ನವದೆಹಲಿ: ಕೊರೊನಾ ವೈರಸ್ ಸೋಂಕಿತರಿಗೆ ಬೆಂಗಳೂರಿನ ಬಯೋಕಾನ್ ಅಭಿವೃದ್ಧಿ ಪಡಿಸಿರುವ ಔಷಧಿ ರಾಷ್ಟ್ರೀಯ ಚಿಕಿತ್ಸಾ ಶಿಷ್ಟಾಚಾರದಲ್ಲಿ ಬರುವುದಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
ಜುಲೈ ಮೊದಲ ವಾರದಲ್ಲಿ ಬಯೋಕಾನ್ ಸಂಸ್ಥೆ ಅಭಿವೃದ್ಧಿ ಪಡಿಸಿದ್ದ ಚರ್ಮರೋಗ ಔಷಧ ‘ಇಟೋಲಿಝುಮಾಬ್’ ಇಂಜೆಕ್ಷನ್ನ್ನು ಗಂಭೀರ ಪ್ರಮಾಣದ ಉಸಿರಾಟ ತೊಂದರೆಯಿಂದ ಬಳಲುತ್ತಿರುವ ಕೋವಿಡ್ 19 ಸೋಂಕಿತರಿಗೆ ನೀಡಲು ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ(ಡಿಸಿಜಿಐ) ಅನುಮತಿ ನೀಡಿತ್ತು.
Advertisement
Advertisement
ಡಿಸಿಜಿಐ ಬಯೋಕಾನ್ ಔಷಧಿ ಬಳಕೆಗೆ ಅನುಮತಿ ನೀಡಿದಕ್ಕೆ ವೈದ್ಯಕೀಯ ಕ್ಷೇತ್ರದ ಕೆಲ ತಜ್ಞರು ಆರೋಗ್ಯ ಇಲಾಖೆಗೆ ಪತ್ರ ಬರೆದು ಆಕ್ಷೇಪ ಎತ್ತಿದ್ದರು. ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ ಸಚಿವಾಲಯ ಈ ಔಷಧಿಯಿಂದ ರೋಗಿ ಗುಣಮುಖರಾಗುತ್ತಾರೆ ಎಂಬುದಕ್ಕೆ ಬಹಳ ಕಡಿಮೆ ಪ್ರಮಾಣದ ಸಾಕ್ಷ್ಯ ಸಿಕ್ಕಿದೆ. ಕೇವಲ 30 ರೋಗಿಗಳಿಗೆ ಟ್ರಯಲ್ ಮಾಡಿದ ಈ ಔಷಧಿಯನ್ನು ನೀಡಲು ಅನುಮತಿ ನೀಡಿದ್ದಕ್ಕೆ ಕೆಲ ವೈದ್ಯರು ಪ್ರಶ್ನೆ ಎತ್ತಿದ್ದಾರೆ. ಕೋವಿಡ್ 19 ರೋಗಿಗಳಿಗೆ ತುರ್ತು ಸಂದರ್ಭದಲ್ಲಿ ಔಷಧಿ ನೀಡಲು ಅನುಮತಿ ನೀಡಬೇಕಾದರೆ ಅದಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಒಪ್ಪಿಗೆ ಬೇಕಾಗುತ್ತದೆ ಎಂದು ಹೇಳಿದೆ.
Advertisement
Advertisement
ಈ ಸಂಬಂಧ ಬಯೋಕಾನ್ ಹೇಳಿಕೆ ಬಿಡುಗಡೆ ಮಾಡಿದ್ದು, ರಾಷ್ಟ್ರೀಯ೭ ಕೋವಿಡ್ 19 ಟಾಸ್ಕ್ ಫೋರ್ಸ್ ಔಷಧಿ ಬಳಕೆ ಸಂಬಂಧ ಮತ್ತಷ್ಟು ಸಾಕ್ಷ್ಯಗಳನ್ನು ಕೇಳಿದೆ. ನಾವು ಸಾಕ್ಷ್ಯಗಳನ್ನು ನೀಡುತ್ತೇವೆ. ಹತ್ತಿರ ಹತ್ತಿರ 1 ಸಾವಿರ ಸೋಂಕಿತರಿಗೆ ಈ ಔಷಧಿ ನೀಡಿದ್ದು, ಉತ್ತಮ ಫಲಿತಾಂಶ ಬಂದಿದೆ ಎಂದು ತಿಳಿಸಿದೆ.
