– ಯಾರ ಮಾತು ಕೇಳೋ ಅವಶ್ಯಕತೆ ನನಗಿಲ್ಲ
ಬೆಂಗಳೂರು: ಬಿಎಸ್ ಯಡಿಯೂರಪ್ಪ ನಮ್ಮ ಸಿಎಂ ಅಷ್ಟೇ. ಆದರೆ ಮೋದಿ, ಅಮಿತ್ ಶಾ ಮತ್ತು ಜೆಪಿ ನಡ್ಡಾ ನಮ್ಮ ನಾಯಕರು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಇಂದು ಬಂಡಾಯದ ವಿಚಾರವಾಗಿ ಮಾಧ್ಯಮಗಳ ಜೊತೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರು ನನ್ನನ್ನು ಕರೆದಿದ್ದು ನಿಜ. ನಮ್ಮ ಕ್ಷೇತ್ರದ ಅಭಿವೃದ್ಧಿ ಕೆಲಸ ಆಗಿಲ್ಲ ಎಂದು ಹೇಳಿದ್ದೇನೆ. ಜೊತೆಗೆ ಹಣ ಬಿಡುಗಡೆ ಆಗಿಲ್ಲ ಎಂದು ಬೇಜಾರ್ ಆಗಿದೆ ಎಂದು ಸಿಎಂ ಅವರಲ್ಲಿ ಹೇಳಿದ್ದೇನೆ. ಅದಕ್ಕೆ ಅವರು ಕರೆದಿದ್ದರು. ಆದರೆ ನಾನು ಪದೇ ಪದೇ ಅವರ ಬಳಿ ಹೋಗುವುದಿಲ್ಲ. ಅವರು ಕೊರೊನಾ ಸಂಬಂಧ ಕೆಲಸ ಮಾಡುತ್ತಿರುತ್ತಾರೆ ಎಂದರು.
Advertisement
Advertisement
ಹೈಕಮಾಂಡ್ ಸಿಎಂ ಆಗಿರಬೇಕು ಅಂದರೆ ಅವರೇ ಇರಲಿ. ಬೇರೆ ಅವರು ಸಿಎಂ ಆಗಬೇಕು ಎಂದರೂ ನಮಗೆ ಓಕೆ. ಹೈಕಮಾಂಡ್ ಆದೇಶವೇ ನಮಗೆ ಅಂತಿಮ. ನನ್ನ ಕೇಳಿದರೆ ನನ್ನ ಅಭಿಪ್ರಾಯವನ್ನು ಹೈಕಮಾಂಡ್ಗೆ ಹೇಳುತ್ತೇನೆ. ನಮ್ಮ ನಾಯಕರು ಮೋದಿ, ಅಮಿತ್ ಶಾ ಮತ್ತು ಜೆಪಿ ನಡ್ಡಾ. ಯಡಿಯೂರಪ್ಪ ನಮ್ಮ ಮುಖ್ಯಮಂತ್ರಿಗಳು ಅಷ್ಟೆ. ಹೀಗಾಗಿ ಮತ್ತೆ ನಾನು ಸಿಎಂ ಬಿಎಸ್ವೈ ಬಳಿ ಹೋಗಲ್ಲ ಎಂದು ಯತ್ನಾಳ್ ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿದರು.
