– ಡೆತ್ ಆಡಿಟ್ಗೆ ತೀವ್ರಗೊಂಡ ಒತ್ತಾಯ
ಬೆಂಗಳೂರು: ಅದು ಏಪ್ರಿಲ್ 30. ಬೆಳಗಾವಿಯಲ್ಲಿ ನಿತ್ಯ 18ರಿಂದ 20 ಮಂದಿ ಕೊರೊನಾಗೆ ಬಲಿ ಆಗ್ತಿದ್ರೂ ಹೆಲ್ತ್ ಬುಲೆಟಿನ್ನಲ್ಲಿ ಒಂದು-ಎರಡು ಸಾವು ಎಂದು ತೋರಿಸಲಾಗಿತ್ತು. ಅವತ್ತು ಸಹ ಪಬ್ಲಿಕ್ ಟಿವಿ ಸಾವಿನ ಸುಳ್ಳು ಲೆಕ್ಕದ ಬಗ್ಗೆ ವರದಿ ಮಾಡಿತ್ತು. ಇದೀಗ ಸಾವಿನ ಲೆಕ್ಕಗಳು ಅನುಮಾನಕ್ಕೆ ಎಡೆ ಮಾಡಿಕೊಡುತ್ತಿವೆ.
Advertisement
ಬಿಹಾರದಲ್ಲಿ ಡೆತ್ ಅಡಿಟ್ ನಡೆದ ಮೇಲೆ ಸಾವಿನ ಸಂಖ್ಯೆ ಸ್ಫೋಟವಾಗಿದೆ. ಹೀಗಾಗಿ ಕರ್ನಾಟಕದಲ್ಲೂ ಕೂಡ ಡೆತ್ ಅಡಿಟ್ ನಡೆದ್ರೆ, ನಿಖರ ಸಾವಿನ ಸಂಖ್ಯೆ ತಿಳಿಯಬಹುದು ಅನ್ನೋ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಪೂರಕವಾಗಿ ಪ್ರತಿನಿತ್ಯ ಆರೋಗ್ಯ ಇಲಾಖೆ ನೀಡುತ್ತಿರುವ ಸಾವಿನ ಸಂಖ್ಯೆಯಲ್ಲಿ ಬಹಳಷ್ಟು ಅನುಮಾನ ಕಾಡುತ್ತಿದೆ. ದಿನದ ಸಾವಿಗಿಂತ 20-30 ದಿನಗಳ ಹಿಂದಿನ ಸಾವನ್ನು ಸೇರಿಸಿ ಹೆಲ್ತ್ ಬುಲೆಟಿನ್ನಲ್ಲಿ ಕೊಡಲಾಗುತ್ತಿದೆ.
Advertisement
Advertisement
ಹಾಗಾದ್ರೆ ಇಷ್ಟು ದಿನ ಸರ್ಕಾರ ಕೊಟ್ಟ ಸಾವಿನ ಲೆಕ್ಕ ಸುಳ್ಳಾ? ಒಂದು ವೇಳೆ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳು, ಹೋಂ ಐಸೋಲೇಷನ್ನಲ್ಲಿ ಮೃತಪಟ್ಟವರ ಮಾಹಿತಿ ತಡವಾಗಿ ಲಭ್ಯವಾಯಿತೆಂದು ಪರಿಗಣಿಸಿದ್ರೂ, 20, 30 ದಿನ ತಡವಾಗಿ ಮಾಹಿತಿ ಸಿಗುತ್ತಾ? ಅನ್ನೋದು ಯಕ್ಷಪ್ರಶ್ನೆ. ಇದುವರೆಗೆ ಕೋವಿಡ್ ಸಾವುಗಳ ಬಗ್ಗೆ ಸರ್ಕಾರ ಕೊಟ್ಟ ಮಾಹಿತಿ ಎಷ್ಟು ನೈಜತೆಯಿಂದ ಕೂಡಿದೆ ಅನ್ನೋ ಅನುಮಾನ ಸಹಜವಾಗಿಯೇ ಮೂಡುತ್ತದೆ. ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಆದ ಸುಮಾರು 4,500 ಕೋವಿಡ್ ಸಾವುಗಳನ್ನು ಆಗ ಮುಚ್ಚಿಟ್ಟು, ಮೇ ಮತ್ತು ಜೂನ್ ತಿಂಗಳಲ್ಲಿ ರಾಜ್ಯ ಸರ್ಕಾರ ನೀಡುತ್ತಿದೆ ಎನ್ನಲಾಗುತ್ತಿದೆ.
