– ಭದ್ರಾ ನದಿಯಲ್ಲಿ ಈಜಲು ಹೋಗಿದ್ದ ಯುವಕ ನಾಪತ್ತೆ
ಚಿಕ್ಕಮಗಳೂರು: ಅಪಘಾತವಾಗಿ ಸವಾರ ಬೈಕ್ ಸಮೇತ ಆರು ಅಡಿ ಆಳದ ಕಂದಕಕ್ಕೆ ಬಿದ್ದ ಪರಿಣಾಮ ವಿಷಯ ಯಾರಿಗೂ ತಿಳಿಯದೆ ಸುಮಾರು 18 ಗಂಟೆಗಳ ಬಳಿಕ ವಿಷಯ ಬೆಳಕಿಗೆ ಬಂದ ಘಟನೆ ಜಿಲ್ಲೆಯ ಕಳಸ ತಾಲೂಕಿನ ಸುಂಕಸಾಲೆ ಗ್ರಾಮದ ಬಳಿ ನಡೆದಿದೆ.
ಬೈಕ್ ಸಮೇತ ಕಂದಕಕ್ಕೆ ಬಿದ್ದು ಮೇಲೇಳದ ಸ್ಥಿತಿಯಲ್ಲಿದ್ದ ಯುವಕ ಸಹಾಯಕ್ಕೆ ಯಾರೂ ಧಾವಿಸದ ಹಿನ್ನೆಲೆ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮೃತನನ್ನ 33 ವರ್ಷದ ರಂಜಿತ್ ಎಂದು ಗುರುತಿಸಲಾಗಿದೆ. ಭಾನುವಾರ ರಾತ್ರಿ ಸುಮಾರು 9.30ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಆದರೆ ಇಂದು ಸಂಜೆ 4 ಗಂಟೆವರೆಗೂ ವಿಷಯ ಯಾರಿಗೂ ತಿಳಿದಿರಲಿಲ್ಲ. ಯುವಕ ಮನೆಗೂ ಬಂದಿಲ್ಲ. ಫೋನ್ ಕೂಡ ಪಿಕ್ ಮಾಡ್ತಿಲ್ಲ ಎಂದು ಹುಡುಕಾಟ ಆರಂಭಿಸಿದಾಗಿ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಭೇಟಿ ನೀಡಿರೋ ಬಾಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಯುವಕನ ಸಾವಿಗೆ ಕಾರಣ ಏನೆಂದು ತನಿಖೆ ಆರಂಭಿಸಿದ್ದಾರೆ.
Advertisement
Advertisement
ಇನ್ನು ಜಿಲ್ಲೆಯ ಕಳಸ ತಾಲೂಕಿನ ಹಿಳುವಳ್ಳಿ ಬಳಿ ಭದ್ರಾ ನದಿಯಲ್ಲಿ ಈಜಲು ಹೋಗಿದ್ದ ಯುವಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಮೃತನನ್ನ 35 ವರ್ಷದ ರಾಜೇಶ್ ಎಂದು ಗುರುತಿಸಲಾಗಿದೆ. ಮುಳುಗು ತಜ್ಞರಿಂದ ಮೃತನ ಮೃತದೇಹಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ. ಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿರೋದ್ರಿಂದ ಮೃತದೇಹ ಹುಡುಕಾಟಕ್ಕೆ ತೊಂದರೆಯಾಗಿದೆ. ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು, ಸ್ಥಳೀಯರು ಹಾಗೂ ಸ್ಥಳೀಯ ಈಜುಪಟುಗಳು ಭದ್ರಾ ನದಿ ಒಡಲಲ್ಲಿ ಮೃತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಕಳಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.