ಉಡುಪಿ: ನಾಡದೋಣಿ ಮೀನುಗಾರಿಕೆಗೆ ತೆರಳಿದ್ದ ಬೋಟ್ ಬಂಡೆಗೆ ಬಡಿದು ನಾಲ್ವರು ಮೀನುಗಾರರು ಕಣ್ಮರೆಯಾಗಿದ್ದು, ಕ್ರೇನ್ ಮೂಲಕ ಶೋಧ ಕಾರ್ಯ ನಡೆಸಲಾಗುತ್ತಿದೆ.
ಬೈಂದೂರು ತಾಲೂಕು ಕಿರಿಮಂಜೇಶ್ವರದ ಕೊಡೇರಿಯಲ್ಲಿ ದುರ್ಘಟನೆ ನಡೆದಿದ್ದು, ಕೊಡೇರಿ ಅಳಿವೆಬಾಗಿಲಿನಲ್ಲಿ ಕಣ್ಮರೆಯಾದ ನಾಲ್ವರಿಗೆ ಶೋಧ ಕಾರ್ಯ ನಡೆಯುತ್ತಿದೆ. 11 ಮಂದಿ ಮೀನುಗಾರರಿದ್ದ ಬೋಟ್ ಇಂದು ಬೆಳಗ್ಗೆ ಮೀನುಗಾರಿಕೆಗೆ ತೆರಳಿತ್ತು. ಇದರಲ್ಲಿ 7 ಜನ ಈಜಿ ದಡ ಸೇರಿದ್ದಾರೆ. ನಾಲ್ವರು ಕಾಣೆಯಾಗಿದ್ದಾರೆ.
Advertisement
Advertisement
ಅರಬ್ಬಿ ಸಮುದ್ರದಲ್ಲಿ ಭಾರೀ ಗಾಳಿಯ ಒತ್ತಡ ಇದ್ದಿದ್ದರಿಂದ, ನದಿಯಿಂದ ಭಾರಿ ಪ್ರಮಾಣದ ನೀರು ಸಮುದ್ರಕ್ಕೆ ಹರಿಯುತ್ತಿರುವುದರಿಂದ ಭಾರೀ ಒತ್ತಡ ನಿರ್ಮಾಣವಾಗಿತ್ತು. ಮೀನುಗಾರಿಕೆ ನಡೆಸಿ ಬಂದರಿಗೆ ವಾಪಸ್ಸಾಗುವ ಸಂದರ್ಭ ಸಾಗರಶ್ರೀ ಬೋಟ್ ಬಂಡೆಗೆ ಡಿಕ್ಕಿ ಹೊಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.
Advertisement
ಕುಂದಾಪುರ ತಾಲೂಕಿನ ಗಂಗೊಳ್ಳಿ ಕರಾವಳಿ ಕಾವಲುಪಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕರಾವಳಿ ಕಾವಲು ಪಡೆ ಪೊಲೀಸರು, ಸ್ಥಳೀಯ ಮೀನುಗಾರರಿಗಾಗಿ ಶೋಧ ನಡೆಸುತ್ತಿದ್ದಾರೆ. ಈಜಿ ಬಚಾವಾದ ಏಳು ಜನರಿಗೆ ಚಿಕಿತ್ಸೆ ಕೊಡಲಾಗಿದೆ.
Advertisement
ಸ್ಥಳಕ್ಕೆ ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿದ್ದು, ಸ್ಥಳದಲ್ಲಿದ್ದ ಮೀನುಗಾರರಿಂದ ಘಟನೆಯ ಮಾಹಿತಿ ಪಡೆದರು. ನಂತರ ಮಾಧ್ಯಮಗಳಿಗೆ ಮಾತನಾಡಿದ ಅವರು, ಮಧ್ಯಾಹ್ನದ ವೇಳೆಗೆ ಈ ಅವಘಡ ಸಂಭವಿಸಿದ್ದು, ಅಳಿವೆ ಬಾಗಿಲಿನ ಉದ್ದ ಕಿರಿದಾಗಿರುವುದರಿಂದ ಅಲೆಗಳ ಹೊಡೆತ ವಿಪರೀತ ಇದೆ. ಮುಂದಿನ ದಿನಗಳಲ್ಲಿ ಅಳಿವೆ ಬಾಗಿಲಿನ ಉದ್ದವನ್ನು ವಿಸ್ತರಣೆ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸುತ್ತೇನೆ. ಸಂಸದ ಬಿ.ವೈ.ರಾಘವೇಂದ್ರ ಅವರ ಜೊತೆ ಮಾತನಾಡಿ ಕಾಮಗಾರಿ ಮುಂದುವರಿಸುವಂತೆ ಪ್ರಯತ್ನಿಸುತ್ತೇನೆ ಎಂದರು.
ಬೈಂದೂರು ಸರ್ಕಲ್ ಇನ್ಸ್ ಪೆಕ್ಟರ್ ಸುರೇಶ್ ನಾಯಕ್ ಸ್ಥಳಕ್ಕೆ ಭೇಟಿ ನೀಡಿ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿದ್ದಾರೆ. ನಾಡದೋಣಿ ಬೋಟುಗಳು ಒಂದರ ಹಿಂದೆ ಒಂದು ಬರುತ್ತಿತ್ತು. ಈ ಸಂದರ್ಭ ಗಾಳಿಯ ಹೊಡೆತಕ್ಕೆ ಸಿಕ್ಕಿ ಸಾಗರ ಶ್ರೀ ದೋಣಿಯ ಹಿಂಬದಿಗೆ ಡಿಕ್ಕಿ ಹೊಡೆದಿದೆ. ನಾಲ್ವರು ಮೀನುಗಾರರು ಬಲೆಯ ಜೊತೆಗೆ ಸಮುದ್ರಕ್ಕೆ ಬಿದ್ದಿರುವುದರಿಂದ ಬಲೆ ಮೀನುಗಾರರನ್ನು ಸುತ್ತಿಕೊಂಡಿರುವ ಸಾಧ್ಯತೆ ಇದೆ. ಕ್ರೇನ್ ಬಳಸಿ ಕಣ್ಮರೆಯಾದ ಮೀನುಗಾರರನ್ನು ಹುಡುಕುವ ಕಾರ್ಯಚರಣೆ ನಡೆಸುತ್ತಿದ್ದೇವೆ ಎಂದರು.