– ರಕ್ಷಣಾ ಇಲಾಖೆ ಸ್ವಾಧೀನದ 750 ಎಕರೆ ಭೂಮಿ ಹಸ್ತಾಂತರಕ್ಕೆ ಮನವಿ
ನವದೆಹಲಿ: ಬೆಳಗಾವಿಯಲ್ಲಿ ಮಾಹಿತಿ ತಂತ್ರಜ್ಞಾನ ಪಾರ್ಕ್ ನಿರ್ಮಿಸಲು ರಕ್ಷಣಾ ಇಲಾಖೆ ಸ್ವಾಧೀನದಲ್ಲಿರುವ ಸುಮಾರು 750 ಎಕರೆ ಭೂಮಿಯನ್ನು ಸರ್ಕಾರಕ್ಕೆ ಬಿಟ್ಟುಕೊಡುವಂತೆ ರಾಜ್ಯದ ಐಟಿ/ಬಿಟಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರು ಕೇಂದ್ರ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಅವರನ್ನು ಕೋರಿದ್ದಾರೆ.
ರಾಜನಾಥ್ ಸಿಂಗ್ ಅವರನ್ನು ಶನಿವಾರ ನವದೆಹಲಿಯ ಅವರ ಮನೆಯಲ್ಲಿ ಭೇಟಿಯಾಗಿ ಈ ಬಗ್ಗೆ ಪ್ರಸ್ತಾಪಿಸಿದರು. ಈ ಜಾಗವನ್ನು ಕರ್ನಾಟಕ ಸರ್ಕಾರಕ್ಕೆ ಬಿಟ್ಟುಕೊಟ್ಟರೆ ಐಟಿ ಉದ್ಯಮದ ಜೊತೆಗೆ ಎಲೆಕ್ಟ್ರಾನಿಕ್ ಹಾರ್ಡ್ ವೇರ್, ವೈಮಾಂತರಿಕ್ಷ ಹಾಗೂ ಇತರ ತಯಾರಿಕಾ ಉದ್ಯಮಗಳ ಬೆಳವಣಿಗೆಗೆ ಪೂರಕವಾಗುವಂತೆ ಬಳಸಿಕೊಳ್ಳಲಾಗುವುದು ರಾಜನಾಥ್ ಅವರಿಗೆ ತಿಳಿಸಿದರು.
Advertisement
Advertisement
ದಾಖಲೆಗಳ ಪ್ರಕಾರ ಬೆಳಗಾವಿ ಗ್ರಾಮದ ಆರ್.ಎಸ್. ನಂಬರ್ 1304ರಿಂದ 1397ರವರೆಗಿನ ಜಾಗಗಳಲ್ಲಿರುವ ಈ ಭೂಮಿಯು ರಾಷ್ಟ್ರೀಯ ಹೆದ್ದಾರಿ 4ಕ್ಕೆ ಹೊಂದಿಕೊಂಡಂತೆ ಇದೆ. ಹೀಗಾಗಿ ಉದ್ದೇಶಿತ ಐ.ಟಿ.ಪಾರ್ಕ್ ಸ್ಥಾಪನೆಗೆ ಅನುಕೂಲಕರವಾಗಿದೆ. ಈ ಭೂಮಿಯನ್ನು ರಾಜ್ಯ ಸರ್ಕಾರ ಪುನರ್ ಸ್ವಾಧೀನಕ್ಕೆ ತೆಗೆದುಕೊಳ್ಳಲು 2012ರ ನವೆಂಬರ್ ನಲ್ಲೇ ಆದೇಶ ಹೊರಡಿಸಿದೆ. ಆದರೆ ಇದು ರಕ್ಷಣಾ ಇಲಾಖೆ ಸ್ವಾಧೀನದಲ್ಲೇ ಮುಂದುವರಿದಿದೆ ಎಂಬ ಅಂಶವನ್ನು ಅಶ್ವತ್ಥ ನಾರಾಯಣ ಅವರು ಮನವರಿಕೆ ಮಾಡಿಕೊಟ್ಟರು.
