ಮಂಡ್ಯ: ವಿಶ್ವದ ದೊಡ್ಡಣ್ಣ ಅಮೆರಿಕದ ನೂತನ ಅಧ್ಯಕ್ಷ ಜೋ ಬೈಡನ್ ಜಯಭೇರಿ ಹಿಂದೆ ಮಂಡ್ಯ ಮೂಲದ ಡಾ.ವಿವೇಕ್ ಮೂರ್ತಿ ಪಾತ್ರ ದೊಡ್ಡದು. ಬೈಡನ್ ಪರ ಚುನಾವಣಾ ತಂತ್ರಗಾರರ ಪೈಕಿ ವಿವೇಕ್ ಕೂಡ ಒಬ್ಬರು. ಈ ನಡುವೆಯೆ ವಿವೇಕ್ ಅವರಿಗೆ ಮಹತ್ವದ ಹುದ್ದೆ ಸಿಗೋದು ಪಕ್ಕ ಆಗಿದ್ದು, ಆ ಮೂಲಕ ಮಂಡ್ಯದ ಹೆಸರು ಅಮೆರಿಕಾದಲ್ಲೂ ಕಮಾಲ್ ಮಾಡುತ್ತಿದೆ.
ಅಂದಹಾಗೆ ಡಾ.ವಿವೇಕ್ ಮೂರ್ತಿ ಮಂಡ್ಯ ತಾಲೂಕಿನ ಹಲ್ಲೆಗೆರೆ ಗ್ರಾಮದವರು. ಡಾ.ಎಚ್.ಎನ್.ಲಕ್ಷ್ಮಿನಾರಾಯಣಮೂರ್ತಿ ಮತ್ತು ಮೈತ್ರೇಯಿ ದಂಪತಿಯ ಏಕೈಕ ಪುತ್ರ. ಡಾಕ್ಟರ್ಸ್ ಫಾರ್ ಅಮೆರಿಕಾ ಎಂಬ ಸಂಘಟನೆಯ ಸಹ ಸಂಸ್ಥಾಪಕರು ಹಾಗೂ ಅಧ್ಯಕ್ಷರೂ ಆಗಿದ್ದಾರೆ. ಬರಾಕ್ ಒಬಾಮಾ ಎರಡನೇ ಅವಧಿಗೆ ಅಧ್ಯಕ್ಷರಾಗಿದ್ದಾಗ ವಿವೇಕ್ ಮೂರ್ತಿ ಸಾರ್ವಜನಿಕ ಆರೋಗ್ಯ ಸೇವೆಯ ಮುಖ್ಯಸ್ಥ ಹುದ್ದೆಯಾದ ಸರ್ಜನ್ ಜನರಲ್ ಆಗಿ ಕಾರ್ಯನಿರ್ವಹಿಸಿದ್ದರು.
Advertisement
Advertisement
ಈ ಬಾರಿಯ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಪರ ಕೆಲಸ ಮಾಡಿದ್ದರು. ಪ್ರಚಾರ ನಡೆಸುವ ಜೊತೆ ಜೊತೆಗೆ ಚುನಾವಣಾ ತಂತ್ರಗಾರಿಕೆ ನಡೆಸಿ ಜೊ ಬೈಡನ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ನಿಟ್ಟಿನಲ್ಲಿ ಬೈಡನ್ ಸರ್ಕಾರ ರಚನೆಯಾದ ಬಳಿಕ ವಿವೇಕ್ ಮೂರ್ತಿ ಅವರಿಗೆ ಉನ್ನತ ಹುದ್ದೆ ನೀಡುವ ನಿರೀಕ್ಷೆ ಇದ್ದು, ವಿವೇಕ್ ಸಾಧನೆಗೆ ಬಗ್ಗೆ ಹುಟ್ಟೂರಿನ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
Advertisement
Advertisement
ವಿವೇಕ್ ಮೂರ್ತಿ ಅವರ ತಂದೆ ಡಾ.ಎಚ್.ಎನ್.ಲಕ್ಷ್ಮೀನಾರಾಯಣಮೂರ್ತಿ ಉನ್ನತ ವ್ಯಾಸಂಗಕ್ಕೆ ಲಂಡನ್ಗೆ ತೆರಳಿದ್ದರು. ಬಳಿಕ ಅಲ್ಲಿಯೇ ವೃತ್ತಿ ಆರಂಭಿಸಿದ್ದರು. ವಿವೇಕ್ ಹುಟ್ಟಿದ್ದು ಲಂಡನ್ ನಲ್ಲಿ, ಬೆಳೆದಿದ್ದು ಅಮೇರಿಕದಲ್ಲಿ. ಇಡೀ ಜೀವನವನ್ನು ಅಮೆರಿಕದಲ್ಲೇ ಕಳೆದರೂ ತಾಯ್ನಾಡು ಹಾಗೂ ಮಾತೃಭಾಷೆ ಕನ್ನಡವನ್ನು ಮರೆತಿಲ್ಲ. ಇಂದಿಗೂ ನಿರರ್ಗಳವಾಗಿ ಕನ್ನಡ ಮಾತನಾಡುತ್ತಾರೆ. ವರ್ಷಕ್ಕೊಮ್ಮೆ ಹಲ್ಲೆಗೆರೆ ಗ್ರಾಮಕ್ಕೆ ತಂದೆಯೊಡನೆ ಬಂದು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಾರೆ.
ಪ್ರತೀ ವರ್ಷ ಆರೋಗ್ಯ ಶಿಬಿರ ಆಯೋಜಿಸಿ, ತಾವೇ ಹಳ್ಳಿಗರಿಗೆ ತಪಾಸಣೆ ಮಾಡುತ್ತಾರೆ. 30ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿಗೆ ಕಂಪ್ಯೂಟರ್ ನೀಡಿ, ಮಕ್ಕಳ ಶೈಕ್ಷಣಿಕ ಪ್ರಗತಿಗೆ ಒತ್ತು ನೀಡುತ್ತಿದ್ದಾರೆ. ವಿವೇಕ್ ಮೂರ್ತಿ ಅವರ ಸರಳತೆಗೆ ಹಲ್ಲೆಗೆರೆಯ ಜನ ಮನಸೋತಿದ್ದಾರೆ.