– ಹೊಸ ಅಧ್ಯಯನ ವರದಿಯಲ್ಲಿ ಮಾಹಿತಿ
ನವದೆಹಲಿ: ಮೂಗು, ಗಂಟಲು ದ್ರವ ಮಾತ್ರವಲ್ಲದೆ ಬಾಯಿ ಮುಕ್ಕಳಿಸಿದ ನೀರಿನಿಂದಲೂ ಕೊರೊನಾ ಪರೀಕ್ಷೆ ನಡೆಸಬಹುದು ಎಂದು ಐಸಿಎಂಆರ್ ತನ್ನ ಹೊಸ ಅಧ್ಯಯನ ವರದಿಯಲ್ಲಿ ತಿಳಿಸಿದೆ.
ಕೊರೊನಾ ಟೆಸ್ಟ್ ವಿಚಾರದಲ್ಲಿ ಹೊಸ ಅಧ್ಯಯನ ಮಾಡಿರುವ ಐಸಿಎಂಆರ್, ಗಂಟಲು ಸ್ವಾಬ್ ಸ್ಯಾಂಪಲ್ ಗೆ ಪರ್ಯಾಯ ಮಾರ್ಗ ಹುಡುಕಿದ್ದು, ಇನ್ನು ಮುಂದೆ ಬಾಯಿ ಮುಕ್ಕಳಿಸಿದ ನೀರನ್ನೂ ಸ್ಯಾಂಪಲ್ ಗೆ ಪಡೆಯಬಹುದು ಎಂದು ತಿಳಿಸಿದೆ.
Advertisement
Advertisement
ಅಧ್ಯಯನ ವರದಿ ಪ್ರಕಟಿಸುವ ಮುನ್ನ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಈ ಪ್ರಯೋಗ ನಡೆಸಲಾಗಿತ್ತು. ಸುಮಾರು 50 ರೋಗಿಗಳ ಮೇಲೆ ನಡೆದ ಪರೀಕ್ಷೆಯಲ್ಲಿ ಬಾಯಿ ಮುಕ್ಕಳಿಸಿದ ನೀರಿನಲ್ಲಿ ಕೊರೊನಾ ಪ್ರಾಥಮಿಕ ಲಕ್ಷಣಗಳಿರಿವುದು ಪತ್ತೆಯಾದ ಬಳಿಕ ಐಸಿಎಂಆರ್ ಈ ನಿರ್ಧಾರಕ್ಕೆ ಬಂದಿದೆ.
Advertisement
ಬಾಯಿ ಮುಕ್ಕಳಿಸುವ ನೀರಿನ ಪರೀಕ್ಷೆಯಿಂದ ಅಪಾಯಗಳು ಕಡಿಮೆ. ಕೊರೊನಾ ವಾರಿಯರ್ಸ್ ಸುರಕ್ಷತೆಯಲ್ಲಿಯೂ ಇದು ವಿಧಾನ ಅನುಕೂಲ. ಗಂಟಲು ಅಥಾವ ಮೂಗಿನ ಸ್ವಾಬ್ ಪಡೆಯುವಾಗ ಹೆಲ್ತ್ ವಾರಿಯರ್ಸ್ ಗೆ ಸೋಂಕು ಹರಡುವ ಅಪಾಯಗಳು ಹೆಚ್ಚು. ಇದಕ್ಕಾಗಿ ಪಿಪಿಇ ಕಿಟ್ ಗಳನ್ನು ಧರಿಸಬೇಕು ಎಂದು ಐಸಿಎಂಆರ್ ಅಭಿಪ್ರಾಯಪಟ್ಟಿದೆ.
Advertisement
ಬಾಯಿ ಮುಕ್ಕಳಿಸಿದ ನೀರನ್ನು ಸ್ಯಾಂಪಲ್ ಪಡೆಯುವುದರಿಂದ ಅಪಾಯ ಕಡಿಮೆ. ರೋಗಿಗಳೇ ಬಾಯಿ ಮುಕ್ಕಳಿಸಿದ ನೀರಿನ ಸ್ಯಾಂಪಲ್ ಕೊಡುತ್ತಾರೆ ಇದರಿಂದ ಹೆಲ್ತ್ ವಾರಿಯರ್ಸ್ ಗೆ ಸೋಂಕು ಹರಡುವುದಿಲ್ಲ. ಅಲ್ಲದೆ ಪಿಪಿಇ ಕಿಟ್ ಸೇರಿದಂತೆ ಇತರೆ ಮುನ್ನೆಚ್ಚರಿಕಾ ಸಾಧನಗಳ ಬಳಕೆ ಕಡಿಮೆಯಾಗುವುದರಿಂದ ಇದಕ್ಕಾಗಿ ಖರ್ಚು ಮಾಡುವ ಹಣ ಸಹ ಉಳಿತಾಯ ಆಗಲಿದೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ.
ಮಕ್ಕಳು, ತೀವ್ರ ಆರೋಗ್ಯ ತೊಂದರೆಗೆ ಒಳಗಾದವರು ಹಾಗೂ ಉಸಿರಾಟದ ಸಮಸ್ಯೆ ಇರುವವರಿಂದ ಈ ಸ್ಯಾಂಪಲ್ ಪಡೆಯುವಂತಿಲ್ಲ ಇದರಿಂದ ಅಪಾಯ ಹೆಚ್ಚು ಎಂದು ಎಚ್ಚರಿಸಿರುವ ಐಸಿಎಂಆರ್ ಸಾಮಾನ್ಯ ವ್ಯಕ್ತಿಗಳಿಗೆ ಮಾತ್ರ ಈ ಪರೀಕ್ಷೆ ಮಾದರಿ ಬಳಸಬಹುದು ಎಂದು ತಿಳಿಸಿದೆ.