ನವದೆಹಲಿ: ರೈತರ ಹೋರಾಟ ಬೆಂಬಲಿಸಿ ಟ್ವೀಟ್ ಮಾಡಿದ್ದ ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್ಬರ್ಗ್ ವಿರುದ್ಧ ದೆಹಲಿ ಪೊಲೀಸರು ಪಿತೂರಿ ಆರೋಪ ಹೊರಿಸಿ ಪ್ರಕರಣ ದಾಖಲಿಸಿದ್ದಾರೆ.
ರೈತ ಹೋರಾಟದ ಪರವಾಗಿ ಹಾಲಿವುಡ್ ಗಾಯಕಿ ರಿಹಾನಾ, ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್ಬರ್ಗ್, ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಸೊಸೆ ಮೀನಾ ಹ್ಯಾರೀಸ್ ಸೇರಿದಂತೆ ವಿಶ್ವದ ಹಲವು ಪ್ರಮುಖ ಸೆಲೆಬ್ರಿಟಿಗಳು ದನಿ ಎತ್ತಿದ್ದಕ್ಕೆ ಸ್ವತಃ ಕೇಂದ್ರ ಸರ್ಕಾರ ತಿರುಗಿಬಿದ್ದಿತ್ತು. ದೇಶದ ಸಾರ್ವಭೌಮತೆಗೆ ಧಕ್ಕೆ ತರುವ ಕೆಲಸ ನಡೀತಿದೆ. ದೇಶದ ಆಂತರಿಕ ವಿಚಾರದಲ್ಲಿ ಮೂಗು ತೂರಿಸಬೇಡಿ ಎಂದು ಬಾಲಿವುಡ್ ಸೆಲೆಬ್ರಿಟಿಗಳು, ಕ್ರಿಕೆಟಿಗರು ತಿರುಗಿಬಿದ್ದಿದ್ದರು. ಈ ಬಗ್ಗೆ ಸೋಷಿಯಲ್ ಮೀಡಿಯಾ ವೇದಿಕೆಯಲ್ಲಿ ಈಗಲೂ ಪರ ವಿರೋಧ ಚರ್ಚೆ ಜೋರಾಗಿ ನಡೆದಿದೆ. ಇದೆಲ್ಲದ ಮಧ್ಯೆ ಇದೀಗ ಗ್ರೆಟಾ ಥನ್ಬರ್ಗ್ ವಿರುದ್ಧ ದೆಹಲಿ ಪೊಲೀಸರು ಪ್ರಕರಣ ದಾಖಲಿಸಸಿದ್ದಾರೆ. ಇದನ್ನೂ ಓದಿ: ವಿಶ್ವಮಟ್ಟದಲ್ಲಿ ಭಾರತದ ವಿರುದ್ಧ ಷಡ್ಯಂತ್ರ? – ಪ್ರತಿಭಟನೆಯ ಟೂಲ್ ಕಿಟ್ ಬಹಿರಂಗ ಮಾಡಿದ ಗ್ರೇಟಾ ಥನ್ಬರ್ಗ್
Advertisement
Advertisement
ಈ ಕುರಿತು ಸಹ ಪ್ರತಿಕ್ರಿಯೆ ನೀಡಿ ಟ್ವೀಟ್ ಮಾಡಿರುವ ಥನ್ಬರ್ಗ್, ಇದಕ್ಕೆಲ್ಲಾ ನಾನು ಹೆದರಲ್ಲ. ನಾನು ಈಗಲೂ ರೈತರ ಪರವೇ ಎಂದು ಹೇಳಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಸಹ ಟ್ವೀಟ್ ಮಾಡಿ, ರೈತರ ಹೋರಾಟವನ್ನು ಸಿನಿಮಾ ನಟ, ನಟಿಯರು ಬೆಂಬಲಿಸಬೇಕು ಎಂದು ಕರೆ ನೀಡಿದ್ದಾರೆ. ದೇಶಾದ್ಯಂತ ರೈತರು ನಡೆಸುತ್ತಿರುವ ಹೋರಾಟ ಕೇವಲ ರೈತ ಸಂಘಟನೆಗಳು ಅಥವಾ ರಾಜಕೀಯ ಪಕ್ಷಗಳದ್ದಲ್ಲ. ಈ ಮಣ್ಣಿನ ಎಲ್ಲ ಸಾಹಿತಿಗಳು, ಕಲಾವಿದರು ವಿಶೇಷವಾಗಿ ಸಿನಿಮಾ ನಟ-ನಟಿಯರು ಬೀದಿಗಿಳಿದು ಹೋರಾಟ ನಿರತ ರೈತರನ್ನು ಬೆಂಬಲಿಸಬೇಕು. ನಾವೆಲ್ಲರೂ ರೈತರು ಬೆಳೆದ ಅನ್ನ ತಿನ್ನುವವರಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: #IndiaAgainstPropaganda -ರಾಷ್ಟ್ರಕ್ಕಾಗಿ ನಾವೆಲ್ಲ ಒಂದಾಗೋಣ ಎಂದ ಸಚಿನ್
Advertisement
I still #StandWithFarmers and support their peaceful protest.
