ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಅಧ್ಯಕ್ಷ ಶಶಾಂಕ್ ಮನೋಹರ್ ಅವರ ಕಾರ್ಯ ವೈಖರಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಗೆ ಬಹುದೊಡ್ಡ ತಲೆನೋವಾಗಿದೆ. ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್ 18 ರಿಂದ ನ.15ರ ವರೆಗೂ ನಡೆಯಬೇಕಿದ್ದ ಟಿ20 ವಿಶ್ವಕಪ್ ಮುಂದೂಡುವ ಕುರಿತು ಶಶಾಂಕ್ ಮನೋಹರ್ ಅವರು ಯಾವುದೇ ಅಂತಿಮ ನಿರ್ಧಾರ ಮಾಡದಿರುವುದು ಬಿಸಿಸಿಐಗೆ ಸಮಸ್ಯೆ ತಂದಿಟ್ಟಿದೆ.
ಕೊರೊನಾ ವೈರಸ್ ಕಾರಣದಿಂದ ಟಿ20 ವಿಶ್ವಕಪ್ 2020ರ ಅತಿಥ್ಯ ವಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಆಸ್ಟ್ರೇಲಿಯಾ ಕ್ರಿಕೆಟ್ (ಸಿಎ) ಹೇಳಿಕೆ ನೀಡಿದೆ. ಆದರೆ ಐಸಿಸಿ ಮಾತ್ರ ಟಿ20 ವಿಶ್ವಕಪ್ ಭವಿಷ್ಯದ ಕುರಿತು ಯಾವುದೇ ನಿರ್ಣಯ ಕೈಗೊಂಡಿಲ್ಲ. ಒಂದೊಮ್ಮೆ ವಿಶ್ವಕಪ್ ಮುಂದೂಡಿದರೆ ಅಕ್ಟೋಬರ್, ನವೆಂಬರ್ ಅವಧಿಯಲ್ಲಿ ಐಪಿಎಲ್ 2020 ಆವೃತ್ತಿ ಆಯೋಜಿಸಲು ಬಿಸಿಸಿಐ ಸಿದ್ಧವಾಗಿದೆ.
Advertisement
Advertisement
ಕಳೆದ 4 ವರ್ಷಗಳ ಹಿಂದೆ ಬಿಸಿಸಿಐ ನೆರವಿನೊಂದಿಗೆ ಐಸಿಸಿ ಅಧ್ಯಕ್ಷರಾಗಿ ಶಶಾಂಕ್ ಮನೋಹರ್ ಆಯ್ಕೆ ಆಗಿದ್ದರು. ಆದರೆ ಆ ಬಳಿಕ ಬಿಸಿಸಿಐಗೆ ಆರ್ಥಿಕ ಹೊಡೆತ ನೀಡಿದ್ದರು. ಸದ್ಯ ಐಪಿಎಲ್ 2020ರ ಆವೃತ್ತಿ ಮೇಲೆ ಆತಂಕ ಸೃಷ್ಟಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಜೂ.10 ರಂದೇ ಐಸಿಸಿ ಸಭೆಯಲ್ಲಿ ಟಿ20 ವಿಶ್ವಕಪ್ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಐಸಿಸಿ ಈ ಹಿಂದೆ ಹೇಳಿತ್ತು. ಆದರೆ ಯಾರು ಊಹೆ ಮಾಡದಂತೆ ಜುಲೈನಲ್ಲಿ ಈ ಕುರಿತು ನಿರ್ಧಾರ ಮಾಡಲಾಗುವುದು ಎಂದು ಮುಂದೂಡಲಾಗಿತ್ತು. ಪರಿಣಾಮ ಐಪಿಎಲ್ ಕುರಿತು ಬಿಸಿಸಿಐ ಯಾವುದೇ ಅಂತಿಮ ನಿರ್ಧಾರ ಕೈಗೊಳ್ಳಲು ಸಮಸ್ಯೆಯಾಗಿದೆ.
Advertisement
Advertisement
ಶಶಾಂಕ್ ಅವರ ಐಸಿಸಿ ಅಧ್ಯಕ್ಷ ಸ್ಥಾನದ ಅವಧಿ ಶೀಘ್ರವೇ ಅಂತ್ಯವಾಗಲಿದೆ. ಆದರೆ ಅಂತಿಮ ಅವಧಿಯಲ್ಲಿ ಏಕೆ ಈ ರೀತಿ ಗೊಂದಲ ಮೂಡಿಸುತ್ತಿದ್ದಾರೆ ಎಂದು ತಿಳಿಯುತ್ತಿಲ್ಲ. ಟಿ20 ವಿಶ್ವಕಪ್ ನಿರ್ವಹಿಸಲು ಆಸ್ಟ್ರೇಲಿಯಾ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಆದರೆ ಟೂರ್ನಿಯನ್ನು ಮುಂದೂಡಲು 1 ತಿಂಗಳ ಅವಧಿ ತೆಗೆದುಕೊಳ್ಳುವ ಅಗತ್ಯವೇನಿದೆ? ಉದ್ದೇಶ ಪೂರ್ವಕವಾಗಿಯೇ ಬಿಸಿಸಿಐಗೆ ಸಮಸ್ಯೆ ಸೃಷ್ಟಿಸಲು ಯತ್ನಿಸುತ್ತಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ. 2020ರ ಐಪಿಎಲ್ ಟೂರ್ನಿ ರದ್ದಾದರೆ ಬಿಸಿಸಿಐ ಸರಿ ಸುಮಾರು 4 ಸಾವಿರ ಕೋಟಿ ರೂ. ನಷ್ಟ ಎದುರಾಗಲಿದೆ.