– 3 ವರ್ಷಕ್ಕೊಮ್ಮೆ ಒಂದೊಂದು ರಾಜಧಾನಿಗೆ ಎಂಟ್ರಿ
– ಇರಾನಿ, ಬವೇರಿಯಾ ಅಲ್ಲ, ಉತ್ತರ ಪ್ರದೇಶದ ಶಾಮ್ಲಿ ಗ್ಯಾಂಗ್
ಬೆಂಗಳೂರು: ಮೂರು ವರ್ಷಕ್ಕೊಮ್ಮೆ ಒಂದೊಂದು ರಾಜಧಾನಿಗೆ ಎಂಟ್ರಿ ಕೊಟ್ಟು ಈ ಗ್ಯಾಂಗ್ ಸರಗಳ್ಳತನ ಮಾಡುತ್ತದೆ. ಫ್ಲೈಟ್ ನಲ್ಲಿ ಬಂದು ಕಳ್ಳತನ ಮಾಡಿ ಮರಳಿ ರೈಲಿನಲ್ಲಿ ಈ ಗ್ಯಾಂಗ್ ತೆರಳುತ್ತಿತ್ತು. ಈ ಮೂಲಕ ಫುಲ್ ಐಷಾರಾಮಿ ಜೀವನ ನಡೆಸುತ್ತಿದ್ದರು. ಪೊಲೀಸರೂ ಎಷ್ಟೇ ಪ್ರಯತ್ನಿಸಿದರೂ ಈ ಗ್ಯಾಂಗ್ ಸಿಕ್ಕಿರಲಿಲ್ಲ. ಇದೀಗ ಪೊಲೀಸರು ಕೊನೆಗೂ ಉತ್ತರ ಪ್ರದೇಶದಲ್ಲಿ ಬಂಧಿಸಿದ್ದಾರೆ.
Advertisement
ಬ್ಲ್ಯಾಕ್ ಪಲ್ಸರ್ ನಲ್ಲಿ ಬಂದಿದ್ದ ಖದೀಮರನ್ನು ಕಡೆಗೂ ಉತ್ತರ ಪ್ರದೇಶದಲ್ಲಿ ಬಂಧಿಸಲಾಗಿದೆ. ಅರ್ಜುನ್ ಕುಮಾರ್ ಮತ್ತು ರಾಥೋಡ್ ಬಂಧಿತ ಆರೋಪಿಗಳು. ಕೆಜಿಗಟ್ಟಲೆ ಚಿನ್ನಾಭರಣ ಕದ್ದು ಊರಲ್ಲಿ ಮಾರಾಟ ಮಾಡಿ ಮನೆಗೆ ವಾಷಿಂಗ್ ಮಷೀನ್, ಫ್ರಿಡ್ಜ್ ಸೇರಿ ಗೃಹ ಉಪಯೋಗಿ ವಸ್ತುಗಳನ್ನ ತಂದಿದ್ದರು. ಉಳಿದ ಹಣದಲ್ಲಿ ದಿಲ್ದಾರ್ ಜೀವನ ನಡೆಸುತ್ತಿದ್ದರು.
Advertisement
ಬೆಂಗಳೂರು ಗ್ರಾಮಾಂತರ ಪೊಲೀಸರ ನಿದ್ದೆಗೆಡಿಸಿದ್ದ ಐನಾತಿಗಳು ಕೊನೆಗೂ ಬಲೆಗೆ ಬಿದ್ದಿದ್ದಾರೆ. ಬರೋಬ್ಬರಿ 19 ಕಡೆ ಸರಗಳ್ಳತನ ಮಾಡಿ ಪೊಲೀಸರಿಗೆ ಈ ಗ್ಯಾಂಗ್ ಚೆಳ್ಳೆಹಣ್ಣು ತಿನ್ನಿಸಿತ್ತು. ಇದು ಇರಾನಿ, ಬವೇರಿಯಾ ಗ್ಯಾಂಗ್ ಅಲ್ಲ, ಬದಲಿಗೆ ಇದು ಉತ್ತರ ಪ್ರದೇಶದ ಶಾಮ್ಲಿ ಗ್ಯಾಂಗ್. ಉತ್ತರ ಪ್ರದೇಶ, ಪಂಜಾಬ್ ನಲ್ಲಿ ಈ ಶಾಮ್ಲಿ ಗ್ಯಾಂಗ್ನದ್ದೇ ಹವಾ. ಇಡೀ ಊರಿಗೆ ಊರೇ ಕಳ್ಳತನದ ಕಸಬು. ಪೊಲೀಸರ ಚಲನವಲನ ಅಬ್ಸರ್ವ್ ಮಾಡಿ ಈ ಗ್ಯಾಂಗ್ ಸರಗಳ್ಳತನ ಮಾಡುತ್ತಿತ್ತು.
