ಚಾಮರಾಜನಗರ: ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನಡೆಯಬೇಕಿದ್ದ ಸುಪ್ರಸಿದ್ಧ ಶ್ರೀ ಕ್ಷೇತ್ರ ಚಿಕ್ಕಲ್ಲೂರು ಜಾತ್ರೆಯು ಮೊದಲನೇ ದಿನದ ಚಂದ್ರಮಂಡಲೋತ್ಸವ ಈ ಬಾರಿ ಸರಳ ಹಾಗೂ ಸಾಂಪ್ರದಾಯಿಕವಾಗಿ ಜರುಗಿತು.
ಕೋವಿಡ್ -19 ನಿಂದಾಗಿ ಜಿಲ್ಲಾಡಳಿತ ಚಿಕ್ಕಲ್ಲೂರು ಜಾತ್ರೆಗೆ ಸಾರ್ವಜನಿಕರ ಸಂಪೂರ್ಣ ನಿರ್ಬಂಧ ವಿಧಿಸಿದ್ದ ಹಿನ್ನೆಲೆ ಲಕ್ಷಾಂತರ- ಜನಸ್ತೋಮದ ನಡುವೆ ನಡೆಯುತ್ತಿದ್ದ ಜಾತ್ರೆಯು, ಭಕ್ತರಿಲ್ಲದೆ ಬಣಗುಡುತಿತ್ತು. ಪ್ರತಿವರ್ಷವೂ ಜನಜಂಗುಳಿ ನಡುವೆಯೇ ನೆರವೇರುತ್ತಿದ್ದ ಚಿಕ್ಕಲ್ಲೂರಯ್ಯನ ಜಾತ್ರೆ ಭಕ್ತರಿಲ್ಲದೆ ದೇವಾಲಯದ ಆವರಣ ಕಳೆಗುಂದಿತ್ತು. ದೀಪಾಲಂಕಾರ, ತಳಿರು ತೋರಣ, ಹೂ ಅಲಂಕಾರವೂ ಸಾಮಾನ್ಯವಾಗಿತ್ತು.
Advertisement
Advertisement
ಹಳೇ ಮಠದಿಂದ ತಮಟೆ, ಡೊಳ್ಳು, ಕಂಸಾಳೆ, ಜಾಗಟೆ, ಕೊಂಬು ಕಹಳೆ ಸದ್ದಿನಲ್ಲಿ ನಿಶಾನೆ, ಛತ್ರಿ, ಚಾಮರ, ಸತ್ತಿಗೆ ಸೂರಪಾನಿ, ಚೆನ್ನಯ್ಯ -ಲಿಂಗಯ್ಯ ಉರಿಕಂಡಾಯಗಳೊಡನೆ ಬಸವನ ಮುಂದೆ ಬಿಟ್ಟುಕೊಂಡು ಬೊಪ್ಪೆಗೌಡನಪುರದ ಧರೆಗೆ ದೊಡ್ಡವರ ಸಂಸ್ಥಾನ ಮಠದ ಸ್ವಾಮೀಜಿ ಶ್ರೀ ಜ್ಞಾನಾನಂದ ಚೆನ್ನರಾಜೇ ಅರಸ್ ಅವರು ತಮ್ಮ ಕುಟುಂಬ ಸಮೇತರಾಗಿ ಆಗಮಿಸಿ ಶ್ರೀ ಸಿದ್ದಪ್ಪಾಜಿ ಐಕ್ಯ ಗದ್ದುಗೆಗೆ ಪೂಜಾ ಕೈಂಕರ್ಯಗಳನ್ನು ನೇರವೇರಿಸಿದರು.
Advertisement
ಸುತ್ತೇಳು ಗ್ರಾಮಸ್ಥರು ನೀಡಿದ್ದ ಹಚ್ಚೆ, ಬಿದಿರು, ಪಂಜು ಎಣ್ಣೆ ಇನ್ನಿತರ ಸಾಮಾಗ್ರಿಗಳನ್ನು ಸೇರಿಸಿ ಘನನೀಲಿಯ ಗದ್ದುಗೆ ಚಂದ್ರಮಂಡಲ ಕಟ್ಟೆಯಲ್ಲಿ ಸಿದ್ದವಾಗಿದ್ದ ಸಿದ್ದಪ್ಪಾಜಿ ಚಂದ್ರಮಂಡಲದ ಸುತ್ತ ಮೂರು ಪ್ರದಕ್ಷಿಣೆ ಹಾಕಿದ ಸ್ವಾಮಿಗಳು ನಂತರ ವಿಶೇಷ ಪೂಜೆ ಸಲ್ಲಿಸಿದರು.
Advertisement
ಉತ್ತರ ದಿಕ್ಕಿಗೆ ಬಾಗಿದ ಚಂದ್ರ ಮಂಡಲ:
ಪ್ರತಿ ವರ್ಷದಂತೆ ಚಿಕ್ಕಲ್ಲೂರು ಜಾತ್ರೆಗೆ ಚಂದ್ರಮಂಡಲದಿಂದ ತೆರೆಬೀಳದಿದ್ದು. ಶ್ರೀ ಜ್ಞಾನಾನಂದ ಚೆನ್ನರಾಜೇ ಅರಸ್ 10.35 ಕ್ಕೆ ಚಂದ್ರಮಂಡಲಕ್ಕೆ ಅಗ್ನಿ ಸ್ಪರ್ಶ ಮಾಡಿದರು. ಆಕಾಶಕ್ಕೆ ಮುಖಮಾಡಿ ಪ್ರಜ್ವಲಿಸಿ ಹೊತ್ತಿಹುರಿದ ಚಂದ್ರಮಂಡಲ ಉತ್ತರ ದಿಕ್ಕಿಗೆ ಬಾಗಿ ಹುರಿಯಿತು.
