಾಗಿದೆ.
ಚೀನಾ ಈಗ ಏನು ಮಾಡುತ್ತಿದೆ?
ಭಾರತ ಅಭಿವೃದ್ಧಿಗೆ ಕೈ ಹಾಕಿದ್ದನ್ನೇ ನೆಪವಾಗಿರಿಸಿಕೊಂಡು ಚೀನಾ ಗಡಿಯಲ್ಲಿ ಹೆಚ್ಚಿನ ಸಂಖ್ಯೆಯ ಸೈನಿಕರನ್ನು ನಿಯೋಜಿಸಿದೆ. ಪಂಗೊಂಗ್ ಸರೋವರದ ಹತ್ತಿರ ಟಿಬೆಟ್ ನಿಂದ 200 ಕಿಲೋ ಮೀಟರ್ ದೂರದಲ್ಲಿ ನಗಾರಿ ಗುನ್ಸ ವಾಯುನೆಲೆ ಹತ್ತಿರ ಬೃಹತ್ ಪ್ರಮಾಣದ ನಿರ್ಮಾಣ ಕಾಮಗಾರಿ ನಡೆಸುತ್ತಿದೆ. ಲಡಾಖ್ ಬಳಿ ವಾಯುನೆಲೆ ವಿಸ್ತರಿಸುತ್ತಿರುವ ದೃಶ್ಯಗಳು ಉಪಗ್ರಹ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಷ್ಟೇ ಅಲ್ಲದೇ ಚೀನಾ ಅತಿ ಎತ್ತರದಿಂದ ನಿಗಾ ಇಡುವ, ದಾಳಿ ಮಾಡುವ ಸಾಮಥ್ರ್ಯ ಹೊಂದಿರುವ ಡ್ರೋನ್ ನಿಯೋಜಿಸಿದೆ.
ಭಾರತ ಏನು ಮಾಡುತ್ತಿದೆ?
ಚೀನಾ ಹಿಂದಿನಿಂದಲೂ ಗಡಿಯಲ್ಲಿ ಕಿರಿಕ್ ಮಾಡುತ್ತಲೇ ಇದೆ. ಸಂಯಮದಿಂದಲೇ ಇರುವ ಭಾರತೀಯ ಸೈನಿಕರು ಈಗ ಚೀನಿಯರ ಈ ಆಟಕ್ಕೆ ಬ್ರೇಕ್ ಹಾಕಿದ್ದಾರೆ. ಚೀನಾ ಎಲ್ಲೆಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೈನಿಕರನ್ನು ಜಮಾವಣೆ ಮಾಡಿದೆಯೋ ಆ ಪ್ರದೇಶಲ್ಲಿ ಭಾರತವೂ ಸಮಬಲ ಎಂಬಂತೆ ಹೆಚ್ಚಿನ ಸಂಖ್ಯೆಯಲ್ಲಿ ಸೇನೆಯನ್ನು ಜಮಾವಣೆ ಮಾಡಿದೆ. ಚೀನಾ ಡ್ರೋನ್ ಗೆ ಪ್ರತಿಯಾಗಿ ಭಾರತವೂ ಡ್ರೋನ್ ಕ್ಯಾಮೆರಾ ನಿಯೋಜಿಸಿದೆ.
ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಸೇನೆಯ ಮೂರೂ ಮುಖ್ಯಸ್ಥರು ಹಾಗೂ ಮೂರೂ ಸೇನೆಗಳಿಗೆ ಮುಖ್ಯಸ್ಥರಾಗಿರುವ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಬಿಪಿನ್ ರಾವತ್ ಅವರ ಜತೆ ಮಂಗಳವಾರ ಮಹತ್ವದ ಸಭೆ ನಡೆಸಿದ್ದಾರೆ. ಚೀನಾ ಯಾವುದೇ ಪ್ರತಿಭಟನೆ ನಡೆಸಿದರೂ ಆರಂಭಗೊಳಿಸಿರುವ ರಸ್ತೆ ಕಾಮಗಾರಿಯನ್ನು ಮುಂದುವರಿಸಬೇಕು. ಮಾತುಕತೆಯ ಮೂಲಕ ಸಂಘರ್ಷಕ್ಕೆ ಪೂರ್ಣ ವಿರಾಮ ಬರುವವರೆಗೆ ಸೈನಿಕರನ್ನು ಹಿಂದಕ್ಕೆ ಕರೆಸುವುದು ಬೇಡ ಎಂಬ ತೀರ್ಮಾನಕ್ಕೆ ಬರಲಾಗಿದೆ.
ಚೀನಾ ಈಗ ಕಿರಿಕ್ ಮಾಡಿದ್ದು ಯಾಕೆ?
ಚೀನಾ ಭಾರತದ ಜೊತೆಗಿನ ಗಲಾಟೆಗೆ ಸುಮಾರು 50 ವರ್ಷಗಳ ಹಿಂದಿನ ಇತಿಹಾಸವಿದೆ. 1950ರಲ್ಲಿ ಟಿಬೆಟ್ ಆಕ್ರಮಿಸಿದ ಬಳಿಕ ಭಾರತ ದಲೈ ಲಾಮಾ ಅವರಿಗೆ ಆಶ್ರಯ ನೀಡಿದ್ದಕ್ಕೆ ಆಕ್ಷೇಪವಿದೆ. ಚೀನಾ ಪಾಕಿಸ್ತಾನ ಆರ್ಥಿಕ ಕಾರಿಡಾರ್(ಸಿಪಿಇಸಿ) ಯೋಜನೆಗೆ ಭಾರತದಿಂದ ವಿರೋಧವಿದೆ. ಈಗ ಕೊರೊನಾ ವೈರಸ್ ವಿಚಾರದಲ್ಲಿ ವಿಶ್ವದ ಹಲವು ಕಂಪನಿಗಳು ಚೀನಾ ತೊರೆದು ಭಾರತದಲ್ಲಿ ಉದ್ಯಮ ಸ್ಥಾಪನೆಗೆ ಮುಂದಾಗುತ್ತಿದೆ. ಈ ವಿಚಾರವನ್ನು ಚೀನಾಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಉದ್ಯಮ ಸ್ಥಾಪಿಸಲು ಮುಂದಾಗುತ್ತಿರುವ ಕಂಪನಿಗಳಿಗೆ ಭಾರತದಲ್ಲಿ ಅಭದ್ರತೆ ಇದೆ ಎಂದು ತೋರಿಸಲು ಚೀನಾ ಕ್ಯಾತೆ ತೆರೆದಿದೆ.
ಚೀನಾ ಮೊದಲಿನಿಂದಲೂ ರಾಷ್ಟ್ರೀಯವಾದಿ ದೇಶ. ಕೊರೊನಾ ವಿಚಾರದಲ್ಲಿ ಸುಳ್ಳು ಹೇಳಿರುವ ವಿಚಾರ ಈಗಾಗಲೇ ಬಹಿರಂಗವಾಗಿದೆ. ಈ ಕಾರಣಕ್ಕೆ ಜನರನ್ನು ಈ ವಿಚಾರದಿಂದ ವಿಮುಖರನ್ನಾಗಿಸಿ ರಾಷ್ಟ್ರೀಯತೆ ವಿಚಾರದತ್ತ ಸೆಳೆಯಲು ಚೀನಾ ದಿಢೀರ್ ಭಾರತದ ವಿರುದ್ಧ ಕ್ಯಾತೆ ತೆಗೆದಿದೆ.