ಮುಂಬೈ: ಮಹಾರಾಷ್ಟ್ರ ಸರ್ಕಾರ ಬ್ಯಾಲೆಟ್ ಪೇಪರ್ನಲ್ಲಿ ಚುನಾವಣೆ ನಡೆಸಲು ಚಿಂತನೆ ಮಾಡಿದೆ. ಇವಿಎಂ ಜೊತೆಯಲ್ಲೇ ಬ್ಯಾಲೆಟ್ ಪೇಪರ್ನಲ್ಲಿ ಚುನಾವಣೆ ಆಯೋಜಿಸಲು ಈಗ ಕಾನೂನು ತರಲು ಮುಂದಾಗಿದೆ.
ವಿಧಾನಸಭೆ ಸ್ಪೀಕರ್ ನಾನಾ ಪಟೋಲೆ ಅವರು ಇವಿಎಂ ಸೇರಿದಂತೆ ಬ್ಯಾಲೆಟ್ ಪೇಪರ್ನಲ್ಲಿ ಚುನಾವಣೆ ನಡೆಸಲು ಸಾಧ್ಯವೇ ಪರಿಶೀಲಿಸಿ ಎಂದಿದ್ದಾರೆ. ಅಷ್ಟೇ ಅಲ್ಲದೇ ಈ ಸಂಬಂಧ ಮಸೂದೆ ರಚಿಸುವಂತೆ ಮಹಾ ವಿಕಾಸ್ ಆಘಾಡಿ ಸರ್ಕಾರಕ್ಕೆ ಸೂಚಿಸಿದ್ದಾರೆ.
Advertisement
Advertisement
Advertisement
ಒಂದು ವೇಳೆ ಕರಡು ಸಿದ್ಧವಾಗಿದ್ದರೆ, ಮುಂಬರುವ ಬಜೆಟ್ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸಬಹುದು ಎಂದು ಪಟೋಲೆ ಪ್ರತಿಕ್ರಿಯಿಸಿದ್ದಾರೆ. ಸಂವಿಧಾನದ ಅನುಚ್ಛೇದ 328ರ ಅಡಿ ರಾಜ್ಯದಲ್ಲಿ ಚುನಾವಣೆಗಳನ್ನು ನಡೆಸಲು ಕಾನೂನು ಸಿದ್ಧಪಡಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರ ನೀಡಲಾಗಿದೆ. ಈ ಸಂಬಂಧ ಹಲವರ ಜೊತೆಗೆ ಈಗಾಗಲೇ ಸಭೆಗಳನ್ನು ನಡೆಸಲಾಗಿದೆ ಎಂದು ಸ್ಪೀಕರ್ ನಾನಾ ಪಟೋಲೆ ಸೂಚನೆ ನೀಡಿದ್ದಕ್ಕೆ ಸಮರ್ಥನೆ ನೀಡಿದ್ದಾರೆ.
Advertisement
ಮಹಾರಾಷ್ಟ್ರದಲ್ಲಿ 2024ಕ್ಕೆ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಹಿಂದಿನಿಂದಲೂ ಶಿವಸೇನೆ, ಕಾಂಗ್ರೆಸ್, ಎನ್ಸಿಪಿ ಪಕ್ಷಗಳು ಇವಿಎಂನಿಂದ ದುರುಪಯೋಗ ಆಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿ ಬ್ಯಾಲೆಟ್ ಪೇಪರ್ನಲ್ಲಿ ಚುನಾವಣೆ ನಡೆಸುವಂತೆ ಆಗ್ರಹಿಸಿದ್ದವು. ಆದರೆ ಕೇಂದ್ರ ಚುನಾವಣಾ ಆಯೋಗ ಈ ಆರೋಪಗಳನ್ನು ತಿರಸ್ಕರಿಸಿತ್ತು.
ಒಂದು ವೇಳೆ ಕಾಯ್ದೆ ತಂದರೆ ಇದು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ನಡುವೆ ತಿಕ್ಕಾಟ ನಡೆಯುವ ಸಾಧ್ಯತೆಯಿದೆ. ರಾಜ್ಯಪಾಲರು ಸಹಿ ಹಾಕುವುದು ಅನುಮಾನ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಕಾನೂನು ಸಮರ ನಡೆಯುವುದು ನಿಶ್ಚಿತ ಎಂದು ವಿಶ್ಲೇಷಿಸಲಾಗುತ್ತದೆ.