-‘ನಾವು ನಮ್ಮ ಬದುಕು ಬಿಟ್ಟು ಬರಲ್ಲ, ಏನ್ ಬೇಕಾದ್ರು ಮಾಡಿಕೊಳ್ಳಿ’
ಚಿಕ್ಕಮಗಳೂರು: ಜಿಲ್ಲೆಯ ವೈದ್ಯರ ಕೊರೊನಾ ವರದಿ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಅವರೊಂದಿಗೆ ಸಂಪರ್ಕಕ್ಕೆ ಬಂದಿದ್ದ 800ಕ್ಕೂ ಅಧಿಕ ಜನರನ್ನು ಕ್ವಾರಂಟೈನ್ ಮಾಡಲು ಜಿಲ್ಲಾಡಳಿತ ಮುಂದಾಗಿದ್ದು, ಆದರೆ ಅಧಿಕಾರಿಗಳ ವಿರುದ್ಧ ಹಳ್ಳಿಯ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳು ಬಡವರಿಗೊಂದು, ಶ್ರೀಮಂತರಿಗೊಂದು ಕಾನೂನು ಪಾಲನೆ ಮಾಡುತ್ತಿದ್ದಾರೆ ಎಂದು ಮಲೆನಾಡಿನ ಜನ ಆರೋಪಿಸಿದ್ದಾರೆ.
Advertisement
ಜಿಲ್ಲೆಯ ಮೂಡಿಗೆರೆ ತಾಲೂಕಿನ ನಂದೀಪುರ ಗ್ರಾಮದ ಸರ್ಕಾರಿ ವೈದ್ಯರೊಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಅವರ ಸಂಪರ್ಕದಲ್ಲಿದ್ದ ಸುಮಾರು 800 ಜನರನ್ನು ಗುರುತಿಸಿರುವ ಜಿಲ್ಲಾಡಳಿತ ಎಲ್ಲರನ್ನೂ ಕ್ವಾರಂಟೈನ್ನಲ್ಲಿಡಲು ಮುಂದಾಗಿದೆ. ಆದರೆ, ತಾಲೂಕಿನ ಮಾಕೋನಹಳ್ಳಿಯಲ್ಲಿ ತಪಾಸಣೆ ನಡೆಸಿದ ತಾಲೂಕು ಅಧಿಕಾರಿಗಳು ಹಾಗೂ ವೈದ್ಯರು ಶ್ರೀಮಂತರಿಗೆ ಪರೀಕ್ಷೆ ಮಾಡಿ ಮನೆಗೆ ಕಳಿಸುತ್ತಿದ್ದಾರೆ. ಬಡವರನ್ನ ಕ್ವಾರಂಟೈನ್ ಘಟಕಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ ಎಂದು ತಾಲೂಕು ಆಡಳಿತದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
Advertisement
ಮನೆಯಲ್ಲಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ವ್ಯಾಸಂಗ ಮಾಡುತ್ತಿರುವ ಮಕ್ಕಳು ಇದ್ದಾರೆ. ಎಲ್ಲರನ್ನೂ ಕ್ವಾರಂಟೈನ್ ಘಟಕಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ. ಆದರೆ ಶ್ರೀಮಂತರ ಕೈಗೆ ಸೀಲ್ ಹಾಕಿ ಯಾಕೆ? ಮನೆಗೆ ಕಳಿಸುತ್ತಿದ್ದಾರೆಂದು ಪ್ರಶ್ನಿಸಿದ್ದಾರೆ. ಈ ದೇಶದಲ್ಲಿ ಶ್ರೀಮಂತರಿಗೊಂದು ಕಾನೂನು, ಬಡವರಿಗೊಂದು ಕಾನೂನು ಎಂದು ಪ್ರಶ್ನಿಸಿದ್ದಾರೆ. ಕೊರೊನಾ ಎಲ್ಲರಿಗೂ ಬರುತ್ತೆ. ಬಡವರು-ಶ್ರೀಮಂತರೆಂದು ಅದು ಭೇದ-ಭಾವ ಮಾಡಲ್ಲ. ಆದರೆ ನೀವು ಏಕೆ ಭೇದಭಾವ ಮಾಡುತ್ತಿದ್ದೀರಿ ಎಂದು ಗರಂ ಆಗಮಿಸಿದ್ದಾರೆ.
Advertisement
Advertisement
ಗ್ರಾಮೀಣ ಭಾಗದ ಜನ ನಾವು, ಕ್ವಾರಂಟೈನ್ಗೆ ಬರಲ್ಲ. ಏನ್ ಬೇಕಾದ್ರು ಮಾಡಿಕೊಳ್ಳಿ ಎಂದು ತಾಲೂಕು ಆಡಳಿತಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕ್ವಾರಂಟೈನ್ ಮಾಡಬೇಕು ಎಂದರೇ ಎತ್ತಾಕ್ಕೊಂಡ್ ಹೋಗಿ. ನಾವು ಎಲ್ಲೂ ಬರಲ್ಲ. ನಾವು ತೋಟದಲ್ಲಿ ಒಂದು ಗುಡಿಸಲು ಕಟ್ಟಿಕೊಂಡು ಇರುತ್ತೇವೆ. ನಮ್ಮ ಬದುಕನ್ನು ಬಿಟ್ಟು ಬರುವುದಿಲ್ಲ ಎಂದಿದ್ದಾರೆ. ಕ್ವಾರಂಟೈನ್ ಘಟಕಕ್ಕೆ ಬಾರದ ಜನರನ್ನು ಪೊಲೀಸರ ಬಲಪ್ರಯೋಗದ ಮೂಲಕ ಕರೆದುಕೊಂಡು ಹೋಗ್ತಿದ್ದಾರೆಂದು ಅಧಿಕಾರಿಗಳ ವಿರುದ್ಧ ಸ್ಥಳೀಯರು ಆರೋಪಿಸಿದ್ದಾರೆ.