– ದೊಡ್ಡಬಳ್ಳಾಪುರದ ಮೇಕ್ಶಿಫ್ಟ್ ಆಸ್ಪತ್ರೆ ಕಾಮಗಾರಿ ಪರಿಶೀಲನೆ
ಬೆಂಗಳೂರು: ಪೌರಾಡಳಿತ ಇಲಾಖೆ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶನಾಲಯ ಸಚಿವ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಎಂಟಿಬಿ ನಾಗರಾಜು ಅವರು ಇಂದು ದೊಡ್ಡಬಳ್ಳಾಪುರ ತಾಲೂಕಿನಲ್ಲಿ ನಿರ್ಮಾಣ ಹಂತದಲ್ಲಿರುವ ಮೇಕ್ಶಿಫ್ಟ್ ಆಸ್ಪತ್ರೆಯ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು.
ಇತ್ತೀಚೆಗಷ್ಟೇ ಸಚಿವ ಎಂಟಿಬಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಹೊಣೆ ಸಿಕ್ಕಿದೆ. ಬಹಳ ಕಸರತ್ತು ನಡೆಸಿ ಬಯಸಿದ ಜಿಲ್ಲೆಗೆ ಉಸ್ತುವಾರಿ ಹೊಣೆ ಹೊತ್ತ ಬಳಿಕ ಸಚಿವರು ತಮ್ಮ ಓಡಾಟ ಚುರುಕುಗೊಳಿಸಿದ್ದಾರೆ. ಗ್ರಾಮಾಂತರ ಬೆಂಗಳೂರು ಜಿಲ್ಲೆಯಲ್ಲಿ ಹಲವು ಕಾಮಗಾರಿ, ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ಕೊಡಲಾರಂಭಿಸಿದ್ದಾರೆ. ಅದರಲ್ಲೂ ಹೊಸಕೋಟೆ ಕ್ಷೇತ್ರದಲ್ಲಿ ಸೋತ ಬಳಿಕ ಕ್ಷೇತ್ರದ ಮೇಲೆ ಹಿಡಿತ ಕಳೆದುಕೊಳ್ಳುವ ಆತಂಕದಲ್ಲಿ ಎಂಟಿಬಿ ಇದ್ರು. ಇದೀಗ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಿಕ್ಕ ಬಳಿಕ ಕ್ಷೇತ್ರವೂ ಸೇತಿದಂತೆ ಇಡೀ ಜಿಲ್ಲೆ ಪೂರ್ಣ ಓಡಾಡುವ ಮೂಲಕ ಹಳೆಯ ಇಮೇಜ್ ಪಡೆಯಲು ಕಸರತ್ತು ನಡೆಸುತ್ತಿದ್ದಾರೆ. ಹೊಸಕೋಟೆ ಕ್ಷೇತ್ರದಲ್ಲಿ ಮುಂದಿನ ಬಾರಿ ಶತಾಯಗತಾಯ ಗೆಲ್ಲಲು ಎಂಟಿಬಿ ಈಗಿಂದಲೇ ತಾಲೀಮು ಆರಂಭಿಸಿದ್ದಾರೆ.
ದೊಡ್ಡಬಳ್ಳಾಪುರ ಶಾಸಕ ಟಿ.ವೆಂಕಟರಮಣಯ್ಯ, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಆರ್.ರವಿಕುಮಾರ್, ಜಿಲ್ಲಾ ಪೊಲೀಸ್ ಅಧೀಕ್ಷಕ ಕೋನಾ ವಂಶಿ ಕೃಷ್ಣ, ಅಪರ ಜಿಲ್ಲಾಧಿಕಾರಿ ಡಾ.ಜಗದೀಶ.ಕೆ.ನಾಯಕ, ಉಪ ವಿಭಾಗಾಧಿಕಾರಿ ಅರುಳ್ಕುಮಾರ್, ತಹಶೀಲ್ದಾರ್ ಶಿವರಾಜ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಇದನ್ನೂ ಓದಿ: ಉಸ್ತುವಾರಿ ಆಯ್ತು, ಖಾತೆ ಬದಲಾವಣೆಗೆ ಪಟ್ಟು ಹಿಡಿದ ಎಂಟಿಬಿ ನಾಗರಾಜ್