Advertisement
Advertisement
ಕರ್ನಾಟಕ ರಾಜ್ಯವು ಐ.ಟಿ./ಐಟಿಇಎಸ್ ಉದ್ಯಮದಲ್ಲಿ ದೇಶದಲ್ಲಿಯೇ ಮುಂಚೂಣಿಯಲ್ಲಿದೆ. ಈ ಅಗ್ರಶ್ರೇಯಾಂಕ ಕಾಯ್ದುಕೊಳ್ಳುವ ದಿಸೆಯಲ್ಲಿ ಇತ್ತೀಚೆಗೆ ಹೊಸ ಮಾಹಿತಿ ತಂತ್ರಜ್ಞಾನ ಕಾರ್ಯನೀತಿ ಪ್ರಕಟಿಸಲಾಗಿದೆ. ಜೊತೆಗೆ, ಬೆಂಗಳೂರಿಗೆ ಹೊರತಾದ ಬೇರೆ ಪ್ರದೇಶಗಳಲ್ಲೂ ಐಟಿ/ಐಟಿಇಎಸ್ ಹಾಗೂ ಎಲೆಕ್ಟ್ರಾನಿಕ್ ಉದ್ಯಮಗಳನ್ನು ಬೆಳೆಸಿ, ರಾಜ್ಯದಲ್ಲಿ ಸಮತೋಲನದ ಅಭಿವೃದ್ಧಿ ಸಾಧಿಸುವ ಉದ್ದೇಶದಿಂದ ‘ಬಿಯಾಂಡ್ ಬೆಂಗಳೂರು’ ಯೋಜನೆ ಜಾರಿಗೊಳಿಸಿದೆ. ಹೀಗಾಗಿ, ಈ ಜಾಗ ಬಿಟ್ಟುಕೊಟ್ಟರೆ ಉದ್ಯಮದ ಬೆಳವಣಿಗೆಗೆ ಅನುವು ಮಾಡಿಕೊಟ್ಟಂತೆ ಆಗುತ್ತದೆ ಎಂದರು.
ಬೆಳಗಾವಿಯು ಉತ್ತಮ ಶೈಕ್ಷಣಿಕ ವಲಯವಾಗಿದೆ. ಪಕ್ಕದ ಧಾರವಾಡದಲ್ಲಿ ಐಐಟಿ-ಧಾರವಾಡ, ಐಐಐಟಿ-ಧಾರವಾಡ, ಕೆ.ಎಲ್.ಇ.ಯಂತಹ ಉನ್ನತ ಶಿಕ್ಷಣ ಸಂಸ್ಥೆಗಳು ಇರುವುದರಿಂದ ಪ್ರತಿವರ್ಷ ಪ್ರತಿಭಾವಂತ ಪದವೀಧರರು ಹೊರಬರುತ್ತಿದ್ದಾರೆ. ಜೊತೆಗೆ ಇಲ್ಲಿ ಐಟಿ/ಐಟಿಇಎಸ್ ಉದ್ಯಮಕ್ಕೆ ಸೂಕ್ತವಾದ ಪರ್ಯಾವರಣವಿದೆ. ಬೆಳಗಾವಿಯಲ್ಲಿ ಐ.ಟಿ.ಪಾರ್ಕ್ ನಿರ್ಮಾಣದಿಂದ ಈ ಕ್ಷೇತ್ರದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ 60 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಇದೆ. ಈ ಐಟಿ ಪಾರ್ಕ್ ನಿರ್ಮಾಣವು ಭಾರತದ ಟ್ರಿಲಿಯನ್ ಡಾಲರ್ ಡಿಜಿಟಲ್ ಆರ್ಥಿಕತೆ ಗುರಿಯಲ್ಲಿ ಕರ್ನಾಟಕದ ಶೇ 30ರಷ್ಟು ಕೊಡುಗೆಗೆ ಪೂರಕವಾಗಿರಲಿದೆ ಎಂದು ಅಶ್ವತ್ಥ ನಾರಾಯಣ ಮನವರಿಕೆ ಮಾಡಿಕೊಟ್ಟರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಅವರೂ ಡಿಸಿಎಂ ಜತೆ ಸಿಂಗ್ ಅವರನ್ನು ಭೇಟಿ ಮಾಡಿದರು.