ಮಠದ ಸಿಬ್ಬಂದಿ ಹಾಗೂ ಚಂದ್ರಮಂಡಲ ತಂಡದವರು ದವಸ ಧಾನ್ಯ ಹಾಗೂ ಹಣ್ಣು ಮತ್ತು ನಾಣ್ಯಗಳನ್ನು ಮಂಡಲಕ್ಕೆ ಎಸೆದರು.ಯಾವ ದಿಕ್ಕಿಗೆ ಬಾಗಿ ಜ್ಯೋತಿ ಹುರಿಯುತ್ತದೆಯೋ, ಆ ಭಾಗದಲ್ಲಿ ಉತ್ತಮ ಮಳೆ, ಬೆಳೆಯಾಗಿ ಸುಭಿಕ್ಷೆ ಮತ್ತು ಸಮೃದ್ಧಿಯಾಗುತ್ತದೆ ಎಂಬುದು ಇಲ್ಲಿನ ನಂಬಿಕೆಯಾಗಿದೆ.
ಕೋವಿಡ್ -19 ಬಿಗಿ ಪೊಲೀಸ್ ಬಂದೋಬಸ್ತ್:
ಚಿಕ್ಕಲ್ಲೂರಿಗೆ ತೆರಳುವ ಮಾರ್ಗ ಮಧ್ಯೆ ಸಿಗುವ ಮತ್ತೀಪುರ, ಕೊತ್ತನೂರು ಹಾಗೂ ಬಾಣೂರು ಕ್ರಾಸ್ ಬಳಿ ಚೆಕ್ ಪೋಸ್ಟ್ ತೆರೆಯಲಾಗಿತ್ತು. ಜಿಲ್ಲಾಧಿಕಾರಿ ಡಾ.ಎಂ.ಆರ್ ರವಿ ಆದೇಶದ ಮೇರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರ ಥಾಮಸ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ನಾಗರಾಜು ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ನಿಯೋಜಿಸಲಾಗಿತ್ತು. ಜಿಲ್ಲೆ ಹಾಗೂ ಇತರ ಕಡೆಗಳಿಂದ ಭಕ್ತಾದಿಗಳು ಆಗಮಿಸಿದಂತೆ ತಡೆಗಟ್ಟಲು ಮುನ್ನೆಚ್ಚರಿಕೆ ವಹಿಸಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.
ಪೋಲಿಸರ ಕಣ್ತಪ್ಪಿಸಿ ಬಂದ ಭಕ್ತರು ಲಾಕ್:
ಸಾರ್ವಜನಿಕರ ನಿರ್ಬಂಧವಿದ್ದರಿಂದ ದೇವಸ್ಥಾನದ 200 ಮೀ ಸುತ್ತ ಪೊಲೀಸರು ಸರ್ಪಗಾವಲಿತ್ತು. ಸಮೀಪದ ಗ್ರಾಮಸ್ಥರು ಚಂದ್ರಮಂಡಲ ವಿಕ್ಷೀಸಲು ಬರುತ್ತಿದಂತೆ ಅಡ್ಡಗಟ್ಟಿದ ಪೊಲೀಸರು ಸಾರ್ವಜನಿಕರನ್ನು ದೇವಾಲಯದ ಆವರಣಕ್ಕೆ ತೆರಳಲು ಬಿಡಲಿಲ್ಲ.
ಐದು ದಿನಗಳ ಜಾತ್ರೆ:
ಜ.28 ರಿಂದ ಐದು ದಿನಗಳ ಕಾಲ ನಡೆಯುವ ಚಿಕ್ಕಲ್ಲೂರು ಜಾತ್ರೆ ಸರಳ ಹಾಗೂ ಸಂಪ್ರದಾಯಿಕವಾಗಿ ನಡೆಯಲಿದ್ದು. 28 ರಂದು ಚಂದ್ರಮಂಡಲೋತ್ಸವ, 29 ಹುಲಿವಾಹನೋತ್ಸವ, 30 ರಂದು ರುದ್ರಾಕ್ಷಿಮಂಟಪೋತ್ಸವ(ಮುಡಿಸೇವೆ), 31 ರಂದು ಗಜವಾಹನೋತ್ಸವ (ಪಂಕ್ತಿಸೇವೆ) 1 ರಂದು ಮುತ್ತುರಾಯರ ಸೇವೆ ನೆರವೇರಲಿದೆ. ಸಾರ್ವಜನಿಕರಿಗೆ ಸಂಪೂರ್ಣ ನಿಷೇದ ವಿಧಿಸಲಾಗಿದೆ.
ಒಟ್ಟಾರೆ ಲಕ್ಷಾಂತರ- ಜನಸ್ತೊಮದ ನಡುವೆ ವಿಜೃಭಣೆಯಿಂದ ನಡೆಯುತ್ತಿದ್ದ ಚಂದ್ರಮಂಡಲ ಕೊವೀಡ್- 19 ನಿಂದಾಗಿ ಸರಳವಾಗಿ ಆಚರಿಸಲ್ಪಟಿತು. ಈ ಪ್ರಸಂಗ ಚಿಕ್ಕಲ್ಲೂರು ಜಾತ್ರೆಯ ಪರಂಪರೆಯಲ್ಲಿ ಇದೇ ಮೊದಲಾಗಿದೆ.