Advertisement
Advertisement
ಜೂನ್ 30ರಂದು ಸಿಎಂ ಕಾರ್ಯಕ್ರಮ, ಸಿಎಂ ಕಾರ್ಯಕ್ರಮದ ಬಂದೋಬಸ್ತ್ ನಲ್ಲಿ ಪೊಲೀಸರು ಬ್ಯುಸಿಯಾಗಿದ್ದರು. ಈ ಸಮಯವನ್ನೇ ಬಳಸಿಕೊಂಡು ಹೊರವಲಯದಲ್ಲಿ ಒಂದೇ ದಿನ 19 ಕಡೆ ಸರಗಳ್ಳತನ ಮಾಡಿದ್ದರು. ಸರ್ಜಾಪುರ, ಅನುಗೊಂಡನಹಳ್ಳಿ, ಸೂಲಿಬೆಲೆ, ತಿರುಮಲಶೆಟ್ಟಿಹಳ್ಳಿ, ಹೊಸಕೋಟೆ, ದೇವನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳತನ ಮಾಡಿದ್ದರು.
ಕಳೆದ ಮೂರು ವರ್ಷಗಳ ಹಿಂದೆ ತಮಿಳುನಾಡಿನಲ್ಲಿ ಒಂದೇ ದಿನ ಕೆಜಿಗಟ್ಟಲೆ ಚಿನ್ನಾಭರಣ ಕಳ್ಳತನ ಮಾಡಿದ್ದರು. ಇದಕ್ಕೂ ಮೊದಲು ರಾಜಾಜಿನಗರ ಹಾಗೂ ಚಂದ್ರಾ ಲೇಔಟ್ ನಲ್ಲಿ ಕಳ್ಳತನ ಮಾಡಿದ್ದರು. ಒಮ್ಮೆ ಸರ ಕಳ್ಳತನ ಮಾಡಿಕೊಂಡು ಹೋದರೆ ಮತ್ತೆ ಮೂರು ವರ್ಷಕ್ಕೆ ಈ ಗ್ಯಾಂಗ್ ಎಂಟ್ರಿ ಕೊಡುತ್ತೆ. ಎಲ್ಲೇ ಹೋಗಲಿ ಫ್ಲೈಟ್ ನಲ್ಲೇ ಓಡಾಟ, ಕಳ್ಳತನದ ಬಳಿಕ ಚಿನ್ನವನ್ನು ಫ್ಲೈಟ್ ನಲ್ಲಿ ಸಾಗಿಸುವುದು ಕಷ್ಟ ಎಂದು ರೈಲಿನಲ್ಲಿ ಹೋಗುತ್ತಿದ್ದರು.
ಪ್ಲ್ಯಾನ್ ಹೇಗೆ ಮಾಡ್ತಿದ್ರು?
