– ಇಂದು 11 ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ನೆಚ್ಚರಿಕೆ
ಬೆಂಗಳೂರು: ಮಂಗಳವಾರ ಸಂಜೆಯಿಂದ ಸಿಲಿಕಾನ್ ಸಿಟಿಯಲ್ಲಿ ಧಾರಾಕಾರವಾಗಿ ವರುಣನ ಅಬ್ಬರ ಆರಂಭವಾಗಿದ್ದು, ರಾತ್ರಿಯಿಡೀ ಭಾರೀ ಮಳೆಯಾಗಿದೆ. ಪರಿಣಾಮ ನಗರದ ಜನ ಜೀವನ ಅಸ್ತವ್ಯಸ್ತವಾಗಿದೆ.
Advertisement
ಭಾರೀ ಮಳೆಗೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಇನ್ನೂ ರಸ್ತೆಗಳು ನದಿಯಂತಾಗಿದ್ದು, ಓಕಳೀಪುರಂ, ಸುಧಾಮನಗರದಲ್ಲಿ ಮನೆಗಳು ಜಲಾವೃತವಾಗಿದೆ. ಮನೆಗಳಿಗೆ ಮಳೆ ನೀರು ನುಗ್ಗಿದ ಪರಿಣಾಮ ಜನರು ರಾತ್ರಿ ಇಡೀ ಪರದಾಡಿದ್ದಾರೆ. ಅಂಡರ್ ಪಾಸ್ನಲ್ಲಿ ನೀರು ತುಂಬಿಕೊಂಡಿದೆ. ಹೀಗಾಗಿ ಅಂಡರ್ ಪಾಸ್ನಲ್ಲಿ ನೀರು ನಿಂತು ವಾಹನ ಸವಾರರು ಪರದಾಡಿದ್ದಾರೆ.
Advertisement
Advertisement
ಶಿವಾನಂದ ಸರ್ಕಲ್ ಅಂಡರ್ ಪಾಸ್ನಲ್ಲಂತೂ ಮಳೆಯಿಂದ 2 ಅಡಿಯಷ್ಟು ನೀರು ನಿಂತಿತ್ತು. ಇಲ್ಲಿ ಕಾರೊಂದು ಸಿಲುಕಿ ಪರದಾಡಿತ್ತು. ಇತ್ತ ಸುಧಾಮನಗರ ಅಕ್ಷರಶಃ ಮಳೆಗೆ ತತ್ತರಿಸಿ ಹೋಗಿದೆ. ಇಲ್ಲಿನ ತಗ್ಗುಪ್ರದೇಶದ ಮನೆಗಳಿಗೆ ನೀರು ನುಗ್ಗಿ ಜನ ರಾತ್ರಿಯಿಡೀ ಜಾಗರಣೆ ಮಾಡಬೇಕಾಯಿತು. ರಾತ್ರಿಯೆಲ್ಲಾ ಜನ ಮನೆಯಿಂದ ನೀರು ಹೊರಹಾಕುತ್ತಿದ್ದರು. ಮನೆಗೆ ನೀರು ನುಗ್ಗಿದ್ದರಿಂದ ವಸ್ತುಗಳೆಲ್ಲಾ ಹಾಳಾಗಿದೆ.
Advertisement
ರಾಜ್ಯದಲ್ಲಿ ಮಳೆಯ ಆರ್ಭಟ ಮುಂದುವರಿಯಲಿದೆ ಅಂತ ಹವಾಮಾನ ಇಲಾಖೆ ಎಚ್ಚರಿಸಿದೆ. ಇಂದು 11 ಜಿಲ್ಲೆಗಳಲ್ಲಿ ಇನ್ನೂ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇರುವುದರಿಂದ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೋಲಾರ, ಮಂಡ್ಯ, ಮೈಸೂರು, ರಾಮನಗರ ಹಾಗೂ ತುಮಕೂರಿನಲ್ಲಿ ಇಂದು ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ.