– ಮತ್ತೆ ವಿವಾದಕ್ಕೆ ಕಾರಣವಾಗುತ್ತಾ ಬುಡಾ ಅಧ್ಯಕ್ಷರ ನೇಮಕ?
– ಲಾಕ್ಡೌನ್ ಹಿನ್ನಲೆಯಲ್ಲಿ ರೆಡ್ಡಿ ಸಹೋದರರ ಪ್ರಾಬಲ್ಯ ಹೆಚ್ಚಳ
ಬಳ್ಳಾರಿ: ಲಾಕ್ಡೌನ್ ನಡುವೆಯೂ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ದಮ್ಮೂರು ಶೇಖರ್ ಅವರನ್ನು ಮರು ನೇಮಕಗೊಳಿಸಿ ರಾಜ್ಯ ಸರ್ಕಾರ ಹೊರಡಿಸಿದ್ದು, ಈ ಆದೇಶದಿಂದ ಬಳ್ಳಾರಿ ಬಿಜೆಪಿಯಲ್ಲಿ ಮತ್ತೆ ವಿವಾದ ಸೃಷ್ಟಿಯಾಗುವ ಸಾಧ್ಯತೆ ದಟ್ಟವಾಗಿದೆ.
ರಾಜ್ಯ ಸರ್ಕಾರ ಈ ಹಿಂದೆ ರೆಡ್ಡಿ ಸಹೋದರರ ಪರಮಾಪ್ತರಾಗಿದ್ದ ದಮ್ಮೂರು ಶೇಖರ್ ಅವರನ್ನು ಬುಡಾ ಅಧ್ಯಕ್ಷರಾಗಿ ನೇಮಕಗೊಳಿಸಿತ್ತು. ಆದರೆ ಆ ವೇಳೆ ಜಿಲ್ಲೆಯ ಬಿಜೆಪಿಗರ ಪಾಳಯದಲ್ಲಿ ಭಾರೀ ಅಸಮಾಧಾನಕ್ಕೆ ಕಾರಣವಾಗಿತ್ತು. ಬಿಜೆಪಿಯ ಜಿಲ್ಲಾ ಅಧ್ಯಕ್ಷರಾದಿಯಾಗಿ ಪದಾಧಿಕಾರಿಗಳು ಸಮೂಹಿಕ ರಾಜೀನಾಮೆ ನೀಡುವ ಪ್ರಹಸನಕ್ಕೂ ಸಾಕ್ಷಿಯಾಗಿತ್ತು. ಇದರಿಂದ ಗಲಿಬಿಲಿಗೊಂಡಿದ್ದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಕೂಡಲೇ ಬುಡಾ ಅಧ್ಯಕ್ಷರ ನೇಮಕಗೊಳಿಸಿದ ಆದೇಶವನ್ನ ರದ್ದು ಪಡಿಸಿದ್ದರು.
Advertisement
Advertisement
ಇದೀಗ ಮತ್ತೊಮ್ಮೆ ದಮ್ಮೂರು ಶೇಖರ್ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ದಮ್ಮೂರು ಶೇಖರ್, ಸಚಿವ ಶ್ರೀರಾಮುಲು ಹಾಗೂ ಸೋಮಶೇಖರ ರೆಡ್ಡಿ ಪರಮಾಪ್ತರೆಂದು ಹೇಳಲಾಗುತ್ತೆ. ಈ ಹಿಂದೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ದಮ್ಮೂರು ಶೇಖರ್ ಅವರನ್ನು ನೇಮಕ ಮಾಡಿದ್ದ ಸರ್ಕಾರ, ಜಿಲ್ಲಾ ಕಾರ್ಯಕರ್ತರಿಂದ ನೇಮಕಕ್ಕೆ ವಿರೋಧ ವ್ಯಕ್ತವಾದ ಪರಿಣಾಮ ನೇಮಕಾತಿ ಆದೇಶವನ್ನು ವಾಪಾಸ್ ಪಡೆದಿತ್ತು. ಅಂದು ದಮ್ಮೂರು ಶೇಖರ್ ನೇಮಕ ವಿರೋಧಿಸಿ ಪ್ರತಿಕಾಗೋಷ್ಠಿ ನಡೆಸಿದ್ದ ಜಿಲ್ಲಾ ಬಿಜೆಪಿ ಪದಾಧಿಕಾರಿಗಳು, ಜಿಲ್ಲೆಯ 20 ಕ್ಕೂ ಹೆಚ್ಚು ಬಿಜೆಪಿ ಪದಾಧಿಕಾರಿಗಳು ರಾಜೀನಾಮೆ ನೀಡುತ್ತೇವೆ ಎಂದು ತಿಳಿಸಿದ್ದರು. ಅಲ್ಲದೇ ಜಿಲ್ಲಾಧ್ಯಕ್ಷರಾಗಿದ್ದ ಚನ್ನಬಸವನಗೌಡ ಅವರು ರಾಜೀನಾಮೆ ಸ್ವೀಕಾರ ಮಾಡಿದ್ದರು. ಬಿಜೆಪಿ ನಾಯಕರ ಕಲಹ ಬಹಿರಂಗವಾಗುತ್ತಿದಂತೆ ಎಚ್ಚೆತ್ತಿದ್ದ ಸಿಎಂ ಬಿಎಸ್ವೈ ಅವರು, ನೇಮಕಾತಿ ಆದೇಶವನ್ನು ವಾಪಾಸ್ ಪಡೆದು, ಜಿಲ್ಲಾ ನಾಯಕರೊಂದಿಗೆ ಚರ್ಚೆ ನಡೆಸುತ್ತೇನೆ ಎಂದಿದ್ದರು.
Advertisement
ಆದೇಶ ಹೀಗಿದೆ: ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯಿದೆ, 1987ರ ಕಲಂ 3(3) ಎ ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ದಮ್ಮೂರು ಶೇಖರ್ ಅವರನ್ನ ಈ ತತ್ಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ 3 ವರ್ಷದ ಅವಧಿಯವರೆಗೆ ಅಥವಾ ಮುಂದಿನ ಆದೇಶದವರೆಗೆ, ಇವುಗಳಲ್ಲಿ ಯಾವುದು ಮೊದಲು ಅಲ್ಲಿಯವರೆಗೆ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.