Advertisement
Advertisement
ಕ್ಷೇತ್ರದ ವಿಚಾರದಲ್ಲಿ ನನಗೆ ಅಸಮಾಧಾನವಿದೆ. ಹೀಗಾಗಿ ಯಡಿಯೂರಪ್ಪ ಕರೆದಿದ್ದರೂ ನಾನು ಹೋಗಿಲ್ಲ. ನಾನು ಯಾರ ಪರವೂ ಶಿಫಾರಸು, ಲಾಭಿ ಮಾಡುವುದಿಲ್ಲ. ನಮಗೆ ಊಟ ಮಾಡಲು ಅಧಿಕಾರವಿದೆ. ಕತ್ತಿ ಮನೆಗೆ ಹೋಗಿ ಊಟ ಮಾಡಿಕೊಂಡು ಬಂದಿದ್ದೇವೆ. ಯಡಿಯೂರಪ್ಪ ಅವರ ಬಗ್ಗೆ ಚರ್ಚೆಯೂ ಆಗಿಲ್ಲ, ನನ್ನ ಹಿಂದೆ ಯಾರೂ ಇಲ್ಲ. ಸಿಎಂ ಪುತ್ರ ವಿಜಯೇಂದ್ರ ಹಸ್ತಕ್ಷೇಪ ಬಗ್ಗೆ ಎಲ್ಲಿ ಹೇಳಬೇಕು ಅಲ್ಲಿ ಹೇಳುತ್ತೇನೆ ಎಂದು ಯತ್ನಾಳ್ ತಿಳಿಸಿದ್ದಾರೆ.
ಸಿದ್ದರಾಮಯ್ಯ, ಕುಮಾರಸ್ವಾಮಿ ಅವರನ್ನು ರಾಜಕೀಯ ವಿಚಾರವಾಗಿ ನಾನು ಯಾವತ್ತೂ ಭೇಟಿಯಾಗಿಲ್ಲ. ಮುಂದೆಯೂ ಆಗುವುದಿಲ್ಲ. ವೈಯಕ್ತಿಕವಾಗಿ ಬೇಕಿದ್ದರೆ ಭೇಟಿ ಆಗುತ್ತೇನೆ. ಆದರೆ ರಾಜಕೀಯಕ್ಕೆ ಯಾವತ್ತೂ ಭೇಟಿ ಆಗಲ್ಲ. ನಾನು ಯಾರ ಬತ್ತಳಿಕೆಯ ಬಾಣ ಅಲ್ಲ. ನನಗೆ ಸ್ವಂತ ಅನುಭವ ಇದೆ. ನನಗೆ ನನ್ನದೇ ಆದ ಬುದ್ಧಿ ಇದೆ. ಯಾರ ಮಾತು ಕೇಳುವ ಅವಶ್ಯಕತೆ ನನಗೆ ಇಲ್ಲ ಎಂದು ಯತ್ನಾಳ್ ಗುಡುಗಿದ್ದಾರೆ.
ಇದೇ ವೇಳೆ ಬಿ ಎಲ್ ಸಂತೋಷ್ ಬಗ್ಗೆ ನಾನು ಮಾತನಾಡುವುದಿಲ್ಲ ಎಂದ ಯತ್ನಾಳ್, ಯಾರನ್ನು ಬೇಕಾದರೂ ಮಂತ್ರಿ ಮಾಡಬಹುದು. ಏನು ಸ್ಥಾನ ಬೇಕಾದರೂ ಕೊಡಬಹುದು ಅದು ಸಿಎಂಗೆ ಬಿಟ್ಟ ವಿಚಾರ. ರಾಜ್ಯಸಭೆ ಸಲುವಾಗಿ ನಾವು ಅಲ್ಲಿಗೆ ಹೋಗಿಲ್ಲ. ಉಮೇಶ್ ಕತ್ತಿಯನ್ನು ಮಂತ್ರಿ ಮಾಡುತ್ತೇನೆ ಎಂದು ಸಿಎಂ ದೇವರ ಮುಂದೆ ಪ್ರಮಾಣ ಮಾಡಿದ್ದಾರೆ. ನಾನು ಮಂತ್ರಿ ಮಾಡಿ ಎಂದು ಕೇಳಿಲ್ಲ. ಬಿಎಸ್ವೈ ಜೊತೆ ಪಕ್ಷ ಕಟ್ಟಿದ್ದೇನೆ, ಅವರ ವಿರುದ್ಧ ಬಂಡಾಯ ಮಾಡಲ್ಲ ಎಂದು ತಿಳಿಸಿದರು.