– ಈಗಾಗಲೇ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಿದೆ
– ಇನ್ನು ಮುಂದೆಯಾದರೂ ಹಿಂದೂ, ಮುಸ್ಲಿಮರು ಚೆನ್ನಾಗಿರೋಣ
ಲಕ್ನೋ: ಬಾಬ್ರಿ ಮಸೀದಿ ಧ್ವಂಸಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಲು ಇನ್ನೆರಡು ವಾರ ಬಾಕಿ ಇರುವಾಗಲೇ ಅಯೋಧ್ಯೆ ಭೂಮಿ ವಿವಾದ ಸಂಬಂಧ ದಾವೆ ದಾವೆ ಹೂಡಿದ್ದ ಇಕ್ಬಾಲ್ ಅನ್ಸಾರಿ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸುವಂತೆ ಮನವಿ ಮಾಡಿದ್ದಾರೆ.
ಸಿಬಿಐ ವಿಶೇಷ ನ್ಯಾಯಾಲಯ ಸೆಪ್ಟೆಂಬರ್ 30ರಂದು ತೀರ್ಪು ಪ್ರಕಟಿಸಲು ನಿರ್ಧರಿಸಿದೆ. ಆರೋಪಿಗಳ ಪೈಕಿ ಬಿಜೆಪಿಯ ಹಿರಿಯ ನೇತಾರರು ಇದ್ದು, ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ್ ಜೋಷಿ, ಉಮಾ ಭಾರತಿ, ಕಲ್ಯಾಣ್ ಸಿಂಗ್ ಹಾಗೂ ವಿನಯ್ ಕಾಟಿಯಾರ್ ಸೇರಿ ಈ ಪ್ರಕರಣದಲ್ಲಿ 32 ಆರೋಪಿಗಳಾಗಿದ್ದಾರೆ. ತೀರ್ಪು ಪ್ರಕಟಿಸುವ ವೇಳೆ ಎಲ್ಲ ಆರೋಪಿಗಳು ಹಾಜರಾಗಬೇಕು ಎಂದು ಕೋರ್ಟ್ ಸೂಚಿಸಿದೆ.
Advertisement
Advertisement
ಈ ಕುರಿತು ಇಕ್ಬಾಲ್ ಅನ್ಸಾರಿ ಮಾತನಾಡಿ, ಶತಮಾನಗಳ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಈಗಾಗಲೇ ತೀರ್ಪು ಪ್ರಕಟಿಸಿದ್ದು, ದೇವಸ್ಥಾನ ನಿರ್ಮಾಣ ಕಾರ್ಯ ಸಹ ಈಗಾಗಲೇ ಆರಂಭವಾಗಿದೆ ಎಂದು ಅನ್ಸಾರಿ ಹೇಳಿದ್ದಾರೆ.
Advertisement
ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಆರೋಪಿಗಳು ಸಾವನ್ನಪ್ಪಿದ್ದಾರೆ. ಅಲ್ಲದೇ ಈಗ ಇರುವವರಿಗೆ ಸಹ ತುಂಬಾ ವಯಸ್ಸಾಗಿದೆ. ಹೀಗಾಗಿ ಈ ಪ್ರಕರಣವನ್ನು ರದ್ದುಗೊಳಿಸುವ ಮೂಲಕ ಅಂತ್ಯ ಹಾಡಬೇಕು. ಅಲ್ಲದೆ ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಯಾವುದೇ ವಿವಾದ ಉಳಿಯುವುದಿಲ್ಲ. ಇನ್ನು ಮುಂದೆ ಹಿಂದೂ, ಮುಸ್ಲಿಮರು ಸೌಹಾರ್ದಯುತರಾಗಿರಬೇಕು. ಪರಸ್ಪರ ಇತರರನ್ನು ಬದುಕಲು ಬಿಡಬೇಕು. ಈ ಮೂಲಕ ಸಾಮಾಜಿಕತೆಯನ್ನು ಬಲಪಡಿಸಬೇಕು ಎಂದು ಹೇಳಿದ್ದಾರೆ.
Advertisement
ಆರೋಪಿಗಳು?
