ಮಡಿಕೇರಿ: ಜಿಲ್ಲೆಯ ಮದೆನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರ್ತೋಜಿಯಲ್ಲಿ ಭೂಮಿ ಬಾಯ್ದೆರೆದಿದ್ದು, ಕುಸಿಯುವ ಆತಂಕ ಗ್ರಾಮಸ್ಥರಿಗೆ ಎದುರಾಗಿದೆ. ಸರ್ಕಾರ ಮಾಡಿದ ಎಡವಟ್ಟು ಇದಕ್ಕೆ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
Advertisement
2018ರಲ್ಲಿ ಜಿಲ್ಲೆಯ 37 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಭೂಕುಸಿತ ಸಂಭವಿಸಿತ್ತು. ಈ ವೇಳೆ ಮಡಿಕೇರಿಯಿಂದ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 275 ಕ್ಕೆ ಹೊಂದಿಕೊಂಡಂತೆ ಇರುವ ಮದೆನಾಡು ಗ್ರಾಮದಲ್ಲೂ ಭಾರೀ ಭೂಕುಸಿತವಾಗಿತ್ತು. ಜೊತೆಗೆ ರಾಷ್ಟ್ರೀಯ ಹೆದ್ದಾರಿ ಹಲವೆಡೆ ಕುಸಿದಿತ್ತು. ಕುಸಿದಿದ್ದ ಹೆದ್ದಾರಿಗೆ ತಡೆಗೋಡೆ ನಿರ್ಮಿಸುವುದಕ್ಕೆ ಕರ್ತೋಜಿ ಗ್ರಾಮದ ಬೆಟ್ಟದ ತಪ್ಪಲಿನಲ್ಲಿ ಖಾಸಗಿ ವ್ಯಕ್ತಿಯೊಬ್ಬರ ಭೂಮಿಯಿಂದ ಸಾವಿರಾರು ಲೋಡ್ ಮಣ್ಣನ್ನು ಅಗೆದು ತೆಗೆಯಲಾಗಿದೆ. ಪರಿಣಾಮ ಕರ್ತೋಜಿ ಗ್ರಾಮದ ಬೆಟ್ಟ ಮೂರು ಭಾಗವಾಗಿ ಬಾಯ್ದೆರೆದಿದೆ. ಇದು ಗ್ರಾಮದ ಹತ್ತಾರು ಕುಟುಂಬಗಳನ್ನು ಆತಂಕಕ್ಕೆ ದೂಡಿದೆ. ಬೆಟ್ಟದ ಮೇಲೆ ಗ್ರಾಮವಿದ್ದು, ಗ್ರಾಮದ ಹಲವು ಮನೆಗಳ ಗೋಡೆಗಳು ಕೂಡ ಭಾರೀ ಬಿರುಕು ಬಿಟ್ಟಿವೆ.
Advertisement
Advertisement
ಈ ಬೆಟ್ಟದ ಮೇಲೆ ಒಂದೊಂದು ಬಿರುಕು ಕೂಡ ಜನರು ಇಳಿದು ಓಡಾಡುವಷ್ಟು ಭೂಮಿ ಬಾಯಿ ತೆರೆದಿದೆ. ಬೆಟ್ಟದ ಮೇಲೆ ಬಿರುಕು ಬಿಟ್ಟಿರುವ ಮನೆಗಳನ್ನು ಖಾಲಿ ಮಾಡುವಂತೆ ಪಂಚಾಯಿತಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಆದರೆ ರಾಷ್ಟ್ರೀಯ ಹೆದ್ದಾರಿಗೆ ತಡೆಗೋಡೆ ನಿರ್ಮಿಸಲು ಮಣ್ಣು ತೆಗೆದಿದ್ದರಿಂದ ಕಷ್ಟಪಟ್ಟು ಕಟ್ಟಿಕೊಂಡ ಮನೆಗಳು ಕುಸಿಯುವ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಮಣ್ಣು ತೆಗೆದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಮನೆ ಖಾಲಿ ಮಾಡುವಂತೆ ನೋಟಿಸ್ ಕೊಟ್ಟರೂ ನಾವು ಇಲ್ಲಿಂದ ಎಲ್ಲೂ ಹೋಗಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.
Advertisement
ಈ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಕೆ.ಜಿ.ಬೋಪಯ್ಯ, ಹೆದ್ದಾರಿ ತಡೆಗೋಡೆಗಾಗಿ ಇಲ್ಲಿ ಮಣ್ಣು ತೆಗೆದಿದ್ದು ಸರಿಯಲ್ಲ. ಆದರೆ ಕುಸಿಯುವ ಸ್ಥಿತಿ ನಿರ್ಮಾಣವಾಗಿದ್ದರೆ ಜನರು ಅನಿವಾರ್ಯವಾಗಿ ಅಲ್ಲಿಂದ ಸ್ಥಳಾಂತರ ಆಗಲೇಬೇಕು. ನಾನು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇನೆ ಎಂದಿದ್ದಾರೆ.