ಬೆಂಗಳೂರು: ರಾಜರಾಜೇಶ್ವರಿ ನಗರ ಉಪ ಚುನಾವಣೆ ಮತಎಣಿಕೆಗೆ ಸಿದ್ಧತೆ ಮುಕ್ತಾಯವಾಗಿದೆ. ಬಿಬಿಎಂಪಿ, ಪೊಲೀಸ್ ಇಲಾಖೆಯ ಭದ್ರತೆಯಲ್ಲಿ ಮತಎಣಿಕೆ ನಡೆಯಲಿದ್ದು, ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಪ್ರತಿಷ್ಠೆಯ ಅಖಾಡ, ಘಟಾನುಘಟಿಗಳೇ ಕಣಕ್ಕಿಳಿದು ಸವಾಲಿಗೆ ಸವಾಲೆಸೆದು ರಂಗೇರಿದ್ದ ರಣಕಣ ರಾಜರಾಜೇಶ್ವರಿ ನಗರ ಉಪಚುನಾವಣೆಯ ಫಲಿತಾಂಶ ಇಂದು ಹೊರಬೀಳಲಿದೆ. ರಾಜರಾಜೇಶ್ವರಿ ಯಾರಿಗೆ ಒಲಿಯಲಿದ್ದಾಳೆ ಅನ್ನೋದು ಮಧ್ಯಾಹ್ನದ ವೇಳೆಗೆ ಕ್ಲೀಯರ್ ಪಿಕ್ಚರ್ ಸಿಗಲಿದೆ.
Advertisement
ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಪ್ರತಿಷ್ಠೆಯ ಕಣವಾಗಿರುವ ಕ್ಷೇತ್ರದಲ್ಲಿ ಗೆಲುವಿನ ಕುದುರೆ ಏರುವವರು ಯಾರು ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಈಗಾಗಲೇ ರಾಜರಾಜೇಶ್ವರಿ ನಗರ ಉಪಚುನಾವಣೆಯ ಮತಎಣಿಕೆಗೆ ಸಕಲ ಸಿದ್ಧತೆ ಪೂರ್ಣಗೊಂಡಿದ್ದು, ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದೆ. ಬಿಜೆಪಿಯ ಮುನಿರತ್ನ, ಕಾಂಗ್ರೆಸ್ಸಿನ ಕುಸುಮಾ ಹಾಗೂ ಜೆಡಿಎಸ್ನ ಕೃಷ್ಣಮೂರ್ತಿ ಸೇರಿದಂತೆ 16 ಹುರಿಯಾಳುಗಳ ಭವಿಷ್ಯ ಮಧ್ಯಾಹ್ನದೊಳಗೆ ಪ್ರಕಟವಾಗಲಿದೆ.
Advertisement
Advertisement
ಹಲಗೆವಡೇರಹಳ್ಳಿಯ ಜ್ಞಾನಾಕ್ಷಿ ವಿದ್ಯಾನಿಕೇತನ ಶಾಲೆಯಲ್ಲಿ ಮತಎಣಿಕೆ ನಡೆಯಲಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆವರೆಗೂ ಇಡೀ ಕ್ಷೇತ್ರ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಮದ್ಯ ಮಾರಾಟಕ್ಕೂ ನಿರ್ಬಂಧ ಹಾಕಲಾಗಿದೆ. ಪೊಲೀಸರ ಹದ್ದಿನ ಕಣ್ಣಿನಲ್ಲಿ ಮತ ಎಣಿಕೆ ನಡೆಯಲಿದೆ.