ದೊಡ್ಡ ಪ್ರಮಾಣದಲ್ಲಿ ಈ ಔಷಧಿಯನ್ನು ಟ್ರಯಲ್ ಮಾಡಲು ನಾವು ಮುಂದಾಗುತ್ತಿದ್ದೇವೆ. 10-15 ಆಸ್ಪತ್ರೆಗಳ 200 ರೋಗಿಗಳಿಗೆ ಈ ಔಷಧಿ ನೀಡಲು ಮುಂದಾಗುತ್ತಿದ್ದೇವೆ. ಈ ಅಧ್ಯಯನ ವರದಿಯನ್ನು ನಾವು ಡಿಸಿಜಿಐಗೆ ನೀಡುತ್ತೇವೆ ಎಂದು ಬಯೋಕಾನ್ ಹೇಳಿದೆ.
The National Covid Task Force needs to see more evidence & we will provide them large real world data to enable the committee to reconsider its decision on inclusion of Itolizumab in the protocol. Nearly 1000 patients have used the drug across the country with good outcome data???? pic.twitter.com/mAwjqDSwNX
— Biocon (@Bioconlimited) July 26, 2020
ಬಯೋಕಾನ್ ಕಂಪನಿ ಚರ್ಮರೋಗ ಸೋರಿಯಾಸಿಸ್ಗೆ ಬಳಸುವ ಈ ಔಷಧವನ್ನು ಉಸಿರಾಟದ ತೊಂದರೆಗೆ ಬಳಸುವ ರೋಗಿಗಳಿಗೆ ನೀಡುವ ಸಂಬಂಧ 2ನೇ ಹಂತದ ಕ್ಲಿನಿಕಲ್ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿ, ತನ್ನ ಪ್ರಯೋಗದ ವರದಿಯನ್ನು ಡಿಸಿಜಿಐಗೆ ಸಲ್ಲಿಸಿತ್ತು. ಡಿಸಿಜಿಐ ಈ ವರದಿಯನ್ನು ಶ್ವಾಸಕೋಶ, ಔಷಧ ಶಾಸ್ತ್ರ, ಏಮ್ಸ್ ತಜ್ಞರ ಸಮಿತಿಗೆ ಪರಿಶೀಲನೆ ನಡೆಸುವಂತೆ ಸೂಚಿಸಿತ್ತು. ತಜ್ಞರಿಂದ ಒಪ್ಪಿಗೆ ಸಿಕ್ಕಿದ ಬಳಿಕ ಕೊರೊನಾ ಸೋಂಕಿತರ ಸಮ್ಮತಿಯ ಮೇರೆಗೆ ಬಳಸಲು ಅನುಮತಿ ನೀಡಿತ್ತು.
ಈ ಔಷಧಿಯನ್ನು ಅತಿ ಹೆಚ್ಚು ಸೋಂಕಿತರು ಇರುವ ಮುಂಬೈ ಮತ್ತು ದೆಹಲಿಯಲ್ಲಿ ಪ್ರಯೋಗ ಮಾಡಲಾಗಿತ್ತು. ಆಸ್ಪತ್ರೆಯಲ್ಲಿನ ಹಲವು ರೋಗಿಗಳ ಮೇಲೆ ಈ ಔಷಧ ಪ್ರಯೋಗಿಸಲಾಗಿದ್ದು ಗುಣಮುಖರಾಗಿದ್ದಾರೆ ಎಂದು ಮುಂಬೈಯ ಬಿವೈಎಲ್ ನಾಯರ್ ಆಸ್ಪತ್ರೆಯ ಡೀನ್ ಡಾ. ಮೋಹನ್ ಜೋಷಿ ತಿಳಿಸಿದ್ದಾರೆ. ದೆಹಲಿಯ ಲೋಕ ನಾಯಕ ಆಸ್ಪತ್ರೆಯಲ್ಲಿ 8 ರೋಗಿಗಳಿಗೆ ಇಟೋಲಿಝುಮಾಬ್ ಔಷಧ ನೀಡಲಾಗಿದ್ದು, ಅವರೆಲ್ಲರೂ ಗುಣಮುಖರಾಗಿದ್ದಾರೆ ಎಂದು ವರದಿಯಾಗಿತ್ತು. ತುರ್ತು ಸ್ಥಿತಿಯಲ್ಲಿ ಹಾಗೂ ನಿಯಂತ್ರಿತ ಪ್ರಮಾಣದಲ್ಲಿ ಬಳಕೆ ಮಾಡಬೇಕು ಎಂಬ ಷರತ್ತನ್ನು ಡಿಸಿಜಿಐ ವಿಧಿಸಿತ್ತು.
ಈ ಬಗ್ಗೆ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಪ್ರತಿಕ್ರಿಯಿಸಿ, ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಪಾರಾಗಲು ದೇಶ, ವಿದೇಶಗಳಲ್ಲಿ ಸಂಶೋಧಕರು ನಿರತಂತರ ಸಂಶೋಧನೆ ನಡೆಸುತ್ತಿದ್ದಾರೆ. ಇಟೋಲಿಝುಮಾಬ್ ಔಷಧ ನೀಡಿದ ಎಲ್ಲ ರೋಗಿಗಳು ಗುಣಮುಖರಾಗಿದ್ದಾರೆ. ಸಕಾರಾತ್ಮಕ ಪ್ರತಿಕ್ರಿಯೆ ಕಂಡುಬಂದ ಹಿನ್ನೆಲೆಯಲ್ಲಿ ಗಂಭೀರ ಪ್ರಮಾಣದ ಉಸಿರಾಟ ತೊಂದರೆಯಿಂದ ಬಳಲುತ್ತಿರುವ ಸೋಂಕಿತರಿಗೆ ಈ ಔಷಧ ನೀಡಲು ಡಿಸಿಜಿಐ ಅನುಮೋದನೆ ನೀಡಿದೆ ಎಂದು ತಿಳಿಸಿದ್ದರು. ಬಯೋಕಾನ್ ಕಂಪನಿಯು 2013ರಿಂದಲೂ ಬಯೋಕಾನ್ ಪಾರ್ಕ್ ನಲ್ಲಿ ಈ ಔಷಧವನ್ನು ತಯಾರಿಸುತ್ತದೆ.
ಈ ವರ್ಷದಲ್ಲೇ ಮೇಡ್ ಇನ್ ಇಂಡಿಯಾ ಕೋವಿಡ್ -19 ಔಷಧಿ ಲಭ್ಯವಾಗಲಿದೆ ಎಂದು ಬಯೋಕಾನ್ ಕಂಪನಿಯ ಆಡಳಿತ ನಿರ್ದೇಶಕಿ ಕಿರಣ್ ಮಜುಂದಾರ್ ಶಾ ಏಪ್ರಿಲ್ನಲ್ಲಿ ತಿಳಿಸಿದ್ದರು.
ಈಗಾಗಲೇ ಎರಡು, ಮೂರು ಸಣ್ಣ ಕಂಪನಿಗಳು ಔಷಧಿ ಅಭಿವೃದ್ಧಿ ಪಡಿಸುತ್ತಿವೆ. ಈ ಕಂಪನಿಗಳು ದೊಡ್ಡ ಕಂಪನಿಗಳ ಸಹಯೋಗದೊಂದಿಗೆ ಔಷಧಿ ತಯಾರಿಸುವ ಕೆಲಸ ಮಾಡುತ್ತಿವೆ. ನಾವು ಔಷಧಿ ನಿರ್ಮಾಣಕ್ಕೆ ಕೈ ಹಾಕಿದ್ದೇವೆ ಎಂದು ಮಾಧ್ಯಮಕ್ಕೆ ತಿಳಿಸಿದ್ದರು.