ಅರ್ಜುನ್ ಕುಮಾರ್ ಈ ಗ್ಯಾಂಗ್ ನ ಮಾಸ್ಟರ್ ಮೈಂಡ್ ಆಗಿದ್ದು, ಗ್ಯಾಂಗ್ ನಲ್ಲಿ ಕೇವಲ ಇಬ್ಬರಿಂದಲೇ ಕೃತ್ಯ ನಡೀತಿತ್ತು. ಸರಗಳ್ಳತನಕ್ಕೆ ಪ್ಲಾನಿಂಗ್ ಕೇಳಿದರೆ ನಿಜಕ್ಕೂ ಆಶ್ಚರ್ಯವಾಗುತ್ತೆ. ಜೂನ್ ತಿಂಗಳಲ್ಲೇ ರಾಜಧಾನಿಗೆ ಎಂಟ್ರಿ ಕೊಟ್ಟಿದ್ದ ಈ ಸರಗಳ್ಳರು, ಸರ್ಜಾಪುರದ ಬಳಿ ಬೈಕ್ ಕದ್ದು ಸ್ನೇಹಿತನೊಬ್ಬನ ರೂಮ್ ನಲ್ಲಿ ಠಿಕಾಣಿ ಹೂಡಿದ್ದರು. 220 ಪಲ್ಸರ್ ಬೈಕ್ ಕದ್ದು ನಗರದ ಹೊರವಲಯ ಪೂರ್ತಿ ರೌಂಡ್ಸ್ ಹಾಕಿದ್ದರು. ಇದೇ ಸಮಯದಲ್ಲಿ ಸ್ನೇಹಿತನ ಮೂಲಕ ಸಿಎಂ ಕಾರ್ಯಕ್ರಮ, ಪೊಲೀಸ್ ಬಂದೋಬಸ್ತ್ ಬಗ್ಗೆ ಮಾಹಿತಿ ಪಡೆದಿದ್ದರು. ಜೂನ್ ಮೂವತ್ತರಂದೇ ಬೆಳಗ್ಗೆ ಎರಡು ಹೆಲ್ಮೆಟ್ ಗಳನ್ನು ಕದ್ದು ಕಾರ್ಯಾಚರಣೆ ನಡೆಸಿದ್ದರು.
ಅರೆಸ್ಟ್ ಆಗಿದ್ದು ಹೇಗೆ?
ಮೊದಲೇ ಮ್ಯಾಪಿಂಗ್ ಮಾಡಿದ್ದ ಆರೋಪಿಗಳು, ಅದರಂತೆ ಕಾರ್ಯಾಚರಣೆಗೆ ಇಳಿದಿದ್ದರು. ಕೊನೆಗೆ ಸರಗಳ್ಳತನ ಮಾಡಿ ಸಂಜೆ ವೇಳೆಗೆ ಮತ್ತೆ ಸರ್ಜಾಪುರದ ರೂಮ್ ಗೆ ಎಂಟ್ರಿಯಾಗಿದ್ದರು. ಬಳಿಕ ಚಿನ್ನಾಭರಣ ಎತ್ತಿಕೊಂಡು ಬೈಕ್ ನ್ನು ಮಾರ್ಗಮಧ್ಯೆ ಬಿಟ್ಟು ಅಂದೇ ರಾತ್ರಿಯೇ ರೈಲಿನಲ್ಲಿ ಎಸ್ಕೇಪ್ ಆಗಿದ್ದರು. ಮೊದಲಿಗೆ ಆಶ್ರಯ ಕೊಟ್ಟವನನ್ನು ಪತ್ತೆಮಾಡಿ, ಬಳಿಕ ಪಂಜಾಬ್ ಗೆ ಕರೆದೊಯ್ದು, ವೀಡಿಯೋ ಕಾಲ್ ಮಾಡಿಸಿ, ಆರೋಪಿಗಳನ್ನು ಬಂಧಿಸಿ ಕರೆತರಲಾಗಿದೆ. ಸದ್ಯ ಆರೋಪಿಗಳಿಂದ ಕದ್ದ ಚಿನ್ನವನ್ನು ವಶಪಡಿಸಿಕೊಳ್ಳಲು ಪೊಲೀಸರು ಯತ್ನಿಸುತ್ತಿದ್ದಾರೆ.