28 ವರ್ಷಗಳ ಹಳೆಯ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆ ಮುಕ್ತಾಯಗೊಂಡಿದ್ದು, ಸೆ.30ರಂದು ಅಂತಿಮ ತೀರ್ಪು ಪ್ರಕಟಿಸುವುದಾಗಿ ಸಿಬಿಐ ವಿಶೇಷ ಕೋರ್ಟ್ ತಿಳಿಸಿದೆ. ತೀರ್ಪು ನೀಡುವ ದಿನ ಎಲ್ಲ ಆರೋಪಿಗಳು ನ್ಯಾಯಾಲಯದಲ್ಲಿ ಹಾಜರಿರಬೇಕು ಎಂದು ನ್ಯಾ.ಸುರೇಂದ್ರ ಕುಮಾರ್ ಯಾದವ್ ಸೂಚಿಸಿದ್ದರು. ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಮಾಜಿ ಉಪಪ್ರಧಾನಿ ಎಲ್.ಕೆ.ಅಡ್ವಾಣಿ, ಬಿಜೆಪಿ ಹಿರಿಯ ಮುಖಂಡ ಮುರಳಿ ಮನೋಹರ್ ಜೋಶಿ, ಕಲ್ಯಾಣ್ ಸಿಂಗ್, ಉಮಾಭಾರತಿ ಸೇರಿದಂತೆ 32 ಮಂದಿ ಆರೋಪಿಗಳಿದ್ದಾರೆ. 351 ಸಾಕ್ಷ್ಯ ಹಾಗೂ 600 ದಾಖಲಾತಿ ಸಾಕ್ಷ್ಯಗಳನ್ನು ನ್ಯಾಯಾಲಯದ ಮುಂದೆ ಸಿಬಿಐ ಹಾಜರುಪಡಿಸಿತ್ತು. ಸೆಪ್ಟೆಂಬರ್ 1ರಂದು ವಾದ ಮತ್ತು ಪ್ರತಿವಾದ ಮುಗಿದಿದ್ದು, ವಿಶೇಷ ನ್ಯಾಯಾಧೀಶರು ತೀರ್ಪು ಬರೆಯುತ್ತಿದ್ದಾರೆ ಎಂದು ಸಿಬಿಐ ಪರ ವಕೀಲ ಲಲಿತ್ ಸಿಂಗ್ ತಿಳಿಸಿದ್ದರು.
2017ರ ಏಪ್ರಿಲ್ 19 ರಂದು ಪ್ರತಿನಿತ್ಯ ವಿಚಾರಣೆ ನಡೆಸಿ 2 ವರ್ಷದ ಒಳಗಡೆ ತೀರ್ಪು ಪ್ರಕಟಿಸುವಂತೆ ಸಿಬಿಐ ವಿಶೇಷ ಕೋರ್ಟ್ಗೆ ಸುಪ್ರೀಂ ಕೋರ್ಟ್ ಸೂಚಿಸಿತ್ತು. ಬಾಬ್ರಿ ಮಸೀದಿ ಧ್ವಂಸಕ್ಕೆ ಸಂಬಂಧಿಸಿದಂತೆ ಎರಡು ಪ್ರಕರಣ ದಾಖಲಾಗಿತ್ತು. ಲಕ್ನೋ ಸಿಬಿಐ ನ್ಯಾಯಾಲಯದಲ್ಲಿ ಕರಸೇವಕರ ವಿರುದ್ಧದ ಪ್ರಕರಣದ ವಿಚಾರಣೆ ನಡೆಯುತ್ತಿದ್ದರೆ 8 ವಿಐಪಿಗಳ ವಿರುದ್ಧ ರಾಯಬರೇಲಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. 2017ರ ಏಪ್ರಿಲ್ನಲ್ಲಿ ರಾಯಬರೇಲಿ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ವಿಚಾರಣೆಯನ್ನು ಲಕ್ನೋ ಸಿಬಿಐ ನ್ಯಾಯಾಲಯಕ್ಕೆ ಸುಪ್ರೀಂ ಕೋರ್ಟ್ ವರ್ಗಾಯಿಸಿತ್ತು.
32 ಮಂದಿ ಆರೋಪಿಗಳು ಯಾರು?
ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಸುಧೀರ್ ಕಕ್ಕರ್, ಸತೀಶ್ ಪ್ರಧಾನ್, ರಾಮ್ ಚಂದ್ರ ಖತ್ರಿ, ಸಂತೋಷ್ ದುಬೆ, ಓಂ ಪ್ರಕಾಶ್ ಪಾಂಡೆ, ಕಲ್ಯಾಣ್ ಸಿಂಗ್, ಉಮಾ ಭಾರತಿ, ರಾಮ್ ವಿಲಾಸ್ ವೇದಾಂತಿ, ವಿನಯ್ ಕಟಿಯಾರ್, ಪ್ರಕಾಶ್ ಶರ್ನಾ, ಗಾಂಧಿ ಸಿಂಗ್ ಕಮಲೇಶ್ ತ್ರಿಪಾಠಿ, ಬ್ರಿಜ್ ಭೂಷಣ್ ಸಿಂಗ್, ರಾಮ್ಜಿ ಗುಪ್ತಾ, ಮಹಂತ್ ನೃತ್ಯ ಗೋಪಾಲ್ ದಾಸ್, ಚಂಪತ್ ರಾಯ್, ಸಾಕ್ಷಿ ಮಹಾರಾಜ್, ವಿನಯ್ ಕುಮಾರ್ ರೈ, ನವೀನ್ ಭಾಯ್ ಶುಕ್ಲಾ, ಧರ್ಮದಾಸ್, ಜೈ ಭಗವಾನ್ ಗೋಯೆಲ್, ಅಮರನಾಥ್ ಗೋಯೆಲ್, ಸಾಧ್ವಿ ರಿತಂಬರ, ಪವನ್ ಪಾಂಡೆ, ವಿಜಯ್ ಬಹದ್ದೂರ್ ಸಿಂಗ್, ಆರ್ಎಂ ಶ್ರೀವತ್ಸ, ಧರ್ಮೇಂದ್ರ ಸಿಂಗ್ ಗುಜ್ಜರ್.