ಬಾಗಲಕೋಟೆ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ಗುಡುಗಿದ್ದಾರೆ.
ಕೂಡಲಸಂಗಮದಲ್ಲಿ ಮಾತನಾಡಿದ ಅವರು, ಅಸಮಾಧಾನಿತರ ವಿರುದ್ಧ ಗರಂ ಆಗೋಕೆ ರಮೇಶ್ ಜಾರಕಿಹೊಳಿ ಯಾರು? ಅವರು ತಮ್ಮ ತ್ಯಾಗ ಮಾಡಿದ್ದಕ್ಕೆ ಪಕ್ಷ ಅಧಿಕಾರಕ್ಕೆ ಬಂದಿದೆ, ಅದನ್ನು ಸ್ವಾಗತಿಸುತ್ತೇನೆ. ಆದರೆ ಯಾವ ಶಾಸಕರೂ ಮಾತನಾಡಬಾರದೆಂದು ಅವರ ಬಾಯಿಗೆ ಕೀಲಿ ಹಾಕೋಕೆ ಸಾಧ್ಯವಿಲ್ಲ ಎಂದು ತಿಳಿಸಿದರು.
Advertisement
Advertisement
ಸಚಿವ ಸ್ಥಾನಕ್ಕೆ ಬ್ಲಾಕ್ ಮೇಲ್ ಮಾಡಿದ್ದಾರೆಂದು ನಾನೊಬ್ಬನೇ ಆರೋಪ ಮಾಡಿಲ್ಲ. ಎಲ್ಲ ಬಿಜೆಪಿ ಮುಖಂಡರು ಆರೋಪ ಮಾಡುತ್ತಿದ್ದಾರೆ. ಕುಟುಂಬ ರಾಜಕಾರಣ ಅಂತ್ಯ ಮಾಡಬೇಕೆಂದು ಪ್ರಧಾನಿ ಮೋದಿ ಪರದಾಡುತ್ತಿದ್ದಾರೆ. ಆದರೆ ಬಿಜೆಪಿಯಲ್ಲಿ ಸಿಎಂ ಬಿಎಸ್ವೈ ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ. ಅವರ ಮಗ ಸಂಸದ, ಇನ್ನೂಬ್ಬ ಮಗ ಪಕ್ಷದ ಉಪಾಧ್ಯಕ್ಷ, ಮಗಳು ಸಂಘಟನಾ ಅಧ್ಯಕ್ಷೆ, ಮೊಮ್ಮಗನನ್ನು ಕಾರ್ಯದರ್ಶಿ ಮಾಡಿದ್ದಾರೆ. ಆಳಿಯನನ್ನು ನಿಗಮದ ಅಧ್ಯಕ್ಷ ಮಾಡಿದ್ದಾರೆ. ದೇಶದಲ್ಲಿ ಕುಟುಂಬ ರಾಜಕಾರಣ ಮಾಡಿದವರು ಅಂತ್ಯವಾಗಿದ್ದಾರೆ. ಅದೇ ರೀತಿ ನಿಮ್ಮ ಕುಟುಂಬವೂ ಅಂತ್ಯವಾಗ ಬಾರದೆಂದರೆ ನೀವು ಒಬ್ಬರೇ ಹುದ್ದೆಯಲ್ಲಿರಿ. ಇಡೀ ಕಾವೇರಿ ನಿವಾಸವೇ ಬಿಎಸ್ವೈ ಕುಟುಂಬದಿಂದ ತುಂಬಿದೆ ಎಂದು ಆರೋಪಿಸಿದ್ದಾರೆ.
Advertisement
Advertisement
ಬಿಜೆಪಿಯನ್ನು ಯಡಿಯೂರಪ್ಪ ಮಾತ್ರ ಕಟ್ಟಿಲ್ಲ. ನಾವು ಯಡಿಯೂರಪ್ಪ ಕಾರಿಗೆ ಡಿಸೇಲ್ ಹಾಕಿಸಿ ಪಕ್ಷವನ್ನ ಕಟ್ಟಿದ್ದೇವೆ. ನಾವು ಬಿಎಸ್ವೈ ಕುಟುಂಬಕ್ಕಾಗಿ ಪಕ್ಷವನ್ನ ಕಟ್ಟಿಲ್ಲ. ಸಮುದಾಯದ ಸಲುವಾಗಿ, ರೈತರ ಸಲುವಾಗಿ, ದೀನ ದಲಿತರ ಸಲುವಾಗಿ ಪಕ್ಷವನ್ನು ಕಟ್ಟಿದ್ದೇವೆ. ಯಡಿಯೂರಪ್ಪ ಅವರು ಸಿಎಂ ಆಗಿ ಇರಲು ನಮ್ಮ ಅಭ್ಯಂತರವಿಲ್ಲ. ಆದರೆ ಅವರ ಇಡೀ ಕುಟುಂಬವೇ ಹುದ್ದೆಯಲ್ಲಿರುವುದು ನಮಗೆ ಒಪ್ಪಿಗೆ ಇಲ್ಲ ಎಂದರು.
ಅಮಿತ್ ಶಾ ರಾಜ್ಯಕ್ಕೆ ಆಗಮಿಸಿದಾಗ ಅಸಮಾಧಾನಿತ ಶಾಸಕರು ದೂರು ನೀಡುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಅಸಮಾಧಾನಿತ ಶಾಸಕರು ದೂರು ನೀಡಲಿ, ತಪ್ಪೇನಿದೆ. ನಾವೂ ಹೋಗಿ ದೂರು ಕೊಡ್ತೇವೆ. ಎಲ್ಲ ಶಾಸಕರು ರೆಡಿ ಆಗಬೇಕು. ಎಲ್ಲ ಶಾಸಕರಿಗೂ ಅನ್ಯಾಯವಾಗುತ್ತಿದೆ. ಬಹಳ ನೋವಾಗಿದೆ. ನಮಗೆಲ್ಲ ಧೈರ್ಯ ಬಂದಿದೆ. ರಾಜಕೀಯ ಸ್ಥಾನಮಾನ ಸೇರಿ ನಮಗೆ ಅಭಿವೃದ್ಧಿಗೆ ಹಣ ಸಿಗುತ್ತಿಲ್ಲ. ಪಕ್ಷದ ರಾಜ್ಯಾಧ್ಯಕ್ಷರಿಗೇ ಬೆಲೆ ಇಲ್ಲ. ಬೇಕಾಬಿಟ್ಟಿಯಾಗಿ ನಿಗಮ ಮಂಡಳಿ ಸ್ಥಾನ ನೀಡುತ್ತಿದ್ದಾರೆ ಎಂದರು.