– ಬೆಂಗಳೂರಿಗೆ ಮತ್ತೆ ಬರಲು ಹಿಂದೇಟು
ಬೆಂಗಳೂರು: ನಗರಕ್ಕೆ ಬಂದು ಬದುಕು ಕಟ್ಟಿಕೊಂಡು ಹೇಗೋ ಜೀವನ ಮಾಡುತ್ತಿದ್ದ ಜನರು ಈಗ ಬೆಂಗಳೂರಿಗೆ ಮತ್ತೆ ವಾಪಸ್ ಬರಲು ಹಿಂದೇಟು ಹಾಕುತ್ತಿದ್ದಾರೆ. ಕೊರೊನಾ ಮಾಹಾಮಾರಿಯಿಂದ ಬೆಂಗಳೂರು ಬಿಟ್ಟು ಹೋದ ಜನರು ಮತ್ತೆ ವಾಪಸ್ ಬೆಂಗಳೂರಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ.
ಬೆಂಗಳೂರಿನಲ್ಲಿ ಉತ್ತಮ ಸಂಬಳ ಪಡೆದು ಜೀವನ ಕಟ್ಟಿಕೊಂಡಿದ್ದ ಸಾವಿರಾರು ಜನರಿಗೆ ಕೊರೊನಾ ಮಹಾಮಾರಿ ಹೊಡೆತ ಕೊಟ್ಟಿದೆ. ಒಂದೆಡೆ ಲಾಕ್ಡೌನ್, ಸೀಲ್ಡೌನ್ನಿಂದ ಕಂಪನಿಗಳು ಆರ್ಥಿಕ ನಷ್ಟ ಅನುಭವಿಸಿವೆ. ಮತ್ತೊಂದೆಡೆ ಉದ್ಯೋಗಿಗಳಿಗೆ ಕಂಪನಿಗಳು ಸಂಬಳ ನೀಡಲೂ ಕಷ್ಟವಾಗಿದೆ. ಇದಲ್ಲದೇ ಅತೀ ವೇಗದಲ್ಲಿ ಬೆಂಗಳೂರಿನಲ್ಲಿ ಹಬ್ಬುತ್ತಿರುವ ಕೊರೊನಾದಿಂದ ಹಲವು ಉದ್ಯೋಗಿಗಳು ಕೆಲಸ ಬಿಟ್ಟು ಮನೆಗೆ ತೆರಳಿದ್ದಾರೆ.
Advertisement
Advertisement
ಉತ್ತರ ಕನ್ನಡ ಜಿಲ್ಲೆಯಲ್ಲೂ ನೂರಾರು ಜನರು ಬೆಂಗಳೂರಿನಿಂದ ತವರು ಕಡೆ ಮುಖ ಮಾಡಿದ್ದು, ಕೆಲವರು ಕೊರೊನಾಗೆ ಹೆದರಿ ಕೆಲಸ ತೊರೆದು ಮನೆಯತ್ತ ಮುಖಮಾಡಿದ್ದಾರೆ. ಇಲ್ಲಿಯೇ ಸಣ್ಣ ಉದ್ಯೋಗ ಸಿಕ್ಕರೂ ಮಾಡುತ್ತೇನೆ. ಬೆಂಗಳೂರಿಗೆ ಹೋಗುವುದಿಲ್ಲ. ಇಂದಿಗೆ ನಾಲ್ಕು ತಿಂಗಳಿನಿಂದ ಕಂಪನಿಯಿಂದ ಸಂಬಳವಾಗಿಲ್ಲ. ಬೆಂಗಳೂರಿನಲ್ಲಿ ಹಣವಿಲ್ಲದೇ ಬದುಕಲು ಸಾಧ್ಯವಿಲ್ಲ. ಹೀಗಾಗಿ ಅನಿವಾರ್ಯ ಕಾರಣದಿಂದ ಮನೆಗೆ ಬಂದಿದ್ದೇನೆ ಎಂದು ಖಾಸಗಿ ಕಂಪನಿಯ ಉದ್ಯೋಗಿ ಜಗದೀಶ್ ಹೇಳಿದ್ದಾರೆ.
Advertisement
Advertisement
ಇತ್ತ ಧಾರವಾಡದ ಜನತೆಗೂ ಬೆಂಗಳೂರಿಗೆ ಹೋಗಬೇಕೆಂದರೆ ಭಯ ಆಗುತ್ತಿದೆ. ಕಳೆದ 10 ರಿಂದ 20 ವರ್ಷಗಳ ಕಾಲ ಬೆಂಗಳೂರಲ್ಲೇ ಇದ್ದು ಕೆಲಸ ಮಾಡಿಕೊಂಡಿದ್ದ ಜನರಿಗೆ ಬೆಂಗಳೂರಿಗೆ ಬೇಡವಾಗಿದೆ. ಲಾಕ್ಡೌನ್ ನಂತರ ಧಾರವಾಡಕ್ಕೆ ಬಂದಿರುವ ಸಹಾಯ ನಿರ್ದೇಶಕರೊಬ್ಬರು, 19 ವರ್ಷಗಳಿಂದ ಬೆಂಗಳೂರಲ್ಲಿ ಇದ್ದರು. ಆದರೆ ಸಿಲಿಕಾನ್ ಸಿಟಿಯಲ್ಲಿ ಸೋಂಕು ಹರಡುವುದನ್ನು ನೋಡಿ ಹೋಗುವುದಕ್ಕೆ ಮನಸ್ಸಿಲ್ಲ. ಅಲ್ಲದೇ ಸಿನೆಮಾ ಇಂಡಸ್ಟ್ರಿ ಸ್ಥಿತಿಯಂತೂ ಬಹಳ ಚಿಂತಾಜನಕ ಸ್ಥಿತಿಯಲ್ಲಿದೆ. ಸದ್ಯ ಇಲ್ಲೆ ಏನಾದರೂ ಕೆಲಸ ಮಾಡಿಕೊಂಡು ಇರುತ್ತೇನೆ ಎನ್ನುತ್ತಿದ್ದಾರೆ.
ಕೊರೊನಾ ಬಳಿಕ ಬೆಂಗಳೂರು ಬಿಟ್ಟು ತಮ್ಮ ಊರಿಗಳಿಗೆ ಹೋಗಿರುವ ಜನರು ಮತ್ತೆ ಬೆಂಗಳೂರಿಗೆ ವಾಪಸ್ ಆಗುವುದಿಲ್ಲ ಅಂತ ಹೇಳಿದ್ದಾರೆ. ಕೂಲಿನಾದರೂ ಮಾಡಿಕೊಂಡು ಇರುತ್ತೀವಿ, ಬೆಂಗಳೂರು ಸಹವಾಸ ಬೇಡ ಅಂತ ಕೆಲವರು ಕೃಷಿಯತ್ತ ಮುಖ ಮಾಡಿದ್ದರೆ, ಇನ್ನೂ ಕೆಲವರು ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಇಲ್ಲೇ ಇರುತ್ತೀವಿ ಎಂದು ಹೇಳುತ್ತಿದ್ದಾರೆ.