No amount of hate, threats or violations of human rights will ever change that. #FarmersProtest
— Greta Thunberg (@GretaThunberg) February 4, 2021
Advertisement
ಸ್ವದೇಶಿ ಸೆಲೆಬ್ರಿಟಿಗಳ ಸರಣಿ ಟ್ವೀಟ್ ಪ್ರಶ್ನಿಸಿದ ನಟಿ ತಾಪ್ಸಿ ಪನ್ನುಗೆ ನಟಿ ಕಂಗನಾ ರಣಾವತ್ ಟ್ವಿಟ್ಟರ್ ವೇದಿಕೆಯಲ್ಲಿ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ಬೆನ್ನಲ್ಲೇ, ಕಂಗನಾರ ನಿನ್ನೆಯ 2 ಟ್ವೀಟ್ಗಳನ್ನು ಅಳಿಸಿ ಟ್ವಿಟ್ಟರ್ ಶಾಕ್ ನೀಡಿದೆ. ದ್ವೇಷ ಹರಡುವ ಟ್ವೀಟ್ಗಳನ್ನು ಡಿಲೀಟ್ ಮಾಡಲಾಗಿದೆ ಎಂದು ಟ್ವಿಟ್ಟರ್ ಸ್ಪಷ್ಟಪಡಿಸಿದೆ.
ಈ ಮಧ್ಯೆ ಪ್ರಮುಖ ಬೆಳವಣಿಗೆಯಲ್ಲಿ ಕೇಂದ್ರದ ಕೃಷಿ ಕಾಯ್ದೆಗಳನ್ನು ಅಮೆರಿಕ ಸರ್ಕಾರ ಸಮರ್ಥನೆ ಮಾಡಿಕೊಂಡಿದೆ. ನೂತನ ಕೃಷಿ ಕಾಯ್ದೆಗಳಿಂದ ದೇಶದ ಮಾರುಕಟ್ಟೆ ಸಾಮಥ್ರ್ಯವನ್ನು ಹೆಚ್ಚಿಸಲಿವೆ. ಹೀಗಾಗಿ ಈ ಕಾಯ್ದೆಗಳಿಗೆ ನಮ್ಮ ಬೆಂಬಲವಿದೆ ಎಂದು ಬೈಡನ್ ಸರ್ಕಾರ ತಿಳಿಸಿದೆ. ಜೊತೆಗೆ ಶಾಂತಿಯುತ ಪ್ರತಿಭಟನೆಗಳು ಅಭಿವೃದ್ಧಿ ಹೊಂದುತ್ತಿರುವ ಪ್ರಜಾಪ್ರಭುತ್ವ ದೇಶಗಳ ಮುಖ್ಯಲಕ್ಷಣ. ಏನೇ ಸಮಸ್ಯೆಗಳಿದ್ದರೂ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಹೇಳಿದೆ. ಆದರೆ ಅಮೆರಿಕದ ಸಂಸದರಾದ ಹೇಲಿ ಸ್ಟಿವನ್ಸ್, ಇಲ್ವಾನ್ ಓಮರ್ ಸೇರಿದಂತೆ ಹಲವರು ರೈತರ ಹೋರಾಟವನ್ನು ಹತ್ತಿಕ್ಕುತ್ತಿರುವ ರೀತಿಯನ್ನು ನೋಡಲಾಗ್ತಿಲ್ಲ. ಇದು ಸರಿಯಲ್ಲ ಎಂದು ಖಂಡಿಸಿದ್ದಾರೆ.
