– ಶೋಕಿ ಜೀವನ ನಡೆಸಲು ಹೆತ್ತವರಿಂದಲೇ 4 ತಿಂಗಳ ಕಂದಮ್ಮನ ಮಾರಾಟ
ಚಿಕ್ಕಬಳ್ಳಾಪುರ: ಹೆತ್ತ ತಂದೆ ತಾಯಿಯೇ 4 ತಿಂಗಳ ಹೆಣ್ಣು ಮಗುವನ್ನು ಮಾರಾಟ ಮಾಡಿರುವ ಅನುಮಾನಸ್ಪದ ಘಟನೆ ಚಿಕ್ಕಬಳ್ಳಾಪುರದಲ್ಲಿ ಬೆಳಕಿಗೆ ಬಂದಿದೆ.
Advertisement
ಜಿಲ್ಲೆಯ ಚಿಂತಾಮಣಿ ತಾಲೂಕಿನ ತಿನಕಲ್ಲು ಗ್ರಾಮದ ಮಹಾಲಕ್ಷ್ಮೀ ಹಾಗೂ ನರಸಿಂಹಮೂರ್ತಿ ದಂಪತಿಗೆ ಇಬ್ಬರು ಮಕ್ಕಳಿದ್ದು, ಇದರಲ್ಲಿ 4 ತಿಂಗಳ ಹೆಣ್ಣು ಮಗುವನ್ನು ಶಿಡ್ಲಘಟ್ಟ ತಾಲೂಕು ಮಳಮಾಚನಹಳ್ಳಿ ಗ್ರಾಮದ ಮಂಜುನಾಥ್ ಹಾಗೂ ಮುನಿರತ್ನಮ್ಮ ದಂಪತಿಗೆ ಮಾರಾಟ ಮಾಡಿದ್ದಾರೆ. 50 ವರ್ಷದ ಮುನಿರತ್ನಮ್ಮ ಹಾಗೂ 55 ವರ್ಷದ ಮಂಜುನಾಥ್ ದಂಪತಿಗೆ ಮಕ್ಕಳಿರಲಿಲ್ಲ. ಹೀಗಾಗಿ ತಿನಕಲ್ಲು ಗ್ರಾಮದ ಮಹಾಲಕ್ಷ್ಮೀ ಹಾಗೂ ನರಸಿಂಹಮೂರ್ತಿ ಮಗುವನ್ನ ದತ್ತು ನೀಡಲು ಮುಂದಾಗಿದ್ದಾರೆ.
Advertisement
ಈ ಪ್ರಕರಣದಲ್ಲಿ ಮಹಿಳಾ ಹೋಮ್ ಗಾರ್ಡ್ ಮಧ್ಯವರ್ತಿಯಾಗಿ ಮಗು ಮಾರಾಟ ಮಾಡಿಸಿರುವ ಮಾಹಿತಿ ಲಭ್ಯವಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಬಂದ ಖಚಿತ ಮಾಹಿತಿ ಮೇರೆಗೆ ತಿನಕಲ್ಲು ಗ್ರಾಮ ಹಾಗೂ ಮಳಮಾಚನಹಳ್ಳಿ ಗ್ರಾಮದ ದಂಪತಿ ಮನೆ ಮೇಲೆ ದಾಳಿ ಮಾಡಿದಾಗ ಮಳಮಾಚನಹಳ್ಳಿ ಗ್ರಾಮದ ಮಂಜುನಾಥ್-ಮುನಿರತ್ನಮ್ಮ ಮನೆಯಲ್ಲಿ ಮಗು ಪತ್ತೆಯಾಗಿದ್ದು, ಈ ವೇಳೆ ವಿಚಾರಿಸಿದಾಗ ಮಗುವಿನ ತಂದೆ, ತಾಯಿ ಬಾಯ್ಬಿಟ್ಟಿದ್ದಾರೆ.
Advertisement
Advertisement
ತಂದೆ, ತಾಯಿ ಮಗುವನ್ನು ಸಾಕಲು ಅಶಕ್ತರಾದ ಕಾರಣ ನಾವು ಸಾಕುತ್ತಿದ್ದೇವೆ ಎಂದು ಮಗು ಕೊಂಡುಕೊಂಡ ದಂಪತಿ ಹೇಳಿದ್ದಾರೆ. ಮಗು ಮಾರಾಟ ಮಾಡಿರುವ ಮನೆಗೆ ಭೇಟಿ ನೀಡಿದಾಗ ತಾಯಿ ಮಾತ್ರ ಇದ್ದು, ತಂದೆ ಪರಾರಿಯಾಗಿದ್ದ. ಹೀಗಾಗಿ ಮನೆಯಲ್ಲಿದ್ದ ತಾಯಿ ಹಾಗೂ ಮತ್ತೊಂದು ಗಂಡು ಮಗುವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೆ ಈ ಸಂಬಂಧ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿಗಳು ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸದ್ಯ ವಶಕ್ಕೆ ಪಡೆದ ಮಗುವನ್ನ ಚಿಕ್ಕಬಳ್ಳಾಪರ ಜಿಲ್ಲಾಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಒಂದರಿಂದ ಒಂದೂವರೆ ಲಕ್ಷ ರೂಪಾಯಿಗೆ ಮಗುವನ್ನು ಮಾರಾಟ ಮಾಡಲಾಗಿದೆ ಎನ್ನಲಾಗಿದೆ. ಈ ಹಣದಲ್ಲಿ ತಂದೆ ಹೊಸ ಬೈಕ್ ಹಾಗೂ ತಾಯಿ ಹೊಸ ಮೊಬೈಲ್ ಖರೀದಿಸಿ ಶೋಕಿ ಮಾಡುತ್ತಿದ್ದಾಗ ಅನುಮಾನಗೊಂಡವರು ಈ ವಿಚಾರವನ್ನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿಗಳಿಗೆ ತಿಳಿಸಿದ್ದರು. ಈ ಕುರಿತು ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಮಗುವನ್ನು ವಶಕ್ಕೆ ಪಡೆದು, ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರ ತನಿಖೆಯಿಂದ ಸಂಪೂರ್ಣ ಸತ್ಯ ಬಯಲಾಗಬೇಕಿದೆ.