Advertisement
ಆರ್.ಆರ್.ನಗರ ಮತ ಎಣಿಕೆಗೆ ಕ್ಷಣಗಣನೆ:
ಮುನಿರತ್ನ, ಕುಸುಮಾ, ಕೃಷ್ಣಮೂರ್ತಿ ಸೇರಿ ಒಟ್ಟು 16 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 2,09,828 ಮತ ಚಲಾವಣೆ, ಒಟ್ಟು ಶೇ.45.48ರಷ್ಟು ಮತದಾನವಾಗಿದೆ. 412 ಅಂಚೆ ಹಾಗೂ 04 ಇಟಿಪಿಬಿಎಸ್ ಮತ ಚಲಾವಣೆ ಆಗಿದೆ. ಮೊದಲು ಬೆಳಗ್ಗೆ 8 ಗಂಟೆಗೆ ಅಂಚೆ ಮತ ಎಣಿಕೆ ಹಾಗೂ ಇಟಿಪಿಬಿಎಸ್ ಮತಎಣಿಕೆ ಆರಂಭವಾಗಲಿದೆ. ಅಂಚೆ ಮತ ಎಣಿಕೆ ಬಳಿಕ ಇವಿಎಂ ಮತಎಣಿಕೆ ಶುರುವಾಗಲಿದೆ. ಆರ್.ಆರ್.ನಗರದಲ್ಲಿ ಒಟ್ಟು 25 ಸುತ್ತುಗಳಲ್ಲಿ ಮತಎಣಿಕೆ ನಡೆಯಲಿದೆ. ಒಟ್ಟು 678 ಮತಗಟ್ಟೆಗಳಿದ್ದು ಪ್ರತಿ ಸುತ್ತಿನಲ್ಲಿ 28 ಟೇಬಲ್ಗಳಲ್ಲಿ ಮತಎಣಿಕೆ ನಡೆಯಲಿದ್ದು, ಒಂದು ಕೊಠಡಿಯಲ್ಲಿ 7 ಎಣಿಕಾ ಟೇಬಲ್ಗಳಂತೆ ಒಟ್ಟು 4 ಕೊಠಡಿಯಲ್ಲಿ 28 ಎಣಿಕಾ ಟೇಬಲ್ ವ್ಯವಸ್ಥೆ ಮಾಡಲಾಗಿದೆ.
ಪ್ರತಿ ಟೇಬಲ್ಗೆ ಮೂವರು ಅಧಿಕಾರಿ, ಸಿಬ್ಬಂದಿಯ ನೇಮಕ ಮಾಡಲಾಗಿದೆ. ಮತಎಣಿಕೆ ಕಾರ್ಯಕ್ಕೆ 250 ಸಿಬ್ಬಂದಿ ನೇಮಕ ಮಾಡಲಾಗಿದ್ದು, ಸಿಬ್ಬಂದಿಗೆ 2 ಹಂತದ ತರಬೇತಿ ನೀಡಲಾಗಿದೆ. ಗುರುತಿನ ಚೀಟಿ ಹೊಂದಿರುವವರಿಗಷ್ಟೇ ಪ್ರವೇಶಕ್ಕೆ ಅವಕಾಶ. ಚುನಾವಣೆ ಸಿಬ್ಬಂದಿಗೆ ಮೊಬೈಲ್ ನಿಷೇಧ ಮಾಡಲಾಗಿದ್ದು, ಎಲ್ಲರಿಗೂ ಮಾಸ್ಕ್, ಸ್ಯಾನಿಟೈಸ್ ಕಡ್ಡಾಯ ಎಂದು ಚುನಾವಣಾಧಿಕಾರಿ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.
ವಿಜಯೋತ್ಸವ, ಪಟಾಕಿ ಹಚ್ಚಂಗಿಲ್ಲ:
ಮತ ಎಣಿಕೆ ಕಾರ್ಯ ಪೊಲೀಸ್ ಭದ್ರತೆಯಲ್ಲಿ ನಡೆಯಲಿದೆ. ಗೆದ್ದ ಅಭ್ಯರ್ಥಿಗಳ ಪರವಾಗಿ ಮತ ಎಣಿಕೆ ಕೇಂದ್ರದ ಬಳಿ ಸಂಭ್ರಮಾಚರಣೆಗೆ ಮತ್ತು ಪಟಾಕಿ ಸಿಡಿಸಲು ಅವಕಾಶವಿಲ್ಲ. ನಿಯಮ ಉಲ್ಲಂಘಿಸಿದವರ ವಿರುದ್ಧ ಕಾನೂನುರೀತ್ಯ ಕ್ರಮದ ಎಚ್ಚರಿಕೆ ನೀಡಲಾಗಿದೆ. ಇನ್ನು ಎಣಿಕೆ ಕೇಂದ್ರದ ಮುಂಭಾಗದಲ್ಲಿನ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಮತಎಣಿಕೆ ಕೇಂದ್ರ ಮತ್ತು ಆರ್.ಆರ್.ನಗರ ಕ್ಷೇತ್ರದಲ್ಲಿ ಪೊಲೀಸ್ ಸರ್ಪಗಾವಲು ಹಾಕಿದ್ದಾರೆ.
ಒಟ್ಟಿನಲ್ಲಿ ಹೈವೋಲ್ಟೇಜ್ ಕ್ಷೇತ್ರದ ಮತ ಎಣಿಕೆಗೆ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದೆ. ಮಧ್ಯಾಹ್ನ 1 ಗಂಟೆ ಒಳಗೆ ವಿಜಯಲಕ್ಷ್ಮಿ ಯಾರಿಗೆ ಒಲಿಯುತ್ತಾಳೆ ಎಂಬುದು ಕುತೂಹಲ ಮೂಡಿಸಿದೆ.