ಈ ಮಧ್ಯೆ ಸೆಲೆಬ್ರಿಟಿಗಳ ಟ್ವೀಟ್ ವಾರ್ ಸಂಸತ್ತಿನ ಮೇಲ್ಮನೆಯಲ್ಲಿ ಪ್ರತಿಧ್ವನಿಸಿದೆ. ಯಾವುದೇ ಸೆಲೆಬ್ರಿಟಿಯ ಟ್ವೀಟ್ನಿಂದ ದೇಶದ ಪ್ರಜಾಪ್ರಭುತ್ವ ಬಲಹೀನಗೊಳ್ಳುವುದಿಲ್ಲ ಎಂದು ಆರ್ಜೆಡಿಯ ಮನೋಜ್ ಝಾ ಅಭಿಪ್ರಾಯಪಟ್ಟಿದ್ದಾರೆ. ಕೇಳುವ ವ್ಯವಧಾನ ಇಲ್ಲದಿದ್ದರೆ ಅವರು ಸರ್ವಾಧಿಕಾರಿಯೇ? ಇದಾಗಬಾರದು. ಕೂಡಲೇ ರೈತರ ಮೊರೆ ಆಲಿಸಿ ಎಂದು ಭಾವೋದ್ವೇಗದಿಂದ ಮನೋಜ್ ಝಾ ಹೇಳಿದ್ದಾರೆ. ಈ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಬಿಜೆಪಿ ಸದಸ್ಯ ಜ್ಯೋತಿರಾಧಿತ್ಯ ಸಿಂಧಿಯಾ, ಪಕ್ಷದ ವೈಖರಿಯನ್ನು ಸಮರ್ಥಿಸಿಕೊಂಡು, ರೈತರ ಅನುಕೂಲಕ್ಕಾಗಿಯೇ ಈ ಕಾಯ್ದೆ ತರಲಾಗಿದೆ. ಈ ಹಿಂದೆ ಇದೇ ಕಾಯ್ದೆಗಳನ್ನು ಬೆಂಬಲಿಸಿದ್ದವರು ಈಗ ದಾರಿ ಬದಲಿಸಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಇದಕ್ಕೆ ಸ್ಪಂದಿಸಿದ ದಿಗ್ವಿಜಯ್ ಸಿಂಗ್, ನೀವು ಯಾವುದೇ ಪಕ್ಷದಲ್ಲಿದ್ದರೂ, ನಮ್ಮ ಆಶೀರ್ವಾದ ನಿಮಗೆ ಇದ್ದೇ ಇರುತ್ತೆ ಎಂದು ಕಾಲೆಳೆದರು. ಇದೇ ವೇಳೆ ಮಾತನಾಡಿದ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರು, ಗಣತಂತ್ರದಂದು ದೆಹಲಿಯಲ್ಲಿ ನಡೆದ ಘಟನೆ ಖಂಡನೀಯ. ಆದರೆ ಇದಕ್ಕೆ ರೈತರು ಜವಾಬ್ದಾರರಲ್ಲ. ರೈತರ ಮೇಲೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬಾರದು. ರಸ್ತೆಯಲ್ಲಿ ಗೋಡೆ ನಿರ್ಮಿಸಿರುವುದರಿಂದ ಯಾವುದೇ ಪ್ರಯೋಜನ ಇಲ್ಲ. ಸರ್ಕಾರ ಶಾಂತಿಯುತವಾಗಿ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು. ಅತ್ತ ಲೋಕಸಭೆಯ ಇಡೀ ದಿನದ ಕಲಾಪ ವಿಪಕ್ಷಗಳ ಗದ್ದಲಕ್ಕೆ ಬಲಿ ಆಗಿದೆ. ಈ ಮಧ್ಯೆ, ಚೌರಾಚೌರಿ ಹೋರಾಟಕ್ಕೆ ಶತಮಾನ ತುಂಬಿದ ಈ ಸಂದರ್ಭದಲ್ಲಿ ಮಾತನಾಡಿದ ಮೋದಿ, ರೈತರೇ ದೇಶದ ಬೆನ್ನೆಲುಬು ಎಂದಿದ್ದಾರೆ. ಚೌರಾಚೌರಿ ಹೋರಾಟದ ವೇಳೆ ಠಾಣೆಗೆ ಬೆಂಕಿ ಹಚ್ಚಿದ್ದು ಬಹುದೊಡ್ಡ ಸಂದೇಶ. ರೈತರು ಇದರಲ್ಲಿ ಮುಖ್ಯಪಾತ್ರ ವಹಿಸಿದ್ದರು ಎಂದು ಮೋದಿ ಹೇಳಿದ್ದಾರೆ.