-ಉಪಹಾರ, ಹಣ್ಣು ವಿತರಣೆ
ಕಾರವಾರ: ಇದು ಬಡ ಮಕ್ಕಳ ಹಸಿವಿಗೆ ತುತ್ತು ನೀಡಿದ ಮಾದರಿ ಶಿಕ್ಷಕರ ಕಥೆ. ಪಾಠದ ಜೊತೆಗೆ ಬೆಳಗ್ಗೆ ಹಸಿವಿನಿಂದ ಶಾಲೆಗೆ ಬರುವ ಮಕ್ಕಳಿಗೆ ತಮ್ಮ ಸ್ವಂತ ಹಣದಲ್ಲಿಯೇ ಬೆಳಗಿನ ಉಪಹಾರದ ವ್ಯವಸ್ಥೆಯನ್ನ ಮಾಡಿದ್ದಾರೆ.
ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ಪಟ್ಟಣದ ಗಣಪತಿಗಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ರಾಮಚಂದ್ರ ನಾಯ್ಕ್ ಬಡ ಮಕ್ಕಳಿಗಾಗಿ ಉಪಹಾರ ಆರಂಭಿಸಿದ್ದಾರೆ. ಈ ಶಾಲೆಗೆ ಬರುವ ಮಕ್ಕಳು ಬಡ ಕುಟುಂಬದವರು. ವಿದ್ಯಾರ್ಥಿಗಳು ಬೆಳಗ್ಗೆ ಉಪಹಾರ ಸೇವಿಸದೇ ಬರುತ್ತಿರೋದು ರಾಮಚಂದ್ರ ಅವರ ಗಮನಕ್ಕೆ ಬಂದಿದೆ. ಪೊಷಕರನ್ನು ಕರೆದು ತಿಳಿ ಹೇಳಿದರೂ ಹಲವು ಮಕ್ಕಳು ಹಸಿವಿನಿಂದಲೇ ಶಾಲೆಗೆ ಬರುತ್ತಿದ್ದರು. ಇದನ್ನು ಅರಿತ ರಾಮಚಂದ್ರ ನಾಯ್ಕ್, ಸರ್ಕಾರ ಮಧ್ಯಾಹ್ನ ನೀಡುವ ಬಿಸಿಯೂಟದ ಜೊತೆಗೆ ತಮ್ಮ ಹಣದ ಮೂಲಕ ಬೆಳಗಿನ ಉಪಹಾರ ಸಹ ಪ್ರಾರಂಭಿಸಿದರು.
Advertisement
Advertisement
ರಾಮಚಂದ್ರ ಗುರುಗಳ ಕಾರ್ಯ ನೋಡಿ ಒಂದಿಷ್ಟು ದಾನಿಗಳು ಸಹ ಸಹಾಯ ಹಸ್ತ ನೀಡಿದ್ದಾರೆ. ಶಾಲೆಗೆ ಬರುವ ಮಕ್ಕಳಲ್ಲಿ ಪೌಷ್ಟಿಕಾಂಶದ ಕೊರತೆಯನ್ನು ಗಮನಿಸಿದ ಅವರು, ಪ್ರತಿ ದಿನ ಮಕ್ಕಳಿಗೆ ತಮ್ಮ ಸ್ವಂತ ಹಣದಿಂದ ಹಣ್ಣುಗಳನ್ನು ಖರೀದಿಸಿ 45 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನೀಡುತ್ತಿದ್ದಾರೆ. ಕೊರೊನಾ ಬಂದಿದ್ದರಿಂದ ಶಾಲೆಗೆ ರಜೆ ನೀಡಿದ್ರೂ ಪ್ರತಿ ದಿನ ತಮ್ಮ ಬೈಕ್ ನಲ್ಲಿ ಮಕ್ಕಳ ಮನೆ ಮನೆಗೆ ತೆರಳಿ ಬಾಳೆಹಣ್ಣು ನೀಡುತ್ತಾ ಬಂದಿದ್ದಾರೆ. ವಿದ್ಯಾಗಮ ಆರಂಭಕ್ಕೂ ತಿಂಗಳ ಮುಂಚೆಯೇ ಕೋವಿಡ್ ಸುರಕ್ಷಾ ಕ್ರಮದೊಂದಿಗೆ ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಗಮನಹರಿಸಿ ಮಕ್ಕಳಿಗೆ ಮನೆ ಮನೆಗೆ ತೆರಳಿ ಪಾಠ ಮಾಡುವ ಮೂಲಕ ತಮ್ಮ ಕರ್ತವ್ಯ ಮೆರೆದಿದ್ದಾರೆ.
