ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಬಂದಿರುವ ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್ ಅವರ ಜೊತೆ ಸಂಪರ್ಕದಲ್ಲಿದ್ದ ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಆನಂದ್ ಹಾಗೂ ನಗರಸಭೆ ಮಾಜಿ ಸದಸ್ಯ, ಬಿಜೆಪಿ ಮುಖಂಡ ಎಚ್.ಡಿ.ತಮ್ಮಯ್ಯ ಅವರಿಗೂ ಕೊರೊನಾ ಪಾಸಿಟಿವ್ ಇರುವುದು ದೃಢವಾಗಿದೆ.
ತಮ್ಮಯ್ಯ ಅವರ ಪತ್ನಿಗೂ ಪಾಸಿಟಿವ್ ದೃಢವಾಗಿದೆ. ಈಗಾಗಲೇ ಮೂವರನ್ನು ಜಿಲ್ಲೆಯ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವರಿಸಲಾಗಿದೆ. ವಿಧಾನ ಪರಿಷತ್ ಸದಸ್ಯ ಪ್ರಾಣೇಶ್ ಸಂಪರ್ಕಿತ ಅಧ್ಯಕ್ಷ ಆನಂದ್ ಹಾಗೂ ನಗರಸಭೆ ಮಾಜಿ ಸದಸ್ಯ ತಮ್ಮಯ್ಯ ಅವರಲ್ಲಿ ಪಾಸಿಟಿವ್ ಪತ್ತೆಯಾಗಿರುವುದರಿಂದ ಇನ್ನುಳಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರಿಗೂ ಕೊರೊನಾ ಆತಂಕ ಎದುರಾಗಿದೆ.
Advertisement
Advertisement
ಇದೀಗ ಜಿಲ್ಲಾ ಬಿಜೆಪಿ ವಲಯದಲ್ಲಿ ತೀವ್ರ ಆತಂಕ ಎದುರಾಗಿದ್ದು, ಮೂಡಿಗೆರೆ ತಾಲೂಕಿನ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ಕೊರೊನಾ ಪರೀಕ್ಷೆಗೆ ಮುಂದಾಗಿದ್ದಾರೆ. ಸಾಲದಕ್ಕೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಆನಂದ್ ಹಾಗೂ ನಗರಸಭೆ ಸದಸ್ಯ ತಮ್ಮಯ್ಯ ಸಂಪರ್ಕದಲ್ಲಿದ್ದ ಜನಸಾಮಾನ್ಯರು ತೀವ್ರ ಆತಂಕಕ್ಕೀಡಾಗಿದ್ದಾರೆ. ಅಷ್ಟೇ ಅಲ್ಲದೇ ಇವರಿಬ್ಬರು ಸಚಿವ ಸಿಟಿ ರವಿ ಅವರ ಜೊತೆ ಸಂಪರ್ಕದಲ್ಲಿದ್ದ ಹಿನ್ನೆಲೆ ಅವರು ಕೂಡ ಕ್ವಾರಂಟೈನ್ಗೆ ಒಳಗಾಗುವ ಸಾಧ್ಯತೆ ಇದೆ.
Advertisement
Advertisement
ಈಗಾಗಲೇ ನಗರಸಭೆ ಮಾಜಿ ಸದಸ್ಯ ತಮ್ಮಯ್ಯ ಅವರ ಏರಿಯಾವನ್ನು ಸೀಲ್ಡೌನ್ ಮಾಡಲಾಗಿದೆ. ಜೊತೆಗೆ ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರವನ್ನು ಕೂಡ ಅಧಿಕಾರಿಗಳು ಸೀಲ್ಡೌನ್ ಮಾಡಿದ್ದಾರೆ. ಇಷ್ಟು ದಿನಗಳ ಕಾಲ ಜನಸಾಮಾನ್ಯರಲ್ಲಿ ಮಾತ್ರ ಕೊರೊನಾ ಪತ್ತೆಯಾಗುತ್ತಿತ್ತು. ಇದೀಗ ರಾಜಕಾರಣಿಗಳಲ್ಲೂ ಕೊರೊನಾ ಪತ್ತೆಯಾಗಿರುವುದರಿಂದ ಜನಸಾಮಾನ್ಯರು ಭಯಭೀತರಾಗಿದ್ದಾರೆ.