Advertisement
ಸಾವಿನ ಸುಳ್ಳು ಲೆಕ್ಕ, ಸರ್ಕಾರ ಹೇಳುವ ನೆಪ: ಖಾಸಗಿ ಆಸ್ಪತ್ರೆಗಳು ಸಕಾಲಕ್ಕೆ ಲೆಕ್ಕ ನೀಡಿಲ್ಲ. ಮನೆ ಸಾವುಗಳ ಲೆಕ್ಕ ತಡವಾಗಿ ಸಿಕ್ಕಿದೆ. ಅಂಕಿ ಅಂಶ ನೀಡಲು ಜಿಲ್ಲಾಡಳಿತಗಳ ವಿಳಂಬ ಧೋರಣೆಯೇ ಕಾರಣ ಮತ್ತು ಸಿಬ್ಬಂದಿ ಕೊರತೆ ಹಿನ್ನೆಲೆ ಪೋರ್ಟಲ್ ಗೆ ಅಪ್ಲೋಡ್ ತಡವಾಗಿದೆ. ಇನ್ನು ಕೆಲವು ಕಡೆ ತಾಂತ್ರಿಕ ದೋಷ ಕಾರಣ ಎಂದು ನೆಪಗಳನ್ನು ಸರ್ಕಾರ ಹೇಳುತ್ತಿದೆ.
ಹಾಸನದಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ, ಯಾರು ಹೇಳಿದ್ದು ಕೋವಿಡ್ ಸುಳ್ಳು ಲೆಕ್ಕ ನೀಡ್ತಿದ್ದಾರೆ ಅಂತಾ? ಸುಳ್ಳು ಲೆಕ್ಕ ಕೊಡೋದ್ರಿಂದ ನಮಗೇನು ಪ್ರಯೋಜನ ಅಂತಾ ಪ್ರಶ್ನೆ ಮಾಡುತ್ತಾರೆ. ಸನ್ಮಾನ್ಯ ಆರೋಗ್ಯ ಮಂತ್ರಿಗಳಂತೂ, ನಾವು ಸಾವಿನ ಲೆಕ್ಕ ಮುಚ್ಚಿಟ್ಟಿಲ್ಲ. ಕರ್ನಾಟಕವನ್ನು ಬಿಹಾರಕ್ಕೆ ಹೋಲಿಸಿ ಮಾತಾಡೋದು ಸರಿಯಲ್ಲ ಎಂದರು. ಗೃಹ ಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಸಾವಿನ ಲೆಕ್ಕ ಕೊಡುವಲ್ಲಿ ಯಾವುದೇ ಲೋಪ ಆಗಿಲ್ಲ ಅಂತಾರೆ. ಬಿಹಾರಕ್ಕೆ ನಮ್ಮ ರಾಜ್ಯವನ್ನು ಹೋಲಿಸಬೇಡಿ ಎಂದು ಕೋರುತ್ತಾರೆ. ಆದ್ರೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತ್ರ, ರಾಜ್ಯದಲ್ಲಿ ಬಿಹಾರಕ್ಕಿಂತ ಹೆಚ್ಚು ಸಾವನ್ನು ಮುಚ್ಚಿಡಲಾಗಿದೆ. ಡೆತ್ ಆಡಿಟ್ ಆಗ್ಲೇಬೇಕು. ಸರ್ಕಾರ ಮಾಡಿಲ್ಲ ಅಂದ್ರೆ ನಾವು ಮಾಡಿಸುತ್ತೇವೆ. ಸದನದಲ್ಲಿ ಲೆಕ್ಕ ಇಡುತ್ತೇವೆ ಎಂದು ಎಚ್ಚರಿಸಿದ್ದಾರೆ.