Advertisement
Advertisement
ಹಾಸನ ಜಿಲ್ಲೆಯಿಂದ 201 ರಲ್ಲಿ ಶಾಲೆಗೆ ವರ್ಗಾವಣೆಗೊಂಡಿದ್ದ ರಾಮಚಂದ್ರ ಗುರುಗಳು ಒಂದು ವರ್ಷದಿಂದ ಬಡ ಮಕ್ಕಳಿಗೆ ಬೆಳಗಿನ ಉಪಹಾರ ನೀಡುವ ಜೊತೆಗೆ ಹಣ್ಣುಗಳನ್ನು ಸಹ ನೀಡುತ್ತಾ ಬಂದಿದ್ದಾರೆ. ಇವರ ಈ ಕಾರ್ಯದಿಂದ ಶಾಲೆಗೆ ದಾಖಲಾಗುವ ಮಕ್ಕಳ ಸಂಖ್ಯೆ ಸಹ ಏರಿಕೆಯಾಗಿದೆ. ಇದಲ್ಲದೇ ಇವರು ಪ್ರತಿ ತಿಂಗಳ ಸಂಬಳದಲ್ಲಿ ದೇಶದ ರಕ್ಷಣಾ ನಿಧಿ, ಪ್ರಧಾನ ಮಂತ್ರಿ ಹಾಗೂ ಸಿಎಂ ನಿಧಿಗೆ ಹಣ ಪಾವತಿಮಾಡುವ ಮೂಲಕ ದೇಶಾಭಿಮಾನ ಮೆರೆಯುತ್ತಿದ್ದಾರೆ.
ಮಕ್ಕಳು ಶಾಲೆಗೆ ಬಂದಾಗ ಹಸಿವಿನಿಂದ ಹೊಟ್ಟೆ ಹಿಡಿದು ಕೂರುವುದು ಗಮನಕ್ಕೆ ಬಂತು. ಆಗ ಮಕ್ಕಳಿಗೆ ವಿಚಾರಿಸಿದಾಗ ಬೆಳಗಿನ ಉಪಹಾರ ಮಾಡದೇ ಬರುತ್ತಿರುವುದು ಗಮನಕ್ಕೆ ಬಂತು. ಪೊಷಕರನ್ನು ವಿಚಾರಿಸಿದಾಗ ಇವರ ಸಮಸ್ಯೆ ಅರಿವಿಗೆ ಬಂದು ಮಕ್ಕಳು ಹಸಿವಿನಿಂದ ಇರಬಾರದು ಎಂಬ ಕಾರಣಕ್ಕೆ ನನ್ನ ಸ್ವಂತ ಹಣದಿಂದ ಬೆಳಗಿನ ಉಪಹಾರ ಪ್ರಾರಂಭಿಸಿದೆ. ನಮ್ಮ ಶಾಲೆಯ ಮಕ್ಕಳಲ್ಲದೇ ಅಂಗನವಾಡಿ ಹಾಗೂ ಇತರೆ ಮಕ್ಕಳೂ ಇಲ್ಲಿ ಬಂದು ಉಪಹಾರ ಸೇವಿಸುತ್ತಾರೆ. ಅಪೌಷ್ಟಿಕತೆ ನೀಗಿಸಲು ಹಣ್ಣುಗಳನ್ನು ನೀಡುತ್ತಿದ್ದೇನೆ ಎಂದು ಶಿಕ್ಷಕ ರಾಮಚಂದ್ರ ನಾಯ್ಕ್ ಹೇಳುತ್ತಾರೆ.
ಈ ಹಿಂದೆಯೂ ಇವರು ಕಾರ್ಯನಿರ್ವಹಿಸುತ್ತಿದ್ದ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಮುತುಗನ್ನೆ ಶಾಲೆಯಲ್ಲಿ ಸಹ ಮಕ್ಕಳ ಅಪೌಷ್ಟಿಕತೆ ನೀಗಿಸಲು ತಮ್ಮ ಸ್ವಂತ ಹಣದಿಂದ ಹಣ್ಣುಗಳನ್ನು ನೀಡುತ್ತಿದ್ದರು. ಇಲ್ಲಿಯೂ ಸಹ ಬಡ ಮಕ್ಕಳ ಸಮಸ್ಯೆ ಅರಿತು ಬೆಳಗಿನ ಉಪಹಾರ ಹಾಗೂ ಹಣ್ಣುಗಳನ್ನು ನೀಡುವ ಮೂಲಕ ಬಡ ಮಕ್ಕಳ ಜೊತೆ ಇಲ್ಲಿನ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.